Advertisement
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ ತನ್ನದೇ ಮಹತ್ವ ಪಡೆದಿತ್ತು. ಐಟಿ ಉದ್ಯಮ ಬರಲಿದೆ ಎಂಬ ಪ್ರಚಾರದೊಂದಿಗೆ ಹುಬ್ಬಳ್ಳಿ-ಧಾರವಾಡದಲ್ಲಿ ನಿವೇಶನ, ಮನೆ, ಅಪಾರ್ಟ್‌ಮೆಂಟ್‌ಗಳ ಬೆಲೆ ಜಿಗಿತಗೊಂಡಿತ್ತು. ಇದಾದ ನಂತರದಲ್ಲಿ ಒಂದಿಷ್ಟು ಏರಿಳಿತ ಕಾಣುತ್ತ ಸಾಗಿತ್ತಾದರೂ ಕೋವಿಡ್-ಲಾಕ್‌ಡೌನ್ ಶಾಕ್‌ನಿಂದ ಉದ್ಯಮ ತತ್ತರಿಸಿತ್ತು. ಇದರಿಂದ ಇನ್ನೇನು ಮೇಲೇಳಬೇಕು ಎನ್ನುವಾಗಲೇ ಇದೀಗ ಸಾಮಗ್ರಿ ದರ ಹೆಚ್ಚಳ ಬರೆ ಎಳೆದಂತಾಗಿದೆ.
Related Articles
Advertisement
ಹೊಸ ಕಾಮಗಾರಿ ಆರಂಭಿಸುವವರು ದುಬಾರಿ ಸಾಮಗ್ರಿಗಳನ್ನು ಖರೀದಿಸಿ ಅಧಿಕ ವೆಚ್ಚದೊಂದಿಗೆ ನಿರ್ಮಾಣ ಕಾರ್ಯದ ಬದಲು ಇನ್ನು ಮೂರ್‍ನಾಲ್ಕು ತಿಂಗಳು ಕಾಯ್ದು ನೋಡೋಣ ಒಂದಿಷ್ಟು ದರ ಇಳಿಯಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.
ಈಗಾಗಲೇ ಅಪಾರ್ಟ್‌ಮೆಂಟ್, ಸ್ವಂತ ಮನೆ, ವಿವಿಧ ಕಟ್ಟಡಗಳ ನಿರ್ಮಾಣ ಕೈಗೊಂಡವರು ಪೇಚಾಡುವ ಸ್ಥಿತಿಯಲ್ಲಿದ್ದಾರೆ. ಹಳೆ ದರಕ್ಕೆ ಸಾಮಗ್ರಿ ಖರೀದಿ ಮಾಡಿಟ್ಟುಕೊಂಡವರು ಇಲ್ಲವೆ ಒಡಂಬಡಿಕೆ ಮಾಡಿಕೊಂಡವರು ಕಾಮಗಾರಿ ