Advertisement

ಲಕ್ಷ್ಮೀ ನರಸಿಂಹಸ್ವಾಮಿ ಅದ್ಧೂರಿ ರಥೋತ್ಸವ

02:56 PM Mar 10, 2020 | Suhan S |

ಹೊಳಲ್ಕೆರೆ : ಐತಿಹಾಸಿಕ ಹಿನ್ನೆಲೆ ಹೊಂದಿರುವ ತಾಲೂಕಿನ ಹೊರಕೆರೆದೇವರಪುರ ಗ್ರಾಮದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸೋಮವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿತು.

Advertisement

ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು. ಗೋವಿಂದ, ಗೋವಿಂದ, ಗೋವಿಂದ…ಎನ್ನುತ್ತಾ ಭಕ್ತರು ರಥವನ್ನು ಎಳೆದರು. ರಥದತ್ತ ಬಾಳೆಹಣ್ಣು ತೂರಿ ಭಕ್ತಿ ಸಮರ್ಪಿಸಿದರು. ಮಾ. 2 ರಿಂದ ಆರಂಭವಾದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಹೊಳಲ್ಕೆರೆ ತಾಲೂಕಿನ ಅತಿ ದೊಡ್ಡ ರಥೋತ್ಸವ ಎಂಬ ಹೆಗ್ಗಳಿಕೆ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವಕ್ಕಿದೆ.

ರಥೋತ್ಸವದಲ್ಲಿ ಪ್ರದಕ್ಷಿಣೆ ಹಾಕಿದ ಗರುಡ ಪಕ್ಷಿ: ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವರ ಉತ್ಸವ ಮೂರ್ತಿಯನ್ನು ತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಭಕ್ತ ಸಮೂಹ ರಥವನ್ನು ಎಳೆಯಲು ಪ್ರಾರಂಭ ಮಾಡುತ್ತಿದ್ದಂತೆ ಗರುಡ ಪಕ್ಷಿಯೊಂದು ಎತ್ತರದಿಂದಲೇ ರಥದ ಕಳಸವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿ ಮಾಯವಾಯಿತು. ಸಾವಿರಾರು ಭಕ್ತರು ಗರುಡ ಪಕ್ಷಿ ಪ್ರದಕ್ಷಿಣೆ ಹಾಕುತಿದ್ದಂತೆಯೇ ಗೋವಿಂದ, ಗೋವಿಂದ, ಗೋವಿಂದ…ಎನ್ನುತ್ತಾ ರಥವನ್ನು ಎಳೆಯಲು ಪ್ರಾರಂಭಿಸಿದರು. ಮಂಗಳವಾರ ಬೆಳಗಿನ ಜಾವ 4 ಗಂಟೆಯಿಂದ 7 ಗಂಟೆಯವರೆಗೆ ಮತ್ತೂಮ್ಮೆ ಎರಡನೇ ಬಾರಿ ರಥೋತ್ಸವ ನಡೆಯಲಿದೆ.

ಎರಡು ಬಾರಿ ರಥೋತ್ಸವ ನಡೆಯುವುದು ಇಲ್ಲಿನ ವಿಶೇಷ. ಹೊರಕೆರೆದೇವರಪುರ ಗ್ರಾಮ ತಾಲೂಕಿನ ಗಡಿ ಭಾಗದಲ್ಲಿದ್ದು, ರಥೋತ್ಸವಕ್ಕೆ ತೆರಳುವ ಭಕ್ತರಿಗೆ ತೊಂದರೆಯಾಗದಂತೆ ಖಾಸಗಿ ಬಸ್‌ ಮಾಲೀಕರು ವಿಶೇಷ ಬಸ್‌ ವ್ಯವಸ್ಥೆ ಮಾಡಿದ್ದರು. ಆಟೋಗಳು, ದ್ವಿಚಕ್ರ ವಾಹನಗಳು, ಕಾರು, ಎತ್ತಿನಗಾಡಿ, ಟ್ರ್ಯಾಕ್ಟರ್‌ಗಳಲ್ಲಿ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡರು. ಕುಡಿಯುವ ನೀರು, ಸ್ವತ್ಛತೆ ಸೇರಿದಂತೆ ಸಕಲ ಸೌಲಭ್ಯಗಳನ್ನು ಮುಜರಾಯಿ ಇಲಾಖೆಯಿಂದ ಕಲ್ಪಿಸಲಾಗಿತ್ತು.

ದೇವಾಲಯ ಟ್ರಸ್ಟ್‌ನವರು ಭಕ್ತರಿಗೆ ಅನ್ನ ದಾಸೋಹ, ವಿದ್ಯುತ್‌ ದೀಪದ ವ್ಯವಸ್ಥೆ, ದೇವರ ದರ್ಶನ ಪಡೆಯಲು ಸೂಕ್ತ ವ್ಯವಸ್ಥೆ ಮಾಡಿದ್ದರು. ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್‌ ಇಲಾಖೆ ಬಂದೋಬಸ್ತ್ ಮಾಡಿತ್ತು. ಶಾಸಕ ಎಂ. ಚಂದ್ರಪ್ಪ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದರು. ರಥೋತ್ಸವದಲ್ಲಿ ಭಾಗವಹಿಸಿ ವಿಧಾನಮಂಡಲ ಅಧಿವೇಶನಕ್ಕೆ ತೆರಳುತ್ತಿದ್ದೇನೆ. ನಮ್ಮ ಕ್ಷೇತ್ರದಲ್ಲಿ ಮಳೆ-ಬೆಳೆ ಹೆಚ್ಚಾಗಲಿ ಹಾಗೂ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿದ್ದಾಗಿ ತಿಳಿಸಿದರು.

Advertisement

ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಮುಜರಾಯಿ ಇಲಾಖೆಯಿಂದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ರಥೋತ್ಸವ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದ ತೃಪ್ತಿ ಇದೆ.- ನಾಗರಾಜ್‌, ಹೊಳಲ್ಕೆರೆ ತಹಶೀಲ್ದಾರರು

Advertisement

Udayavani is now on Telegram. Click here to join our channel and stay updated with the latest news.

Next