ಮುಧೋಳ: ತಾಲೂಕಿನಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯುವ ರೈತರು ಕಬ್ಬು ಕಟಾವು ಬಳಿಕ ಅದರ ರವದಿ ವಿಲೇವಾರಿಗೆ ಕೈಗೊಳ್ಳುತ್ತಿರುವ ಅವೈಜ್ಞಾನಿಕ ಕ್ರಮದಿಂದ ಭೂಮಿಯ ಫಲವತ್ತತೆ ಕಡಿಮೆ ಆಗುವುದರೊಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಲವಾರು ಸಮಸ್ಯೆಗಳು ಎದುರಿಸುತ್ತಿದ್ದಾರೆ.
ರೈತರು ರವದಿ ಸುಡುವುದರಿಂದ ಭೂಮಿಯಲ್ಲಿರುವ ಎರೆ ಹುಳುಗಳು ಸೇರಿದಂತೆ ಕೃಷಿಗೆ ಪೂರಕ ವಾತಾವರಣ ನಿರ್ಮಿಸುವ ಸೂಕ್ಷ್ಮ ಜೀವಿಗಳು ಸಾಯುವುದರಿಂದ ಭೂಮಿಗೆ ಅವಶ್ಯವಾಗಿ ಬೇಕಾದ ಸಾವಯವ ಗೊಬ್ಬರ ಅಂಶ ಕಡಿಮೆಯಾಗುತ್ತದೆಯಲ್ಲದೇ ಭೂಮಿಯ ತೇವಾಂಶದ ಕೊರತೆಯೂ ಎದುರಾಗುತ್ತದೆ. ಕೃಷಿ ಕ್ಷೇತ್ರ ಇಂದು ಕಾರ್ಮಿಕರ ಸಮಸ್ಯೆಯನ್ನು ಎದುರಿಸುತ್ತಿದೆ. ಕಬ್ಬಿನ ರವದಿ ವೈಜ್ಞಾನಿಕ ವಿಲೇವಾರಿಗೆ ಹೆಚ್ಚು ಕಾರ್ಮಿಕರ ಅವಶ್ಯವಿರುವ ಕಾರಣ ಕೆಲ ರೈತರು ಅನಿವಾರ್ಯವಾಗಿ ರವದಿ ಸುಡುವ ಕಾರ್ಯಕ್ಕೆ ಮುಂದಾಗುತ್ತಿದ್ದು, ರವದಿ ಸುಡುವ ಕಾರ್ಯ ಶೀಘ್ರವಾಗುತ್ತದೆ ಅಲ್ಲದೇ ಕಾರ್ಮಿಕರ ಅವಶ್ಯಕತೆಯೂ ಬೀಳುವುದಿಲ್ಲ. ಹೀಗಾಗಿ ರೈತರು ಸುಡಲು ಮುಂದಾಗುತ್ತಿದ್ದಾರೆ. ರವದಿ ಸುಡುವುದರಿಂದ ಹೆಚ್ಚಿನ ಪ್ರಮಾಣದ ನೀರು ಪೋಲಾಗುತ್ತದೆ.
ಕಬ್ಬಿನ ಹೊಲದಲ್ಲಿನ ರವದಿ ಸುಟ್ಟ ಬಳಿಕ ಸೂರ್ಯನ ಕಿರಣಗಳು ನೇರವಾಗಿ ಭೂಮಿಗೇ ಬೀಳುವುದರಿಂದ ಹೊಲದಲ್ಲಿರುವ ನೀರು ಬೇಗ ಆವಿಯಾಗುತ್ತದೆ. ಒಂದು ವೇಳೆ ರವದಿಯನ್ನು ಸುಡದೆ ಹಾಗೆಯೇ ನೀರು ಹಾಯಿಸಿದರೆ ನೀರು ರವದಿ ಕೆಳಗಡೆ ಇರುವುದರಿಂದ ಭೂಮಿಯಲ್ಲಿ ಹೆಚ್ಚು ತೇವಾಂಶ ಕಾಪಾಡಿಕೊಳ್ಳಬಹುದು. ರವದಿ ಸುಡುವುದರಿಂದ ಆಗುವ ದುಷ್ಪರಿಣಾಮಗಳು ಹಾಗೂ ರವದಿಯ ವೈಜ್ಞಾನಿಕ ವಿಲೇವಾರಿ ಕುರಿತಂತೆ ಕೃಷಿ ಇಲಾಖೆಯಿಂದ ಹಲವು ಬಾರಿ ತರಬೇತಿ ಹಮ್ಮಿಕೊಂಡರೂ ಹೆಚ್ಚು ಪರಿಣಾಮಕಾರಿ ಆಗುತ್ತಿಲ್ಲ. ರೈತರು ತರಬೇತಿ ಕಾರ್ಯಾಗಾರದಲ್ಲಿ ತೋರುವ ಉತ್ಸಾಹವನ್ನು ಕೃಷಿ ಭೂಮಿಯಲ್ಲಿ ತೋರುತ್ತಿಲ್ಲ. ಕೃಷಿಯಲ್ಲಿ ಯಂತ್ರೋಪಕರಣ ಬಳಕೆಯಲ್ಲಿ ಹಿಂದುಳಿದಿರುವುದು ರವದಿ ವಿಲೇವಾರಿ ದೊಡ್ಡ ಸಮಸ್ಯೆಯಾಗಿ ಉಳಿದಿದೆ ಎನ್ನುತ್ತಾರೆ. ಅಧಿಕಾರಿಗಳು. ವಿಲೇವಾರಿಗಿವೆ ಪೂರಕ
ಮಾರ್ಗಗಳು: ಯಂತ್ರೋಪಕರಣಗಳ ಸಹಾಯದಿಂದ ಕಬ್ಬಿನ ರವದಿ ವಿಲೇವಾರಿಯನ್ನು ಸರಳವಾಗಿ ಮಾಡಬಹುದು. ರೋಟರ್ ಹೊಡೆದು ರವದಿಯನ್ನು ಪುಡಿ ಮಾಡಿ ಅದರಲ್ಲೇ ನೀರು ಹಾಯಿಸುವುದರಿಂದ ನೀರಿನ ಉಳಿತಾಯದೊಂದಿಗೆರವದಿ ವಿಲೇವಾರಿ ಕಾರ್ಯವನ್ನೂ ಸರಳವಾಗಿ ನಿಭಾಯಿಸಬಹುದು. ಇದರ ಹೊರತಾಗಿ ಬೇಲರ್ ಎಂಬ ಯಂತ್ರದ ಮೂಲಕವೂ ರವದಿಯನ್ನು ಚೌಕಾಕಾರದಲ್ಲಿ ಕಟ್ಟಿ ಒಂದು ದೊಡ್ಡ ತಗ್ಗಿನಲ್ಲಿ ಸಂಗ್ರಹಿಸಿ ಅದಕ್ಕೆ ನೀರುಣಿಸುವ ಮೂಲಕ ಸಾವಯವ ಗೊಬ್ಬರ ತಯಾರಿಸಬಹುದು. ಅಲ್ಲದೇ ಈ ರೀತಿ ಕಟ್ಟಿದ ರವದಿಯ ಮಾರಾಟವನ್ನೂ ಮಾಡಬಹುದು.
-ಗೋವಿಂದಪ್ಪ ತಳವಾರ