Advertisement

ರಾವಣನೇ ಜಗತ್ತಿನ ಮೊದಲ ಪೈಲಟ್!

10:07 AM Aug 03, 2019 | mahesh |

ಕೊಲೊಂಬೋ: ಜಗತ್ತಿನ ಮೊದಲ ಪೈಲಟ್ ಯಾರು? ಈ ಪ್ರಶ್ನೆಯನ್ನು ಶ್ರೀಲಂಕಾದ ಇತಿಹಾಸಕಾರರು, ವಿಮಾನಯಾನ ತಜ್ಞರನ್ನು ಕೇಳಿದರೆ, ಅವರಿಂದ ‘ರಾವಣ’ ಎಂಬ ಉತ್ತರ ಬರುತ್ತದೆ.

Advertisement

ಹೌದು, ರಾಮಾಯಣದಲ್ಲಿ ಉಲ್ಲೇಖವಾಗಿರುವ ‘ಪುಷ್ಪಕ ವಿಮಾನದಲ್ಲಿ ಬರುವ ರಾವಣ’ನೇ ಈ ಲೋಕದಲ್ಲಿ ಮೊದಲ ಬಾರಿಗೆ ವಿಮಾನವನ್ನು ಚಲಾಯಿಸಿದವನು. ಆತ 5 ಸಾವಿರ ವರ್ಷಗಳ ಹಿಂದೆಯೇ ಭಾರತಕ್ಕೆ ವಿಮಾನದಲ್ಲಿ ಹೋಗಿ ಸುರಕ್ಷಿತವಾಗಿ ಮರಳಿದ್ದ ಎಂದು ಅಲ್ಲಿನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆ ಕಾಲದಲ್ಲಿ ವಿಮಾನವನ್ನು ಯಾವ ವಿಧಾನದ ಮೂಲಕ ಓಡಿಸಲಾಗುತಿತ್ತು ಎಂದು ಅಧ್ಯಯನ ನಡೆಸಲು ದೇಶದ ನಾಗರಿಕ ವಿಮಾನಯಾನ ಪ್ರಾಧಿಕಾರ ಮುಂದಾಗಿದೆ.

ಶ್ರೀಲಂಕಾದ ಅತಿದೊಡ್ಡ ಬಂಡಾರನಾಯಿಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಕಾತುನಾಯಕೆಯಲ್ಲಿ ನಡೆದ ನಾಗರಿಕ ವಿಮಾನಯಾನ ತಜ್ಞರು, ಇತಿಹಾಸಕಾರರು, ಪುರಾತತ್ವ ಶಾಸ್ತ್ರಜ್ಞರು, ವಿಜ್ಞಾನಿಗಳು ಹಾಗೂ ಭೂಗರ್ಭಶಾಸ್ತ್ರಜ್ಞರ ಬೃಹತ್‌ ಸಮ್ಮೇಳನದಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ.

ರಾವಣನು ತಂತ್ರಜ್ಞಾನ, ವಿಮಾನಯಾನ, ವೈದ್ಯಶಾಸ್ತ್ರ, ಸಂಗೀತದಲ್ಲಿ ಪರಿಣತನಾಗಿದ್ದ ಎಂಬ ಪ್ರತೀತಿಯೂ ಇದೆ. ಅಲ್ಲದೆ, ರಾವಣನು ತನ್ನ ಸಾಮ್ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸಲೆಂದೇ ‘ದಂಡು ಮೊನಾರಾ'(ಪುಷ್ಪಕ ವಿಮಾನ) ಎಂಬ ಹಾರುವ ಯಂತ್ರವನ್ನು ಅಭಿವೃದ್ಧಿಪಡಿಸಿದ್ದ. ಈ ಕುರಿತು ವಿಸ್ತೃತವಾದ ಅಧ್ಯಯನ ನಡೆಸಬೇಕಿದೆ ಎಂದೂ ಇವರೆಲ್ಲ ಅಭಿಪ್ರಾಯಪಟ್ಟಿದ್ದಾರೆ.

ಸೀತಾಪಹರಣ ನಡೆಸಿಲ್ಲವಂತೆ!: ರಾವಣನು ಶ್ರೀರಾಮನ ಪತ್ನಿ ಸೀತೆಯನ್ನು ಅಪಹರಿಸಿದ್ದ ಎಂಬ ಆರೋಪಗಳನ್ನೂ ಸಮ್ಮೇಳನದಲ್ಲಿ ಭಾಗವಹಿಸಿದ್ದ ಅನೇಕರು ತಳ್ಳಿಹಾಕಿದ್ದಾರೆ. ಇದು ಭಾರತೀಯರ ಕಥೆಯಾಗಿದ್ದು, ವಾಸ್ತವದಲ್ಲಿ ರಾವಣ ಒಬ್ಬ ಶ್ರೇಷ್ಠ ದೊರೆಯಾಗಿದ್ದ ಎಂದು ಅಭಿಪ್ರಾಯಪಟ್ಟಿದ್ದಾರೆ.

Advertisement

ಉಪಗ್ರಹಕ್ಕೂ ‘ರಾವಣ’ನ ಹೆಸರು: ಇತ್ತೀಚೆಗಷ್ಟೇ ಉಡಾವಣೆಯಾದ ಶ್ರೀಲಂಕಾದ ಮೊದಲ ಸ್ವದೇಶಿ ನಿರ್ಮಿತ ಉಪಗ್ರಹಕ್ಕೂ ‘ರಾವಣ’ನ ಹೆಸರನ್ನೇ ಇಡಲಾಗಿತ್ತು. ಏಪ್ರಿಲ್ 17ರಂದು ರಾವಣ -1 ಉಪಗ್ರಹವನ್ನು ವರ್ಜೀನಿಯಾದಿಂದ ಉಡಾವಣೆ ಮಾಡಲಾಗಿತ್ತು.

5 ವರ್ಷಗಳಲ್ಲಿ ಸಾಬೀತು
ಶ್ರೀಲಂಕಾದ ನಾಗರಿಕ ವಿಮಾನಯಾನ ಪ್ರಾಧಿಕಾರದ ಉಪಾಧ್ಯಕ್ಷ ಶಶಿ ದನತುಂಗೆ ಅವರೂ ರಾವಣನೇ ಮೊದಲ ಪೈಲಟ್ ಎಂಬುದಕ್ಕೆ ದನಿಗೂಡಿಸಿದ್ದಾರೆ. ವಿಮಾನವನ್ನು ಬಳಸಿಕೊಂಡು ಹಾರಾಟ ನಡೆಸಿದ ಮೊದಲ ವ್ಯಕ್ತಿ ರಾವಣ ಎನ್ನುವುದಕ್ಕೆ ನಮ್ಮಲ್ಲಿ ತಿರಸ್ಕರಿಸಲಾಗದಂಥ ಪುರಾವೆಗಳಿವೆ. ರಾಜನಾದ ರಾವಣನು ಅತ್ಯಂತ ಬುದ್ಧಿವಂತನಾಗಿದ್ದ. ಮೊದಲ ಬಾರಿಗೆ ವಿಮಾನ ಹಾರಿಸಿದವನೇ ಅವನು. ಈ ವಿಚಾರಕ್ಕೆ ಸಂಬಂಧಿಸಿ ವಿಸ್ತೃತ ಸಂಶೋಧನೆ ನಡೆಯಲೇಬೇಕು. ಮುಂದಿನ 5 ವರ್ಷಗಳಲ್ಲಿ, ನಾವಿದನ್ನು ಸತ್ಯ ಎಂದು ಸಾಬೀತುಪಡಿಸುತ್ತೇವೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next