Advertisement
ಸದ್ಯ ತುಂಬೆ ಡ್ಯಾಂನಲ್ಲಿ ನೀರಿನ ಒಳಹರಿವು ಉತ್ತಮವಾಗಿದ್ದು, 6 ಮೀ. ನೀರು ನಿಲುಗಡೆ ಮಾಡಿ ಹೆಚ್ಚುವರಿ ನೀರನ್ನು ಒಂದು ಗೇಟ್ ತೆರೆದು ಹೊರಗೆ ಬಿಡಲಾಗುತ್ತಿದೆ. ಫೆಬ್ರವರಿವರೆಗೂ ಒಳಹರಿವು ಇರುವ ನಿರೀಕ್ಷೆಯಿದೆ. ಇದು ಸಂಪೂರ್ಣ ನಿಂತ ಬಳಿಕ ತುಂಬೆ ಡ್ಯಾಂನ ಎಲ್ಲ ಗೇಟ್‌ಗಳನ್ನು ಬಂದ್ ಮಾಡಿ 6 ಮೀ.ನೀರು ನಿಲುಗಡೆ ಮಾಡಲಾಗುತ್ತದೆ. ಆ ವೇಳೆಗೆ ಮಳೆಯಾಗದಿದ್ದರೆ ರೇಷನಿಂಗ್ ಸಂಬಂಧಿತ ಕ್ರಮ ಕೈಗೊಳ್ಳಲಾಗುತ್ತದೆ.
Related Articles
Advertisement
2016ರ ಜನವರಿಯಲ್ಲಿಯೇ ನಗರ ಹಿಂದೆಂದೂ ಕಂಡರಿಯದ ಭೀಕರ ನೀರಿನ ಕೊರತೆ ಎದುರಿಸಿತ್ತು. ಡ್ಯಾಂನಲ್ಲಿ ನೀರಿಲ್ಲದ ಕಾರಣದಿಂದ ನಗರದಲ್ಲಿ ಟ್ಯಾಂಕರ್ ನೀರು ಬಳಸಲಾಗಿತ್ತು. ಅದೂ ಖಾಲಿಯಾದಾಗ, ಖಾಸಗಿ ಬಾವಿಗಳಿಂದ ನೀರು ತರಿಸಲಾಗಿತ್ತು. ಬಳಿಕ ಲಕ್ಯಾ ಡ್ಯಾಂನ ನೀರನ್ನು ಕೊಂಚ ಬಳಸಲಾಯಿತು. ಇದರಿಂದ ಎಚ್ಚೆತ್ತ ಪಾಲಿಕೆಯು 2017ರಲ್ಲಿ ಪ್ರತೀ 48 ಗಂಟೆ ನಿರಂತರ ನೀರು ಪೂರೈಕೆ ಮಾಡಿದರೆ, ಬಳಿಕದ 36 ಗಂಟೆ ನೀರು ಪೂರೈಕೆ ಸ್ಥಗಿತಗೊಳಿಸುವ ಮೂಲಕ ರೇಷನಿಂಗ್ ಆರಂಭಿಸಿತ್ತು. ಕೈಗಾರಿಕೆಗಳಿಗೂ ನೀರು ಕಡಿತ ಮಾಡಲಾಗಿತ್ತು. 2019ರಲ್ಲಿಯೂ ಮುನ್ನೆಚ್ಚರಿಕೆ ಕ್ರಮವಾಗಿ ಕೈಗಾರಿಕೆಗಳಿಗೆ ನೀಡುತ್ತಿರುವ ನೀರಿನ ಪ್ರಮಾಣವನ್ನು ಅರ್ಧದಷ್ಟು ಕಡಿತಗೊಳಿಸಲಾಗಿತ್ತು. 18 ಎಂಜಿಡಿ ನೀರಿನ ಪೈಕಿ 15 ಎಂಜಿಡಿಗೆ ಕಡಿತಗೊಳಿಸಲಾಗಿತ್ತು. ಬಳಿಕ 13, 10.5 ಎಂಜಿಡಿಗೆ ಇಳಿಸಲಾಗಿತ್ತು. ಕಳೆದೆರಡು ವರ್ಷ ನೀರಿನ ಸಮಸ್ಯೆ ಎದುರಾಗದಿದ್ದರೂ ಕೈಗಾರಿಕೆಗಳಿಗೆ ನೀರು ರೇಷನಿಂಗ್ ನಿಯಮ ಕೊಂಚ ಮಟ್ಟದಲ್ಲಿ ಜಾರಿಯಲ್ಲಿತ್ತು.
