Advertisement

ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ; ತನಿಖೆಗೆ ಆಗ್ರಹ

04:06 PM Dec 02, 2020 | Suhan S |

ಮುದ್ದೇಬಿಹಾಳ: ಕೋವಿಡ್ ಸಂದರ್ಭ ಕೇಂದ್ರ, ರಾಜ್ಯ ಸರ್ಕಾರ ಬಿಪಿಎಲ್‌, ಅಂತ್ಯೋದಯ ಕಾರ್ಡ್‌ಗಳಿಗೆ ನೀಡಿರುವ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎನ್ನುವ ಆರೋಪಕ್ಕೆ ಮಂಗಳವಾರ ಇಲ್ಲಿನ ಎಪಿಎಂಸಿಯಲ್ಲಿ ಸಾಕ್ಷಿ ಸಮೇತ ಪುಷ್ಠಿ ದೊರಕಿದ್ದು ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಸಾರ್ವಜನಿಕರು ತಾಲೂಕಾಡಳಿತವನ್ನು ಆಗ್ರಹಿಸಿದ್ದಾರೆ.

Advertisement

ಕೋವಿಡ್ ಮಹಾಮಾರಿ ಕಾಣಿಸಿಕೊಂಡ ನಂತರ ಏಪ್ರಿಲ್‌ ತಿಂಗಳಿನಿಂದ ಕೇಂದ್ರ, ರಾಜ್ಯ ಸರ್ಕಾರಗಳು ಬಡವರಿಗೆ ಅನುಕೂಲವಾಗಲಿ ಎಂದು ಪಡಿತರ ವಿತರಣಾ ವ್ಯವಸ್ಥೆಯಡಿ ಆಯಾ ನ್ಯಾಯಬೆಲೆ ಅಂಗಡಿಗಳ ಮುಖಾಂತರ ಅಕ್ಕಿ, ಗೋಧಿ , ಕಡಲೆಯನ್ನು ಉಚಿತವಾಗಿ ನೀಡತೊಡಗಿವೆ. ಆದರೆ ಉಚಿತವಾಗಿ ದೊರಕುವ ಅಕ್ಕಿಯನ್ನು ಪಡಿತರ ಫಲಾನುಭವಿಗಳು ಸ್ವಂತಕ್ಕೆ ಬಳಸಿಕೊಳ್ಳದೆ ಅವುಗಳನ್ನು ಕಾಳಸಂತೆಯಲ್ಲಿ ಕೆಜಿಗೆ 12 ರೂ.ನಂತೆ ಮಾರಾಟ ಮಾಡುತ್ತಿರುವಆರೋಪ ವ್ಯಾಪಕವಾಗಿ ಕೇಳಿ ಬಂದಿತ್ತು. ಆದರೆ ಕೋವಿಡ್ ಹಿನ್ನೆಲೆ ಇದನ್ನು ಯಾವುದೆ ಅಧಿಕಾರಿ ಗಂಭೀರವಾಗಿ ಪರಿಗಣಿಸಿರಲಿಲ್ಲ.

