ಸಿನಿಮಾಸಕ್ತ ಅನಿವಾಸಿ ಕನ್ನಡಿಗರ ಪರಿಶ್ರಮದಿಂದ ಮೂಡಿಬರುತ್ತಿರುವ “ರತ್ನಮಂಜರಿ’ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗಿದೆ. ಸದ್ಯ ತನ್ನೆಲ್ಲಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ “ರತ್ನಮಂಜರಿ’ ಚಿತ್ರತಂಡ ಇತ್ತೀಚೆಗೆ ತನ್ನ ಟ್ರೇಲರ್‌ನ್ನು ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ. ಇದೇ ವೇಳೆ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, “ರತ್ನಮಂಜರಿ’ ಚಿತ್ರದ ವಿಶೇಷತೆಗಳು ಮತ್ತು ಚಿತ್ರ ಸಾಗಿ ಬಂದ ರೀತಿಯನ್ನು ತೆರೆದಿಟ್ಟಿತು. ಕೆಲ ವರ್ಷಗಳ ಹಿಂದೆ ವಿದೇಶದಲ್ಲಿ ನಡೆದ ಭಾರತೀಯ ವ್ಯಕ್ತಿಯ ಕೊಲೆ ಮತ್ತು ಅದರ ಸುತ್ತ ನಡೆಯುವ ಕೆಲವು ಘಟನೆಗಳನ್ನು ಆಧರಿಸಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆಯಂತೆ. ಚಿತ್ರದ ಬಹುಭಾಗ ವಿದೇಶದಲ್ಲಿ ನಡೆದರೆ, ಉಳಿದ ಕೆಲ ಭಾಗ ಮಡಿಕೇರಿ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯಲಿದೆ.
ಚಿತ್ರದಲ್ಲಿ ಯಾರು “”ರತ್ನ ಮಂಜರಿ’ ಅನ್ನುವುದೇ ಒಂದು ಸಸ್ಪೆನ್ಸ್. ಇದು ದೆವ್ವ, ದೇವರು, ಬುದ್ಧಿವಂತಿಕೆಯ ಸುತ್ತ ನಡೆಯುತ್ತದೆ. ನಾಯಕ ತನ್ನ ಪೋಟೋಗ್ರಾಫಿಕ್ ಮೆಮೋರಿಯ ಮೂಲಕ ಹೇಗೆಲ್ಲ ಸಮಸ್ಯೆಯನ್ನು ಭೇದಿಸುತ್ತಾನೆ ಎನ್ನುವುದೇ ಈ ಚಿತ್ರ’ ಎನ್ನುತ್ತಾರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ನಿರ್ದೇಶಕ ಪ್ರಸಿದ್ಧ್.
ಈ ಹಿಂದೆ “ಪುನರಪಿ’, “ಮನೋರಥ’ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದ ರಾಜ್ ಚರಣ್ ಈ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿದ ರಾಜ್ ಚರಣ್, “ಇದು ಪ್ರೇಕ್ಷಕರಿಗೆ ವಿಭಿನ್ನ ಅನುಭವ ಕೊಡುವ ಚಿತ್ರ. ತಾಂತ್ರಿಕವಾಗಿ ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಅವೆಂಜರ್, ಸ್ಪೈಡರ್ ಮ್ಯಾನ್ ಚಿತ್ರಗಳಿಗೆ ಮಾಸ್ಕ್ ವಿನ್ಯಾಸ ಮಾಡಿದ್ದ ತಂಡವೇ ಈ ಚಿತ್ರಕ್ಕೂ ಮಾಸ್ಕ್ಗಳನ್ನು ವಿನ್ಯಾಸ ಮಾಡಿ ಕೊಟ್ಟಿದೆ. ಈ ಚಿತ್ರದಲ್ಲಿ ಮಾಸ್ಕ್ ಕೂಡ ಒಂದು ಪ್ರಮುಖ ಪಾತ್ರ ವಹಿಸಿದೆ’ ಎಂದು ಹೇಳಿಕೊಂಡರು.
ಇನ್ನು ಚಿತ್ರದಲ್ಲಿ ನಾಯಕಿ ಅಖೀಲ ಪ್ರಕಾಶ್, ಎನ್‌ಆರ್‌ಐ ಇಂಡೋ ವೆಸ್ಟರ್ನ್ ಫ್ಯಾಷನ್ ಡಿಸೈನರ್ ಆಗಿ ಪಾತ್ರ ನಿರ್ವಹಿಸಿರುವುದಾಗಿ ಹಾಗೂ ಇನ್ನೊಬ್ಬ ನಟಿ ಪಲ್ಲವಿ ರಾಜು, ಮನೆ ಕೆಲಸದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.
ಸದ್ಯ “ರತ್ನಮಂಜರಿ’ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಹರ್ಷವರ್ಧನ್ ರಾಜ್ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಪ್ರೀತಮ್ ತೆಗ್ಗಿನಮನೆ ಚಿತ್ರಕ್ಕೆ ಛಾಯಾಗ್ರಹಣ ಕಾರ್ಯ ನಿರ್ವಹಿಸಿದ್ದಾರೆ. ಅನಿವಾಸಿ ಕನ್ನಡಿಗರಾದ ಸಂದೀಪ್ ಕುಮಾರ್.ಎಸ್, ನಟರಾಜ್ ಹಳೇಬೀಡು ಮತ್ತಿತರರು ಜಂಟಿಯಾಗಿ “ರತ್ನಮಂಜರಿ’ ಚಿತ್ರವನ್ನು ನಿರ್ಮಿಸಿದ್ದಾರೆ. ಸದ್ಯ ಸೆನ್ಸಾರ್ ಮುಂದಿರುವ “ರತ್ನಮಂಜರಿ’ ಚಿತ್ರದ ಆಡಿಯೋ ಏಪ್ರಿಲ್ ಅಂತ್ಯಕ್ಕೆ ಬಿಡುಗಡೆಯಾಗಲಿದ್ದು, ಮೇ ತಿಂಗಳ ಅಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.