ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಕಡೆ ಮಳೆಯಾಗುತ್ತಿದ್ದರೂ ತುಂಬೆ ಡ್ಯಾಂನ ನೀರಿನ ಒಳಹರಿವು ಹೆಚ್ಚಾಗಿಲ್ಲ. ತುಂಬೆಯಲ್ಲಿ ನೀರಿನ ಪ್ರಮಾಣ ಈಗ ಮತ್ತಷ್ಟು ಕಡಿಮೆಯಾಗಿದ್ದು, ಎರಡು ದಿನಗಳಿಂದ ರೇಷನಿಂಗ್ ವ್ಯವಸ್ಥೆಯಡಿ ಸ್ಥಗಿತಗೊಂಡಿದ್ದ ನೀರು ಸರಬರಾಜು ಗುರುವಾರ ಬೆಳಗ್ಗಿನಿಂದ ಮತ್ತೆ ಪ್ರಾರಂಭಗೊಳ್ಳುತ್ತದೆ.
ಮೇ 9ರ ಬೆಳಗ್ಗೆ 6 ಗಂಟೆಯಿಂದ ಮೇ 13ರ ಬೆಳಗ್ಗೆ 6 ಗಂಟೆಯವರೆಗೆ ಅಂದರೆ 96 ತಾಸು ನೀರು ಸರಬರಾಜು ಆಗಲಿದೆ.
ಮೇ 8ರಂದು ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ 4.27 ಮೀಟರ್ ಇದ್ದು, ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕಡಿಮೆಯಾಗುತ್ತಲೇ ಇದೆ. ಅದರಲ್ಲಿಯೂ ರೇಷನಿಂಗ್ ಮಾಡಿ, ಪಂಪಿಂಗ್ ಮಾಡುವ ದಿನ (ಕಳೆದ ಸೋಮವಾರ) ಸುಮಾರು 10 ಸೆಂ.ಮೀ.ನಷ್ಟು ನೀರು ಕಡಿಮೆಯಾಗಿತ್ತು.
ಎತ್ತರ ಪ್ರದೇಶಗಳಲ್ಲಿ ನೀರಿನ ಹಂಚಿಕೆಯಲ್ಲಿ ವ್ಯತ್ಯಯ ಕಳೆದೆರಡು ದಿನಗಳಲ್ಲಿ ನೀರು ರೇಷನಿಂಗ್ ಹಿನ್ನೆಲೆಯಲ್ಲಿ ನಗರದ ಕೆಲವೆಡೆ ನೀರಿನ ಸಮಸ್ಯೆ ಎದುರಾಗಿತ್ತು. ಆದರೂ ಬಹುತೇಕ ಮನೆ ಮಂದಿ ನೀರಿನ ಸಂಗ್ರಹ ಮಾಡಿದ್ದ ಹಿನ್ನೆಲೆಯಲ್ಲಿ ದೊಡ್ಡ ಸಮಸ್ಯೆ ಎದುರಾಗಲಿಲ್ಲ. ಆದರೆ, ನೀರು ಬರುವ ಸಂದರ್ಭ ಬಹುತೇಕ ಭಾಗಗಳಿಗೆ ನೀರು ಸರಬರಾಜು ಸಾಂಗವಾಗಿ ಆಗದೆ ಕೆಲವೆಡೆ ನೀರಿಗಾಗಿ ಹಾಹಾಕಾರವೂ ಇದೆ. ಎತ್ತರ ಪ್ರದೇಶ ಹಾಗೂ ಪೈಪ್‌ಗ್ಳಲ್ಲಿ ಏರ್‌ಲಾಕ್ ಆಗಿ ನೀರಿನ ಸಮರ್ಪಕ ಹಂಚಿಕೆಯಲ್ಲಿ ವ್ಯತ್ಯಾಸವಾಗುತ್ತಿದೆ.