ಮಂಗಳವಾರ ಎಪಿಎಂಸಿಯ ಪ್ರವೇಶದ್ವಾರದ ಹತ್ತಿರ ಇರುವ ಡಬ್ಟಾ ಅಂಗಡಿಯೊಂದರ ಮುಂದೆ ಬಹಳಷ್ಟು ಜನರು ಅಕ್ಕಿ ತುಂಬಿದ ಪ್ಯಾಕೇಟ್‌ಗಳನ್ನು ಹಿಡಿದು ನಿಂತಿದ್ದರು. ಇವರು ಹೀಗೇಕೆ ನಿಂತಿದ್ದಾರೆ ಎಂದು ಹತ್ತಿರ ಹೋಗಿನೋಡಿದಾಗ ಗೋಲ್‌ಮಾಲ್‌ ವ್ಯವಹಾರ ಬೆಳಕಿಗೆ ಬಂದಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಪಡೆದುಕೊಳ್ಳುವ ಕಾರ್ಡ್‌ದಾರರು ಅವುಗಳನ್ನು ಆಟೋದಲ್ಲಿಟ್ಟುಕೊಂಡು ಡಬ್ಟಾ ಅಂಗಡಿ ಹತ್ತಿರ ಬರುತ್ತಾರೆ. ಅಲ್ಲಿರುವ ಕಾಳಸಂತೆವ್ಯವಹಾರದ ಏಜೆಂಟ್‌ನೋರ್ವ ಆ ಅಕ್ಕಿಯನ್ನುಕೆಜಿಗೆ 12 ರೂ.ನಂತೆ ಖರೀದಿಸುತ್ತಾನೆ ಎಂದುಅಲ್ಲಿದ್ದ ಕೆಲವರು ಹೇಳಿದ್ದು ಕಾಳಸಂತೆ ವ್ಯವಹಾರ ಸಾಬೀತು ಪಡಿಸಿದಂತಾಯಿತು. ಕಾಳಸಂತೆಕೋರ ಏಜೆಂಟರು ಹೀಗೆ ಖರೀದಿಸಿದ ಅಕ್ಕಿಯನ್ನು ತಾಳಿಕೋಟೆಗೆ ಕಳಿಸುತ್ತಾರೆ. ಅಲ್ಲಿರುವ ಮುಖ್ಯ ಏಜಂಟ್‌ನೊಬ್ಬ ಅವುಗಳನ್ನು ಲಾರಿಯಲ್ಲಿ ಲೋಡ್‌ ಮಾಡಿ ಮಹಾರಾಷ್ಟ್ರ, ಆಂಧ್ರಪ್ರದೇಶಕ್ಕೆ ರವಾನಿಸುತ್ತಾನೆ. ಆ ರಾಜ್ಯಗಳ ಅಕ್ಕಿ ಮಿಲ್‌ಗ‌ಳಲ್ಲಿ ಇವು ಪಾಲಿಶ್‌ ಆಗಿ ಮರಳಿ ಗ್ರಾಹಕರಿಗೇ ಕೆಜಿಗೆ 50-60 ರೂ.ನಂತೆ ಮಾರಾಟವಾಗುತ್ತವೆ. ರೇಷನ್‌ ಅಕ್ಕಿ ಪಾಲೀಶ್‌ ಮಾಡಿ ಹೆಚ್ಚಿನ ದರಕ್ಕೆ ಮಾರುವ ಜಾಲ ಸಕ್ರಿಯವಾಗಿರುವುದು ಇದರಿಂದ ದೃಢಪಡುತ್ತದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಏಜೆಂಟ್‌ರೊಬ್ಬರು ಹೇಳಿದ್ದು ಹಗರಣ ಬಹಿರಂಗಪಡಿಸಿದಂತಾಗಿದೆ.

ಎಪಿಎಂಸಿಯಲ್ಲಿನ ಘಟನೆ ಗಮನಕ್ಕೆ ಬಂದ ಕೂಡಲೇ ತಹಶೀಲ್ದಾರ್‌ ಜಿ.ಎಸ್‌. ಮಳಗಿ ಅವರು ಆಹಾರ ವಿಭಾಗದ ಸಿಬ್ಬಂದಿಯನ್ನು ಸ್ಥಳಕ್ಕೆ ಕಳಿಸಿ ವಿಚಾರಣೆ ನಡೆಸುವಂತೆ ಸೂಚಿಸಿದ್ದಾರೆ. ಆದರೆ ಇವರು ಸ್ಥಳಕ್ಕೆ ಬರುವುದು ತಡವಾಗಿದ್ದರಿಂದ ಪಡಿತರ ಅಕ್ಕಿ ಮಾರಲುಬಂದಿದ್ದ ಫಲಾನುಭವಿಗಳು, ಖರೀದಿಸುತ್ತಿದ್ದಏಜೆಂಟ್‌ರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಬಿಸಿ ಮುಟ್ಟಿಸಿದ್ದರೂ ನಿಲ್ಲದ ವ್ಯವಹಾರ: ಕೆಲ  ತಿಂಗಳ ಹಿಂದೆ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಹೊರ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪೊಲೀಸರು, ಆಹಾರ ಇಲಾಖೆ ಅಧಿಕಾರಿಗಳು ಹಿಡಿದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದರಲ್ಲಿ ಸಿಕ್ಕಿಹಾಕಿಕೊಂಡವರು ಇನ್ನೂ ಕೋರ್ಟ್ ಗೆ ಅಲೆದಾಡುತ್ತಿದ್ದಾರೆ. ಹೀಗಿದ್ದರೂ ಅಕ್ರಮ ಸಾಗಾಟ ನಿಯಂತ್ರಣಕ್ಕೆ ಬಂದಿಲ್ಲ ಎನ್ನುವುದು ಇಂದಿನ ಘಟನೆಯಿಂದ ದೃಢಪಟ್ಟಂತಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಅಕ್ರಮದಲ್ಲಿ ಭಾಗಿಯಾದವರನ್ನು ಮಟ್ಟ ಹಾಕಿದರೆ ಮಾತ್ರ ಗೋಲ್‌ಮಾಲ್‌ ತಡೆಗಟ್ಟಬಹುದು ಎಂದು ಕೆಲವು ಅಂತ್ಯೋದಯ ಫಲಾನುಭವಿಗಳು ಹೇಳುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next