ಕನ್ನಡದಲ್ಲಿ ಹಿಟ್ ಆದ ಮುರಳಿ ಅಭಿನಯದ “ರಥಾವರ’ ಚಿತ್ರವನ್ನು ತೆಲುಗಿಗೆ ಡಬ್ ಮಾಡಿ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದರು ನಿರ್ಮಾಪಕ ಧರ್ಮಶ್ರೀ ಮಂಜುನಾಥ್. ಚಿತ್ರ ಬಿಡುಗಡೆಗೂ ಮುನ್ನ, ಅಲ್ಲಿನ ಜನ ಚೆನ್ನಾಗಿ ಸ್ವೀಕರಿಸಬಹದೆಂದು ನಂಬಿಕೆ ಇಟ್ಟಿದ್ದರು ಮಂಜುನಾಥ್.
ಆದರೆ, ಇದೀಗ ಅವರ ನಂಬಿಕೆ ಸುಳ್ಳಾಗಿದೆ. “ರಥಾವರಂ’ ಚಿತ್ರವನ್ನು ತೆಲುಗಿನಲ್ಲಿ ಕಾಲಕಸಕ್ಕಿಂತ ಕಡಿಮೆಯಾಗಿ ನೋಡಿದರು ಎಂದು ಅವರೇ ಅಲವತ್ತುಕೊಂಡಿದ್ದಾರೆ. “ರಥವಾರ’ ಚಿತ್ರವನ್ನು ತೆಲುಗಿನಲ್ಲಿ ಡಬ್ ಮಾಡಲಾಗಿದ್ದು, ಆ ಚಿತ್ರವನ್ನು ಆಗಸ್ಟ್ 18ರಂದು ಆಂಧ್ರ ಮತ್ತು ತೆಲಂಗಾಣದಲ್ಲಿ ಬಿಡುಗಡೆ ಮಾಡಲಾಗಿತ್ತು.
ಬಿಡುಗಡೆಗೂ ಮುನ್ನ ಸಾಕಷ್ಟು ಪ್ರಚಾರವೂ ಆಗಿತ್ತು. ಮುರಳಿ ಅವರಿಗೆ ದೊಡ್ಡ ಲಾಂಚ್ ಆಗಲಿದೆ ಎಂದು ಧರ್ಮಶ್ರೀ ಮಂಜುನಾಥ್ ಚಿತ್ರದ ಬಿಡುಗಡೆಗೂ ಮುನ್ನ ಹೇಳಿಕೊಂಡಿದ್ದರು. ಆದರೆ, ಇದೀಗ ಚಿತ್ರ ಬಿಡುಗಡೆಯಾಗಿದ್ದು, ಆ ಚಿತ್ರದಿಂದ 10 ರೂಪಾಯಿ ಕೂಡಾ ಬರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
“ನಾವು ಕನ್ನಡಿಗರು ಇಲ್ಲಿ ಎಲ್ಲಾ ಭಾಷೆಯ ಚಿತ್ರಗಳಿಗೂ ಪ್ರೋತ್ಸಾಹ ಕೊಡುತ್ತೀವಿ. ಆದರೆ, ಬೇರೆ ಕಡೆ ಇದೇ ರೀತಿ ಇಲ್ಲ. “ರಥಾವರಂ’ ಚಿತ್ರವನ್ನು ಕಸಕ್ಕಿಂತ ಕಡೆಯಾಗಿ ನೋಡಿದರು. ಅಲ್ಲಿ ಚಿತ್ರವನ್ನು ಡಬ್ ಮಾಡಿ ಬಿಡುಗಡೆ ಮಾಡುವುದಕ್ಕೆ ಯಾವುದೇ ಪ್ರೋತ್ಸಾಹ ಸಿಗಲಿಲ್ಲ. ಕೊನೆಗೆ ನಾವೇ ಬಿಡುಗಡೆ ಮಾಡಬೇಕಾಗಿ ಬಂತು.
ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಚಿತ್ರಕ್ಕೆ ಒಂದೂವರೆ ಕೋಟಿಯಷ್ಟು ಖರ್ಚು ಮಾಡಿದ್ದೆವು. 10 ರೂಪಾಯಿ ವಾಪಸ್ಸು ಬರಲಿಲ್ಲ. ಅಲ್ಲಿ ಬೇರೆ ಭಾಷೆಯ ಚಿತ್ರಗಳು ಲೆಕ್ಕಕ್ಕಿಲ್ಲ. ಇಲ್ಲಿಂದ ಹೋದರೆ ಯಾವುದೇ ಸಹಕಾರ ಸಿಗಲಿಲ್ಲ’ ಎಂದು ಅವರು ಬೇಸರಿಸಿಕೊಂಡರು.