ದೇವನಹಳ್ಳಿ: ಕೋವಿಡ್ ಹಾವಳಿಯಿಂದಾಗಿ ಶಾಲೆಗಳು ಮುಚ್ಚಿದ್ದ ಕಾರಣ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಬಿಸಿಯೂಟ ಸ್ಥಗಿತಗೊಳಿಸಲಾಗಿತ್ತು. ಅದರ ಬದಲಿಗೆ ಮೇ ವರೆಗೂ ಆಹಾರ ಧಾನ್ಯ ವಿತರಿಸಿ ನಂತರ ನಿಲ್ಲಿಸಲಾಗಿತ್ತು. ಇದೀಗ ಸರ್ಕಾರ, ಜೂನ್‌ನಿಂದ ಇಲ್ಲಿಯವರೆಗೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದ್ದ, ಬಿಸಿಯೂಟದ ಪಡಿತರವನ್ನು ವಿತರಿಸಲು ಆದೇಶ ಹೊರಡಿಸಿದೆ.
ಮಕ್ಕಳ ಹಸಿವು ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಮಧ್ಯಾಹ್ನದ ಬಿಸಿಯೂಟದ ಕಾರ್ಯಕ್ರಮವನ್ನು ಜಾರಿಗೊಳಿಸಿತ್ತು. 1 ರಿಂದ 10ನೇ ತರಗತಿಯವರೆಗೆ ಮಧ್ಯಾಹ್ನದ ಬಿಸಿಯೂಟ ವಿತರಿಸಲಾಗುತ್ತಿತ್ತು. ಬೆಳಗ್ಗೆ ವೇಳೆಯಲ್ಲಿ ಶಾಲೆಗೆ ಬರುವ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯೂ ಸ್ಥಗಿತಗೊಂಡಿದೆ. ಕೋವಿಡ್-19 ಸಮಯದಲ್ಲಿ ಶಾಲೆಗಳಿಗೆ ಶಿಕ್ಷಕರು ಹೋಗುತ್ತಿದ್ದರು. ಆದರೆ, ಬಿಸಿಯೂಟ ಮಾತ್ರ ಸ್ಥಗಿತವಾಗಿತ್ತು. ಮಕ್ಕಳು ಮಧ್ಯಾಹ್ನದ ಬಿಸಿಯೂಟದಿಂದ ವಂಚಿತರಾದರೆ,ಬಿಸಿಯೂಟ ಕೆಲಸದಿಂದ ಜೀವನ ನಡೆಸುತ್ತಿದ್ದ ಅಡುಗೆ ಮಾಡುವವರು ಮತ್ತು ಸಹಾಯಕರು ಉದ್ಯೋಗದಿಂದ ವಂಚಿತರಾಗಿದ್ದಾರೆ.
ಐದು ತಿಂಗಳ ಪಡಿತರ ವಿತರಣೆ: ಶಾಲೆ ತೆರೆಯದ ಕಾರಣ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳ ಮನೆಗಳಿಗೆ ಅವರ ಪಾಲಿನ ಅಕ್ಕಿ ಮತ್ತು ತೊಗರಿಬೇಳೆಗಳನ್ನು ಸರ್ಕಾರ ಮೇ 31ರವರೆಗೆ ವಿತರಣೆ ಮಾಡಿ ತಾತ್ಕಾಲಿಕ ತಡೆ ನೀಡಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಪಿಎಲ್ ಕುಟುಂಬಗಳಿಗೆ ಪಡಿತರ ನೀಡುತ್ತಿರುವುದರಿಂದ ಅದೇ ಕುಟುಂಬದ ಮಕ್ಕಳಿಗೆ ಶಾಲೆಯ ಪಡಿತರ ನೀಡುತ್ತಿರುವುದರಿಂದ ಒಂದೇ ಕುಟುಂಬಕ್ಕೆ ಎರಡೇರಡು ಆಹಾರ ಧಾನ್ಯ ನೀಡುವಂತೆ ಆಗುತ್ತಿತ್ತು. ಇದನ್ನು ಮನಗಂಡು ಸರ್ಕಾರ ಅಗತ್ಯವಿರುವ ಬಿಸಿಯೂಟ ಪಡಿತರ ನೀಡಿಕೆಯನ್ನು ತಡೆಹಿಡಿದಿತ್ತು. ಹೀಗಾಗಿ ಜೂನ್‌ನಿಂದ ಜಿಲ್ಲೆಯಲ್ಲಿ ಬಿಸಿಯೂಟದ ಪಡಿತರ ವಿತರಣೆ ಆಗಿಲ್ಲ. ಈಗ ಸರ್ಕಾರ ಜೂನ್‌ನಿಂದ 5 ತಿಂಗಳ ಪಡಿತರ ವಿತರಿಸುವಂತೆ ಸೂಚನೆ ನೀಡಿದೆ.
ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ 68643 ಮಕ್ಕಳಿಗೆ 3281 ಕ್ವಿಂಟಲ್ ಅಕ್ಕಿ, 1068 ಕೇಜಿಯಷ್ಟು ತೊಗರಿ ಬೇಳೆ,14378 ಲೀಟರ್ ಅಡುಗೆ ಎಣ್ಣೆ,4197 ಲೀಟರ್ ಹಾಲಿನ ಪುಡಿಯನ್ನು ನೀಡಲಾಗಿದೆ. ಜಿಲ್ಲೆಯ ಬರಪೀಡಿತ ತಾಲೂಕುಗಳಾದ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ ತಾಲೂಕುಗಳಿಗೆ ಅಕ್ಕಿ, ತೊಗರಿ ಬೇಳೆ, ಅಡುಗೆ ಎಣ್ಣೆ, ಹಾಲಿನ ಪುಡಿಗಳ ಪೊಟ್ಟಣಗಳನ್ನು ವಿತರಿಸಲಾಗುತ್ತಿತ್ತು. ಬೇಸಿಗೆ ರಜೆ ಆಧಾರಿತವಾಗಿ ದೊಡ್ಡಬಳ್ಳಾಪುರ ತಾಲೂಕಿಗೆ ಅಕ್ಕಿ ಮತ್ತು ತೊಗರಿ ಬೇಳೆ ವಿತರಿಸಲಾಗುತ್ತಿತ್ತು.
ವಿದ್ಯಾರ್ಥಿಗಳಿಗೆ ದೊರೆಯಬೇಕಾದ ಪಡಿತರ: ಶಾಲೆಗಳು ತೆರೆಯದೇ ಇದ್ದುದ್ದರಿಂದ ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳ ಪಡಿತರ ನೀಡಿಲ್ಲ. ಈಗ ಸರ್ಕಾರಘೋಷಣೆ ಮಾಡಿರುವುದರಿಂದ 5 ತಿಂಗಳ ಪಡಿತರವನ್ನು ಒಟ್ಟಾರೆಯಾಗಿ ಹಂಚಿಕೆ ಮಾಡಲು ನಿರ್ಧರಿಸಿದೆ. 1ರಿಂದ 5ನೇ ತರಗತಿಯವ ರೆಗಿನ ವಿದ್ಯಾರ್ಥಿಗಳಿಗೆ 100 ಗ್ರಾಂ ಅಕ್ಕಿ, 20 ಗ್ರಾಂತೊಗರಿ ಬೇಳೆಯುಳ್ಳ ಬಿಸಿಯೂಟ ನೀಡಲಾಗುತ್ತಿತ್ತು. 6ರಿಂದ10ನೇ ತರಗತಿ ವಿದ್ಯಾರ್ಥಿಗಳಿಗೆ150 ಗ್ರಾಂ ಅಕ್ಕಿ, 30 ಗ್ರಾಂ ತೊಗರಿಬೇಳೆ ಪ್ರಮಾಣದಲ್ಲಿ ಅನ್ನ ಸಾಂಬರ್ ನೀಡಲಾಗುತ್ತಿತ್ತು. ವಿದ್ಯಾರ್ಥಿಗಳಿಗೆಉಳಿಕೆ ಇದ್ದ ಪಡಿತರವನ್ನು ಗೋಡೌನ್‌ನಲ್ಲಿ ದಾಸ್ತಾನು ಮಾಡಲಾಗಿದೆ.
ಕೋವಿಡ್ದಿಂದ ಶಾಲೆಗಳನ್ನು ಮುಚ್ಚಿದ್ದರಿಂದ ಬಿಸಿಯೂಟ ಸ್ಥಗಿತಗೊಳಿಸಲಾಗಿತ್ತು. ಸರ್ಕಾರದ ಆದೇಶದಂತೆ ಮೇ ತಿಂಗಳವರೆಗೂ ಮಕ್ಕಳಿಗೆ ಆಹಾರ ಧಾನ್ಯವನ್ನು ವಿತರಿಸಿ, ನಂತರ ನಿಲ್ಲಿಸಲಾಗಿತ್ತು.ಯಾವ ಶಾಲೆಯಲ್ಲೂ ಬಿಸಿಯೂಟದ ದಾಸ್ತಾನು ಇಟ್ಟುಕೊಂಡಿಲ್ಲ. ಈಗ ಸರ್ಕಾರ ಆದೇಶ ನೀಡಿದೆ. ಅದರಂತೆ ಪಡಿತರ ವಿತರಣೆಗೆಕ್ರಮಕೈಗೊಂಡಿದ್ದೇವೆ.
–ಗಂಗಮಾರೇಗೌಡ, ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ
ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಬಿಸಿಯೂಟದ ಪಡಿತರವನ್ನು ವಿತರಿಸಲು ಕ್ರಮಕೈಗೊಳ್ಳಲಾಗಿದೆ. ಪಡಿತರಕೈಸೇರಿದ ತಕ್ಷಣ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುವುದು.
–ಲಕ್ಷ್ಮೀ ನಾರಾಯಣ್, ಅಧ್ಯಕ್ಷ, ಸರ್ಕಾರಿ ಶಾಲಾಭಿವೃದ್ಧಿ ಸಮಿತಿ
ಮೇ 31ರವರೆಗೂಬಿಸಿಯೂಟದಬದಲು ಅಷ್ಟೇ, ಪ್ರಮಾಣದ ಪಡಿತರವನ್ನು ವಿತರಿಸಲಾಗಿದೆ. ಜೂನ್‌ನಿಂದ ಸರ್ಕಾರ ತಡೆಹಿಡಿದಿದ್ದರಿಂದ ವಿತರಣೆ ಮಾಡಿಲ್ಲ.ಇದೀಗ ಸರ್ಕಾರ ಸೂಚಿಸಿರುವುದರಿಂದ ಮಕ್ಕಳಿಗೆ ಪಡಿತರ ವಿತರಿಸಲಾಗುತ್ತಿದೆ.
–ಎ.ಎಸ್.ಸುರೇಶ್, ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ
–ಎಸ್.ಮಹೇಶ್