ಗದಗ: ಜನಸಂಕಲ್ಪ ಯಾತ್ರೆಯನ್ನ ನವೆಂಬರ್ ತಿಂಗಳಲ್ಲಿ ಪೂರ್ಣಗೊಳಿಸಿ ಮುಂದಿನ ತಿಂಗಳು 224 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಲು ರಥಯಾತ್ರೆ ಆರಂಭಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಜನಸಂಕಲ್ಪಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಭಾರತವು ಸನಾತನ ಧರ್ಮ, ಹಿಂದೂ ಧರ್ಮ ಎಂಬ ಪವಿತ್ರ ಧರ್ಮ ಹೊಂದಿದ್ದು, ಹಿಂದೂ ಧರ್ಮದ ಬಗ್ಗೆ ಕಾಂಗ್ರೆಸ್ ನ ಸತೀಶ ಜಾರಕಿಹೊಳಿ ಅವರು ಪ್ರಯೋಗಿಸಿರುವ ಪದ ಖಂಡನೀಯ. ಈ ಕುರಿತು ಭಾರತ್ ಜೋಡೋ ಕೈಗೊಂಡಿರುವ ರಾಹುಲ್ ಗಾಂಧಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮೌನ ವಹಿಸಿರುವುದು ಅವರ ಚಿಂತನೆ ಹಾಗೂ ಯೋಚನೆಯ ಹೊಲಸುತನ ತೋರಿಸುತ್ತದೆ. ಈ ರೀತಿಯಾಗಿಯೇ ಭಾರತವನ್ನು ಇಬ್ಭಾಗ ಮಾಡಲು ಹೊರಟಿದೆ. ಇದನ್ನು ಕೊನೆಯಾಗಿಸಲು ಭಾರತೀಯ ಜನತಾ ಪಕ್ಷವು ಒಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ ಎಂದು ಹೇಳಿದರು.
ಬಿಜೆಪಿಯ ಜನಸಂಕಲ್ಪ ಯಾತ್ರೆಗೆ ಜನ ಬೆಂಬಲ ಸಿಗುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ತಿಳಿಸುವ ಕೆಲಸ ಮಾಡಲಾಗುತ್ತಿದೆ. 2023ರ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಬಿಜೆಪಿಯ ಜನಸಂಕಲ್ಪ ಯಾತ್ರೆಯ ಕುರಿತು ಅವಹೇಳನ ಮಾಡುತ್ತಿರುವ ಸಿದ್ದರಾಮಯ್ಯ ಅವರಿಗೆ ಏನಾಗುತ್ತಿದೆ ಗೊತ್ತಾಗುತ್ತಿಲ್ಲ, ಅವರು ಕಳೆದ ಚುನಾವಣೆಯಲ್ಲಿ ಜನಾಶೀರ್ವಾದ ಯಾತ್ರೆ ಮಾಡಿದ್ದರು, ಅವರಿಗೆ ಜನ ಆಶೀರ್ವಾದ ಮಾಡಲಿಲ್ಲ. ಅದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.
ನಂತರ ಸಾರ್ವಜನಿಕ ರಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಈ ವೇಳೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೃಷಿ ಮತ್ತು ಜಿಲ್ಲಾ ಉಸ್ತವಾರಿ ಸಚಿವ ಬಿ.ಸಿ.ಪಾಟೀಲ, ಲೋಕೋಪಯೋಗಿ ಇಲಾಖೆ ಸಚಿವರ ಸಿ.ಸಿ.ಪಾಟೀಲ, ಜಲಸಂನ್ಮೂಲ ಸಚಿವ ಗೋವಿಂದ ಕಾರಜೋಳ, ಸಾರಿಗೆ ಸಚಿವ ಬಿ ಶ್ರೀರಾಮುಲು, ಶಾಸಕ ರಾಮಣ್ಣ ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ, ಸಂಸದ ಶಿವಕುಮಾರ ಉದಾಸಿ ಇದ್ದರು.