Advertisement

ಪಡಿತರ ಅಕ್ರಮ: ಕಾನೂನು ಕ್ರಮಕ್ಕೆ ಮನವಿ

11:56 AM Oct 10, 2018 | Team Udayavani |

ಬೀದರ: ಬಡವರ ಹಾಗೂ ವಿದ್ಯಾರ್ಥಿಗಳ ಹೊಟ್ಟೆ ತುಂಬಬೇಕಾದ ಅಕ್ಕಿ, ಗೋಧಿ,  ಹಾಲಿನ ಪುಡಿ ಅಕ್ರಮ ಕಳ್ಳಸಾಗಣಿಕೆದಾರರ ಪಾಲಾಗುತ್ತಿದ್ದು, ದಂಧೆಯಲ್ಲಿ ತೊಡಗಿದವರ ವಿರುದ್ಧ ಮತ್ತು ಇದಕ್ಕೆ ಕುಮ್ಮಕ್ಕು ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಸಂಸದ ಭಗವಂತ ಖೂಬಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

Advertisement

ಒಂದು ವಾರದಿಂದ ಜಿಲ್ಲಾದ್ಯಂತ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಅಕ್ಕಿ, ಗೋಧಿ, ಹಾಲಿನ ಪುಡಿ ಪತ್ತೆಹಚ್ಚುವ ಕೆಲಸ ಮಾಡಿದ್ದು, ಅಧಿಕಾರಿಗಳ ಕಾರ್ಯಕ್ಕೆ ಬಿಜೆಪಿ ಅಭಿನಂದನೆ ಸಲ್ಲಿಸುತ್ತದೆ. ಬಡವರಿಗಾಗಿ ಕೇಂದ್ರ ಸರ್ಕಾರ ನಿಡುತ್ತಿರುವ ಅಕ್ಕಿ, ಗೋಧಿ ಮತ್ತು ಪೌಷ್ಠಿಕ ಆಹಾರ ಕಳ್ಳ ಸಂತೆಯಲ್ಲಿ ಪತ್ತೆಯಾಗುತ್ತಿವೆ. ಜಿಲ್ಲೆಯಲ್ಲಿ ಸಂಗ್ರಹಿಸಿಟ್ಟ ದಾಸ್ತಾನು ಪತ್ತೆಯಾಗುತ್ತಿರುವುದನ್ನು ನೋಡಿದರೆ ದೊಡ್ಡ ಜಾಲವೆ ಇರುವ ಶಂಕೆ ಇದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಿ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಈ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದು, ಜಿಲ್ಲೆಯ ಪ್ರಭಾವಿ ರಾಜಕಾರಣಿಗಳ ಬೆಂಬಲ ಇರುವುದರಿಂದಲೆ ಕೇವಲ ಲಾರಿ ಚಾಲಕರು, ಕ್ಲೀನರ್‌ಗಳ ಮೇಲೆ ಪ್ರಕರಣ ದಾಖಲಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ದಾಳಿ ಸಂದರ್ಭದಲ್ಲಿ ಪತ್ತೆಯಾದ ಡೈರಿಯ ಮಾಹಿತಿ ಬಹಿರಂಗ ಮಾಡಬೇಕು. ಈ ಅಕ್ರಮ ದಂಧೆಯಲ್ಲಿ ಭಾಗಿಯಾದ ಪ್ರಮುಖ ಆರೋಪಿಗಳು ಹಾಗೂ ಇದಕ್ಕೆ ಸಹಕಾರ ನೀಡಿದವರ ವಿರುದ್ಧ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಸಂಸದರ ಮನವಿಗೆ ಸ್ಪಂದಿಸಿದ ಎಸ್‌ಪಿ ಟಿ.ಶ್ರೀಧರ್‌, ಅಕ್ರಮದಲ್ಲಿ ತೊಡಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಯಾವುದೇ ಮುಲಾಜು ಇಲ್ಲದೆ ಪ್ರಕರಣದ ತನಿಖೆ ನಡೆಸಿ, ಮುಖ್ಯ ಆರೋಪಿಗಳ ವಿರುದ್ಧ ಕ್ರಮ ಕಠಿಣ ಕ್ರಮ ಜರುಗಿರುವುದಾಗಿ ತಿಳಿಸಿದ್ದಾರೆ. 

ಬಿಜೆಪಿ ಜಿಲ್ಲಾಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್‌ ಸದಸ್ಯ ರಘುನಾಥ ಮಲ್ಕಾಪುರೆ, ಮಾಜಿ ಶಾಸಕ ಸುಭಾಷ ಕಲ್ಲೂರ್‌, ಡಿ.ಕೆ. ಸಿದ್ರಾಮ, ಬಾಬುರಾವ್‌ ಕಾರಬಾರಿ, ಈಶ್ವರಸಿಂಗ್‌ ಠಾಕೂರ್‌, ಸೋಮನಾಥ ಪಾಟೀಲ, ಬಾಬುವಾಲಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next