Advertisement

ರಥಬೀದಿ ಪ್ರ.ದ.ಕಾಲೇಜು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ

12:33 PM Oct 22, 2017 | |

ಮಂಗಳೂರು, ಅ.21: ನಗರದ ರಥಬೀದಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಡಾ| ಪಿ. ದಯಾನಂದ ಪೈ- ಪಿ. ಸತೀಶ್‌ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಎಂಬುದಾಗಿ ಪುನರ್‌ ನಾಮಕರಣ, ವಿವಿಧ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಶನಿವಾರ ನೆರವೇರಿತು.

Advertisement

ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು, ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಹೊಸ ತಂತ್ರಜ್ಞಾನ ತಿಳಿಸಲು ಹಾಗೂ ಸ್ಪರ್ಧಾತ್ಮಕ ಶಿಕ್ಷಣ ದೊರೆಯು ವಂತಾಗಲು ಉಚಿತ ಲ್ಯಾಪ್‌ಟಾಪ್‌ ವಿತರಿಸಲಾಗುತ್ತಿದೆ. ಈ ಯೋಜನೆ ಯಂತೆ ನ.18ರಂದು 36 ಸಾವಿರ ಪರಿಶಿಷ್ಟ ವಿದ್ಯಾರ್ಥಿಗಳಿಗೆ ದಾವಣಗೆರೆಯಲ್ಲಿ ಸಿಎಂ ಸಿದ್ದರಾಮಯ್ಯ ಲ್ಯಾಪ್‌ಟಾಪ್‌ ವಿತರಿಸಲಿದ್ದಾರೆ ಎಂದರು. ಪರಿಶಿಷ್ಟೇತರ, ಇತರ ವರ್ಗದ 1.50 ಲಕ್ಷ ವಿದ್ಯಾರ್ಥಿಗಳಿಗೂ ಜನವರಿ ಒಳಗೆ ಲ್ಯಾಪ್‌ ಟಾಪ್‌ ವಿತರಣೆಗೆ ಉದ್ದೇಶಿಸಲಾಗಿದೆ. ಇದಕ್ಕಾಗಿ ಜಾಗತಿಕ ಟೆಂಡರ್‌ ಕರೆಯ ಲಾಗಿದೆ ಎಂದರು.

ಸರಕಾರಿ ಕಾಲೇಜುಗಳಲ್ಲಿ ಖಾಲಿ ಇರುವ 3,000 ಅಸಿಸ್ಟೆಂಟ್‌ ಪ್ರೊಫೆಸರ್‌ ಹುದ್ದೆಗಳ ಭರ್ತಿಗೆ ಕ್ರಮ ಜರಗಿಸಿದ್ದು, ಈಗಾಗಲೇ 2,160 ಮಂದಿಯ ನೇಮಕವಾಗಿದೆ. ಬಾಕಿ ಉಳಿದ ಹುದ್ದೆಗಳನ್ನು ಮುಂದಿನ ವರ್ಷ ಭರ್ತಿ ಮಾಡಲಾಗುವುದು  ಎಂದರು.

ಸರಕಾರಿ ಕಾಲೇಜುಗಳ ಬಗ್ಗೆ ಕೀಳರಿಮೆ ಬೇಡ ಸರಕಾರಿ ಕಾಲೇಜುಗಳ ಬಗ್ಗೆ ಯಾರಿಗೂ ಕೀಳರಿಮೆ ಬೇಡ. ರಾಜ್ಯದ ಸರಕಾರಿ ಕಾಲೇಜುಗಳ ಇನ್ನಷ್ಟು ಗುಣ ಮಟ್ಟ ವೃದ್ಧಿಗೆ ಪ್ರಯತ್ನಿಸಲಾ ಗುವುದು. ಶಿಕ್ಷಣ ರಂಗದ ಉನ್ನತಿ ಸರಕಾರದಿಂದ ಮಾತ್ರ ಸಾಧ್ಯವಾಗದು. ಖಾಸಗಿಯವರೂ ಸರಕಾರದ ಜತೆ ಕೈಜೋಡಿಸ ಬೇಕು. ಈ ದಿಶೆಯಲ್ಲಿ ಡಾ| ಪಿ. ದಯಾನಂದ ಪೈ ಮತ್ತು ಪಿ. ಸತೀಶ್‌ ಪೈ ಅವರು ಸರಕಾರಿ ಕಾಲೇಜುಗಳ ಅಭಿವೃದ್ಧಿಗೆ ನೆರವಾಗುತ್ತಿರುವುದು ಶ್ಲಾಘನೀಯ. ಎಲ್ಲಾ ಶ್ರೀಮಂತರಲ್ಲೂ ಇಂತಹ ಉದಾರ ಮನೋಭಾವನೆ ಬರಬೇಕು ಎಂದು ಸಚಿವ ರಾಯರೆಡ್ಡಿ ಹೇಳಿದರು.

ವಿವಿಧ ಯೋಜನೆಗಳ ಉದ್ಘಾಟನೆ ಇದೇ ಸಂದರ್ಭದಲ್ಲಿ ಕಾಲೇಜಿನ ದಶಮಾನೋತ್ಸವ ವರ್ಷಾಚರಣೆಯನ್ನು ಹಾಗೂ ಬಿಸಿಯೂಟ ಯೋಜನೆಯನ್ನು ಆಹಾರ ಮತುನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್‌ ಉದ್ಘಾಟಿಸಿದರು. ವಿಸ್ತರಿತ ಕಂಪ್ಯೂಟರ್‌ ಲ್ಯಾಬ್‌ನ ಉದ್ಘಾಟನೆ ಮತ್ತು ಕಾಲೇಜಿನ ವಿದ್ಯಾರ್ಥಿಗಳ “108 ಚಿಂತನೆಗಳು’ ಕೃತಿಯ ಬಿಡುಗಡೆಯನ್ನು ವಿಧಾನ ಪರಿಷತ್‌ ಪ್ರತಿಪಕ್ಷ ಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌ ಅವರು ನೆರವೇರಿಸಿದರು.

