ಕಾಪು: ಕೋವಿಡ್ ವೈರಸ್ ಜಾತಿ, ಮತ, ಪಕ್ಷಗಳೆಂಬ ಭೇಧವಿಲ್ಲದೇ ಎಲ್ಲರನ್ನೂ ಕಾಡುತ್ತಿದೆ. ಇದರಿಂದಾಗಿ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಜನ ಸಾಮಾನ್ಯ ಬದುಕು ದುಸ್ತರವಾಗಿದೆ. ಅವರ ಕುಟುಂಬಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ಉದ್ಯಮಿ, ಸಮಾಜ ಸೇವಕ ಪ್ರಭಾಕರ ಪೂಜಾರಿ ನೀಡುತ್ತಿರುವ ಸೇವೆ ಶ್ಲಾಘನೀಯವಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಹೊಟೇಲ್ ಉದ್ಯಮಿ, ಕಾಪು ಬಿಲ್ಲವರ ಸಹಾಯಕ ಸಂಘದ ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ ಅವರ ವತಿಯಿಂದ ಕಾಪು ಪಡು ಗ್ರಾಮದ ಗರಡಿ ಸುತ್ತಮುತ್ತಲಿನ ಸುಮಾರು 250 ಕುಟುಂಬಗಳಿಗೆ ಪಡಿತರ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇದನ್ನೂ ಓದಿ: ಭೀಮಾ ತೀರದಲ್ಲಿ ಚಿರತೆ ಹಾವಳಿ: ರೈತರು ಹೊಲದಲ್ಲಿ ಕಟ್ಟಿದ್ದ ಆಕಳು ಕೊಂದು ಭಕ್ಷಣೆ
ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಉದ್ಯಮಿ ಪ್ರಭಾಕರ ಪೂಜಾರಿ ಅವರು ಬೈಂದೂರು ಕ್ಷೇತ್ರದ ಕಟ್ ಬೆಲ್ತೂರು ಮತ್ತು ಕಾಪು ಕ್ಷೇತ್ರದ ಗರಡಿ ಸುತ್ತಮುತ್ತಲಿನ ಸುಮಾರು 500 ಕುಟುಂಬಗಳಿಗೆ ಪಡಿತರ ಕಿಟ್ ಗಳನ್ನು ನೀಡಲು ಮುಂದೆ ಬಂದಿರುವುದು ಸ್ವಾಗತಾರ್ಹವಾಗಿದೆ. ತನ್ನ ಉಳಿಕೆಯ ಒಂದಂಶದಲ್ಲಿ ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ಬಡವರ ನೋವಿಗೆ ಸ್ಪಂಧಿಸಲು ಬಳಸುತ್ತಿದ್ದು, ಇಂತಹ ಕೊಡುಗೆಗಳಿಂದ ನಿಜಾರ್ಥದಲ್ಲಿ ದೇವರ ಸೇವೆ ಮಾಡಿದಂತಾಗುತ್ತದೆ ಎಂದರು.
ಪಡಿತರ ಕಿಟ್ ದಾನಿ / ಉದ್ಯಮಿ ಪ್ರಭಾಕರ ಪೂಜಾರಿ, ಸಂದೀಪ್ ಪಿ. ಪೂಜಾರಿ, ಕಾಪು ಬಿಲ್ಲವ ಸಹಾಯಕ ಸಂಘದ ಅಧ್ಯಕ್ಷ ವಿಕ್ರಂ ಕಾಪು, ಕಾಪು ಪುರಸಭೆ ಮಾಜಿ ಅಧ್ಯಕ್ಷ ಅನಿಲ್ ಕುಮಾರ್, ಶ್ರೀ ಬ್ರಹ್ಮಬೈದರ್ಕಳ ಪೊಯ್ಯ ಪೊಡಿಕಲ್ಲ ಗರಡಿಯ ಅರ್ಚಕ ಜಗನ್ನಾಥ ಪೂಜಾರಿ, ಸೇವಾ ಯುವ ಸಮಿತಿಯ ಅಧ್ಯಕ್ಷ ಕೃಷ್ಣ ಬಂಗೇರ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಸಂಯೋಜಕ ಸಯ್ಯದ್ ಯಾಸಿನ್ ಹೆಮ್ಮಾಡಿ, ಎನ್.ಎಸ್.ಯು.ಐ ಜಿಲ್ಲಾ ಕಾರ್ಯದರ್ಶಿ ಸಯ್ಯದ್ ಪುರ್ಕಾನ್ ಯಾಸಿನ್, ಮಂಜು ಬೆಂಗಳೂರು, ಪ್ರಮುಖರಾದ ವಿನೋದ್ ಅಮೀನ್, ನಾಗೇಶ್ ಸುವರ್ಣ, ಸುಧಾಕರ ಸಾಲ್ಯಾನ್, ಯೋಗೀಶ್ ಕೋಟ್ಯಾನ್, ದಯಾನಂದ ಪೂಜಾರಿ, ಜೀವನ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.