ಕೈಗಾರಿಕೆಗಳಿಗೆ ಎಷ್ಟು ನೀರು? :
ಮಂಗಳೂರು ನಗರಕ್ಕೆ 160 ಎಂಎಲ್‌ಡಿ (ದಿನವೊಂದಕ್ಕೆ ಮಿಲಿಯ ಲೀಟರ್) ನೀರು ಇಲ್ಲಿವರೆಗೆ ಪೂರೈಕೆಯಾಗುತ್ತದೆ. ಎಂಜಿಡಿ (ಮಿಲಿಯ ಗ್ಯಾಲನ್ಸ್) ಲೆಕ್ಕಾಚಾರದಲ್ಲಿ 160 ಎಂಎಲ್‌ಡಿ ಅಂದರೆ ಸುಮಾರು 35 ಎಂಜಿಡಿ. ತುಂಬೆ ಡ್ಯಾಂನಿಂದ ಎಂಸಿಎಫ್‌ಗೆ 2 ಎಂಜಿಡಿ ಹಾಗೂ ಎನ್‌ಎಂಪಿಟಿಗೆ 0.5 ಎಂಜಿಡಿ, ಇತರ ಕೈಗಾರಿಕೆಗಳಿಗೆ 1ಎಂಜಿಡಿ ನೀರು ಪೂರೈಕೆಯಾಗುತ್ತದೆ. ಬಂಟ್ವಾಳ ಸಮೀಪವಿರುವ ಎಎಂಆರ್ ಡ್ಯಾಂನಿಂದ ಎಂಆರ್‌ಪಿಎಲ್‌ಗೆ 6 ಎಂಜಿಡಿ ಹಾಗೂ ವಿಶೇಷ ಆರ್ಥಿಕ ವಲಯಕ್ಕೆ (ಎಸ್‌ಇಝೆಡ್) 8 ಎಂಜಿಡಿ ನೀರು ಪೂರೈಕೆಯಾಗುತ್ತದೆ. ಹೀಗೆ ಒಟ್ಟು ಸುಮಾರು 18 ಎಂಜಿಡಿಯಷ್ಟು ನೀರು ವಿವಿಧ ಕೈಗಾರಿಕೆಗಳಿಗೆ ತುಂಬೆ, ಎಎಂಆರ್ ಡ್ಯಾಂನಿಂದ ಪೂರೈಕೆಯಾಗುತ್ತದೆ.
ಕುಡಿಯುವ ನೀರಿಗೆ ಕೊರತೆಯಾಗದಂತೆ ಕ್ರಮ :
ಮಂಗಳೂರಿಗೆ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸದ್ಯ ತುಂಬೆ ಡ್ಯಾಂನಲ್ಲಿ ಒಳಹರಿವು ಉತ್ತಮವಾಗಿದೆ. ಹೀಗಾಗಿ ನೀರಿನ ಸಮಸ್ಯೆ ಈ ಬಾರಿ ಆಗಲಾರದು. ಆದರೂ ನೀರಿನ ಬಗ್ಗೆ ವಿಶೇಷ ನಿಗಾ ವಹಿಸಲಾಗುತ್ತಿದೆ. ಒಂದು ವೇಳೆ ಆವಶ್ಯಕವಾದರೆ ಕೈಗಾರಿಕೆಗಳಿಗೆ ನೀರು ರೇಷನಿಂಗ್ ಕ್ರಮ ಕೈಗೊಳ್ಳುವ ಬಗ್ಗೆ ಮುಂದಿನ ದಿನದಲ್ಲಿ ಚರ್ಚೆ ನಡೆಸಲಾಗುವುದು.-ಪ್ರೇಮಾನಂದ ಶೆಟ್ಟಿ, ಮೇಯರ್, ಮಹಾನಗರ ಪಾಲಿಕೆ
- ದಿನೇಶ್ ಇರಾ