Advertisement

ನೂತನ ಸ್ನಾತಕ-ಸ್ನಾತಕೋತ್ತರ ಕೋರ್ಸುಗಳನ್ನು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಉದ್ಘಾಟಿಸಿದರು. ನೂತನ ಮೆಟ್ರಿಕ್‌ ನಂತರದ ಹಿಂದುಳಿದ ವರ್ಗಗಳ ದೇವರಾಜ ಅರಸು ಮಹಿಳಾ ವಿದ್ಯಾರ್ಥಿನಿಲಯದ ಶಂಕುಸ್ಥಾಪನೆಯನ್ನು ಮಂಗಳೂರು ವಿ.ವಿ. ಕುಲಪತಿ ಪ್ರೊ| ಕೆ. ಭೈರಪ್ಪ ಅವರು ನೆರವೇರಿಸಿದರು. ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜೆ.ಆರ್‌. ಲೋಬೊ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮೇಯರ್‌ ಕವಿತಾ ಸನಿಲ್‌, ದಾನಿಗಳು ಹಾಗೂ ಮಹಾ ಪೋಷಕರಾದ ಬೆಂಗಳೂರಿನ ಸೆಂಚುರಿ ರಿಯಲ್‌ ಎಸ್ಟೇಟ್‌ನ ಡಾ| ಪಿ. ದಯಾನಂದ ಪೈ ಮತ್ತು ಪಿ. ಸತೀಶ್‌ ಪೈ, ರವೀಂದ್ರ ಪೈ, ಕಾರ್‌ ಸ್ಟ್ರೀಟ್‌ ಪ್ರದೇಶದ ಕಾರ್ಪೊರೇಟರ್‌ ರಮೀಝಾ ಬಾನು, ರಾಮದಾಸ್‌, ಮೋಹನ್‌ ಮೆಂಡನ್‌, ಮಂಗಳೂರು ತಾಲೂಕು ಪಂಚಾಯತ್‌ ಅಧ್ಯಕ್ಷ ಮಹಮದ್‌ ಮೋನು, ಮಾಜಿ ಶಾಸಕ ಎನ್‌. ಯೋಗೀಶ್‌ ಭಟ್‌, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ| ಉದಯ ಶಂಕರ್‌ ಎಚ್‌., ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷ ಜೆ. ಪಾಂಡುರಂಗ ನಾಯಕ್‌, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುಪ್ರಸಾದ್‌ ಮುಂತಾದವರು ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ| ರಾಜಶೇಖರ ಹೆಬ್ಟಾರ್‌ ಸಿ. ಸ್ವಾಗತಿಸಿ ಡಾ| ಶಿವರಾಮ ಪಿ. ವಂದಿಸಿದರು. ಡಾ| ಪ್ರಕಾಶ್‌ಚಂದ್ರ ಶಿಶಿಲ ಕಾರ್ಯಕ್ರಮ ನಿರ್ವಹಿಸಿದರು. 

ಸರಕಾರಿ ಕಾಲೇಜು ಬಡವರಿಗೆ ಮಾತ್ರ ಅಲ್ಲ: ಡಾ| ಪೈ ಸರಕಾರಿ ಶಾಲೆ/ ಕಾಲೇಜುಗಳೆಂದರೆ ಬಡವರಿಗೋಸ್ಕರ ಎಂಬ ಭಾವನೆ ಸಮಾಜದಲ್ಲಿದೆ. ಈ ಮನೋಭಾವನೆಯನ್ನು ತೊಡೆದು ಹಾಕಬೇಕು. ನನ್ನ ಈ ಮಟ್ಟದ ಸಾಧನೆಗೆ ಸರಕಾರಿ ಕಾಲೇಜು ಕಾರಣ. ಈ ಶಿಕ್ಷಣ ಸಂಸ್ಥೆಯನ್ನು ರಾಜ್ಯದಲ್ಲಿಯೇ ಮಾದರಿ ಕಾಲೇಜನ್ನಾಗಿ ಮಾಡುವ ಆಸೆ ನನ್ನದು. ಇನ್ನಷ್ಟು ಅಗತ್ಯ ನೆರವು ನೀಡಲು ಸಿದ್ಧನಿದ್ದೇನೆ ಎಂದು ಡಾ| ಪಿ.ದಯಾನಂದ ಪೈ ಹೇಳಿದರು. ಶಿಕ್ಷಣ ಶ್ರೀಮಂತರ ಸೊತ್ತಲ್ಲ ಅದನ್ನು ಪಡೆವ ಹಕ್ಕು ಬಡವರಿಗೂ ಇದೆ. ಬಡತನ ಸವಾಲಾಗಿ ಸ್ವೀಕರಿಸಿದರೆ ಉನ್ನತ ಸಾಧನೆ ಮಾಡಬಹುದು. ವಿದ್ಯಾರ್ಥಿಗಳು ಮೊಬೈಲ್‌ ಫೋನ್‌ಗೆ ಆದ್ಯತೆ ನೀಡುವುದನ್ನು ಕಡಿಮೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next