ಗುರುವಾರ ಬೆಳಗ್ಗೆ ನೀರು ಸರಬರಾಜು ಮಾಡುವ ನಿಯಮ ಇದ್ದರೂ ಕೂಡ ಬುಧವಾರ ರಾತ್ರಿಯಿಂದಲೇ ತುಂಬೆ ಡ್ಯಾಂನಲ್ಲಿ ಪಂಪಿಂಗ್ ಶುರು ಮಾಡಲಾಗುತ್ತದೆ. ನಗರದ ಎಲ್ಲ ಟ್ಯಾಂಕ್ ಸಹಿತ ನೀರು ಸಂಗ್ರಹದ ಸ್ಥಾವರಕ್ಕೆ ನೀರನ್ನು ಹರಿಸಲಾಗುತ್ತದೆ. ಅಲ್ಲಿಂದ ಬೆಳಗ್ಗೆ 6-7ರ ಸುಮಾರಿಗೆ ನೀರು ಬಿಡಲಾಗುತ್ತದೆ. ಆದರೆ, ಕೆಲವು ಕಡೆಗಳಲ್ಲಿ ತಾಂತ್ರಿಕ ಸಮಸ್ಯೆಗಳು ಇರುವ ಹಿನ್ನೆಲೆಯಲ್ಲಿ ನಗರದ ಬಹುತೇಕ ಭಾಗಗಳಿಗೆ ಸಮರ್ಪಕವಾಗಿ ನೀರು ಬರಲು ಬೆಳಗ್ಗೆ 10 ಗಂಟೆ ಕಳೆಯಲಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.
ಫರಂಗಿಪೇಟೆ ವ್ಯಾಪ್ತಿಯಲ್ಲಿ ಬುಧವಾರ ಕಾರ್ಯಾಚರಣೆಗೆ ಅಧಿಕಾರಿಗಳು ಆಗಮಿಸಿದಾಗ ಸ್ಥಳೀಯರು ಪ್ರತಿಭಟಿಸಿದ ಘಟನೆಯೂ ನಡೆಯಿತು. ಪೊಲೀಸ್ ಭದ್ರತೆ ಮಧ್ಯೆಯೂ ಕಾರ್ಯಾಚರಣೆ ನಡೆಸಿದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆಯೇ ಕೆಲವು ಅಕ್ರಮ ನೀರಿನ ಸಂಪರ್ಕವನ್ನು ತೆರವು ಮಾಡಲಾಗಿದೆ.
ಮನಪಾ ಮುಖ್ಯ ಪೈಪ್‌ಲೈನ್‌ನಿಂದ ನೀರು ಕದಿಯುವ ಸಮಸ್ಯೆ ಬಹಳಷ್ಟು ಸಮಯದಿಂದಲೂ ಇದೆ. ಅಕ್ರಮ ಸಂಪರ್ಕವನ್ನು ಹಲವು ಬಾರಿ ತೆರವುಗೊಳಿಸಿದರೂ ಅದನ್ನು ಮತ್ತೆ ಸೇರಿಸುವ ಕೆಲಸ ಇಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಇದೀಗ ನಗರಕ್ಕೆ ನೀರಿನ ಸಮಸ್ಯೆ ಬಹುವಾಗಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಅಕ್ರಮ ನೀರಿನ ಸಂಪರ್ಕವನ್ನು ಸಂಪೂರ್ಣವಾಗಿ ತೆಗೆದುಹಾಕಲು ಜಿಲ್ಲಾಡಳಿತ ಮುಂದಾಗಿದೆ.
ಅಕ್ರಮ ನೀರಿನ ಸಂಪರ್ಕ; ತೆರವು ಮಾಡಿದಲ್ಲಿಯೇ ಮರು ಸಂಪರ್ಕ!
ತುಂಬೆಯಿಂದ ನಗರಕ್ಕೆ ಬರುವ ನೀರು ಪೂರೈಕೆ ಕೊಳವೆಗಳಿಗೆ ಕನ್ನಕೊರೆದು ಅಕ್ರಮವಾಗಿ ಹಾಕಿರುವ ನೀರಿನ ಸಂಪರ್ಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಕೆಲವು ದಿನಗಳಿಂದ ಪಾಲಿಕೆ ಅಧಿಕಾರಿಗಳು ನಡೆಸುತ್ತಿದ್ದಾರೆ. ಇದರಂತೆ, ಕಳೆದ ಸೋಮವಾರ ಅಕ್ರಮ ನೀರಿನ ಸಂಪರ್ಕ ತೆರವು ಮಾಡಿದ ಸ್ಥಳಕ್ಕೆ ಬುಧವಾರ ಅಧಿಕಾರಿಗಳು ತೆರಳಿದಾಗ, ಅದರ ಪಕ್ಕದಲ್ಲಿಯೇ ಮತ್ತೂಂದು ಅಕ್ರಮ ಸಂಪರ್ಕವಿರುವ ಬಗ್ಗೆ ಗೊತ್ತಾಗಿದೆ.