ಭಟ್ಕಳ: ತಾಲೂಕಿನಲ್ಲಿ ಅತ್ಯಂತ ಬೃಹತ್ ಮಟ್ಟದ ಪಡಿತರ ಹಗರಣ ಬೆಳಕಿಗೆ ಬಂದಿದ್ದು, ಕಡಸಲಗದ್ದೆಯ ಖಾಸಗಿ ಕಟ್ಟಡವೊಂದರಲ್ಲಿ ಸುಮಾರು 930 ಚೀಲ ಅಕ್ಕಿ ಪತ್ತೆಯಾಗಿದೆ.
ಪಡಿತರ ವಿತರಣೆಗಾಗಿ ರಾಜ್ಯಕ್ಕೆ ಬಂದಿದ್ದ ಅಕ್ಕಿಯನ್ನು ಖಾಸಗಿ ಗೋಡೌನ್ ಒಂದರಲ್ಲಿ ದಾಸ್ತಾನು ಮಾಡಿ ಅಲ್ಲಿಂದ ಬೇರೆ ಚೀಲಕ್ಕೆ ತುಂಬಿ ಕೇರಳಕ್ಕೆ ಸಾಗಿಸುವ ಜಾಲ ಸಕ್ರಿಯವಾಗಿದೆಯೇ ಎನ್ನುವ ಸಂಶಯ ಮೂಡುತ್ತಿದ್ದು ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.
ಇದನ್ನೂ ಓದಿ: ಬ್ಯಾಟಿಂಗ್ ನಲ್ಲಿ ಕೇವಲ 12 ರನ್ ಗಳಿಸಿದರೂ ಗೆಲುವಿನ ಹೀರೋ ಆದ ಸಂಜು ಸ್ಯಾಮ್ಸನ್
ಶುಕ್ರವಾರ ರಾತ್ರಿ ಸುದ್ದಿ ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್, ಆಹಾರ ನಿರೀಕ್ಷಕ ಹಾಗೂ ಕಂದಾಯ ಸಿಬ್ಬಂದಿಗಳು ದಾಳಿ ನಡೆಸಿದ್ದು ಖಾಸಗಿ ಗೋಡೌನ್‌ನಲ್ಲಿ 960 ಚೀಲ ಅಕ್ಕಿ ಪತ್ತೆಯಾಗಿದೆ. ಚೀಲವನ್ನು ಬೇರ್ಪಡಿಸಿ ಹೊಲಿಯುವ ಯಂತ್ರ, ತೂಕದ ಯಂತ್ರ, ಖಾಲಿ ಚೀಲಗಳು ಹಾಗೂ ಇತರೆ ಸಾಮಗ್ರಿಗಳು ಕೂಡಾ ಪತ್ತೆಯಾಗಿದ್ದು ಹಗರಣದ ಮುಖ್ಯ ಆರೋಪಿಗಳು ಯಾರು ಎನ್ನುವುದನ್ನು ಇನ್ನಷ್ಟೇ ಪತ್ತೆ ಮಾಡಬೇಕಿದೆ.
ಕಳೆದ ವರ್ಷಾನುಗಟ್ಟಲೆಯಿಂದ ಈ ದಂಧೆ ನಡೆಯುತ್ತಿದ್ದು, ಈ ಹಿಂದೆ ಪುರವರ್ಗ ಹಾಗೂ ಇತರೆ ಕಡೆಗಳಲ್ಲಿ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿರುವಾಗ ದಾಳಿ ನಡೆಸಿ ವಶಪಡಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಪಡಿತರ ಅಕ್ಕಿಯನ್ನು ಇಷ್ಟೊಂದು ಪ್ರಮಾಣದಲ್ಲಿ ದಾಸ್ತಾನು ಮಾಡಲು ಪಡಿತರ ಅಂಗಡಿಯವರ ಸಹಕಾರ ಕೂಡಾ ಇದೆಯೇ ಎನ್ನುವ ಕುರಿತು ಕೂಡಾ ತನಿಖೆ ನಡೆಸಬೇಕಾಗಿದೆ. ಕಾಳ ಸಂತೆಯಲ್ಲಿ ಪಡಿತರ ಅಕ್ಕಿಯನ್ನು ಪಡೆದು ಅವುಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡುವ ಜಾಲ ಸಕ್ರಿಯವಾಗಿದ್ದು ಈ ಕುರಿತು ತನಿಖೆ ನಡೆಸಬೇಕಾಗಿದೆ.