ಶಿರಸಿ: ಜಿಲ್ಲೆಯ ಪ್ರತಿಭಾವಂತ ಗಾಯಕ, ತರಬೇತಿದಾರ ಶಿರಸಿ ರತ್ನಾಕರ ಅವರಿಗೆ ಬೆಂಗಳೂರಿನ ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ನೀಡುವ ಕನ್ನಡ ನಿತ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ.
ಟ್ರಸ್ಟನ ಅಧ್ಯಕ್ಷ ಪ್ರಸಿದ್ದ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಈ ವಿಷಯ ತಿಳಿಸಿದ್ದು, ಸಾಧಕರಾದ ಭದ್ರಾವತಿ ಗುರು, ಅರ್.ಎ.ಎಸ್ ಪಾಟೀಲ್ ಅವರಿಗೆ ಕೂಡ ಪ್ರಶಸ್ತಿಪ್ರಕಟಿಸಲಾಗಿದೆ.
ಗಾಯಕ, ಸಂಘಟಕ, ಕೃಷಿಕ, ಲೇಖಕ ಶಿರಸಿ ರತ್ನಾಕರ್ ಬಹುಮುಖ ಪ್ರತಿಭೆಯ ಯುವಕನಾಗಿದ್ದು, ಬಡ ರೈತ ಕುಟುಂಬದ ನೇತ್ರಾವತಿ ಮತ್ತು ಗಣಪತಿ ನಾಯ್ಕ ಇವರ ಪುತ್ರ. ದಶಕಗಳಿಂದ ಸಂಗೀತ ಸಾಹಿತ್ಯ ಸಂಘಟನೆ ಮೂಲಕ ಕದಂಬ ಕಲಾ ವೇದಿಕೆ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಸುಗಮ ಸಂಗೀತ ಪರಿಷತ್ ಉತ್ತರ ಕನ್ನಡ ಜಿಲ್ಲೆಯ ಅಧ್ಯಕ್ಷರಾಗಿ, ಶಿರಸಿ ಕರೋಕೆ ಸ್ಟುಡಿಯೋದ ಸಂಸ್ಥಾಪಕರಾಗಿ ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಸಂಘಟಿಸಿ ಅನೇಕ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಾರೆ ಎಂಬುದು ವಿಶೇಷ.
ಹಳ್ಳಿಯಲ್ಲೊಂದು ಕನ್ನಡ ಹಬ್ಬ ,ಗೀತೊತ್ಸವ,ಸುಗಮ ಸಂಗೀತ ರಾಜ್ಯ ಸಮ್ಮೇಳನ , ಮಧುರ ಮಧುರವಿ ಮಂಜುಳ ಗಾನ ವಸಂತೋತ್ಸವ, ನಿತ್ಯೋತ್ಸವ, ಎಂದೆಂದಿಗು ನೀ ಕನ್ನಡವಾಗಿರು, ಕದಂಬ ಕೋಗಿಲೆ ಇವು ಇವರ ಸಂಘಟನೆಯ ಪ್ರಮುಖ ಕಾರ್ಯಕ್ರಮಗಳಾಗಿವೆ. ಏಕ ಕಾಲಕ್ಕೆ ಸಹಸ್ರ ಕಂಠ ಗಾಯನ ಹಾಗೂ ಮಾತಾಡ್ ಮಾತಾಡ್ ಕನ್ನಡ ರಾಜ್ಯೋತ್ಸವದ ಲಕ್ಷ ಕಂಠ ಗಾಯನದಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಹತ್ತು ಸಾವಿರ ಗಾಯಕರಿಗೆ ತರಬೇತಿಯನ್ನು ನೀಡಿ ಹಾಡಿಸಿದ್ದಾರೆ.
ಅನೇಕ ಶಾಲಾ ಕಾಲೇಜುಗಳಲ್ಲಿ ನಾಡು ನುಡಿ ಬಿಂಬಿತ ಗೀತ ಗಾಯನ ಶಿಬಿರಗಳನ್ನು ಏರ್ಪಡಿಸಿದ್ದಾರೆ. ಶಿರಸಿ ಕರೋಕೆ ಕೋಚಿಂಗ್ ಸೆಂಟರ್ ಮೂಲಕ ತೆರೆ ಮರೆಯ ಗಾಯಕರಿಗೆ ಗಾಯನ , ರೆಕಾರ್ಡಿಂಗ್ , ಹಿಂದೂಸ್ಥಾನಿ , ಕೀಬೋರ್ಡ್, ಹಾಗೂ ಗಿಟಾರ್ ತರಗತಿಗಳನ್ನು ನಡೆಸುತ್ತಿದ್ದಾರೆ. ರತ್ನಾಕರ್ ಈಗಾಗಲೇ ಒಂದು ಕವನ ಸಂಕಲನವನ್ನು ಹೊರತಂದಿದ್ದು ಸದ್ಯದಲ್ಲೇ ಉತ್ತರ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸುವಂತಹ ಗೀತೆಯ ಧ್ವನಿ ಸುರುಳಿಯನ್ನು ಹೊರತರಲಿದ್ದಾರೆ. 29ಕ್ಕೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.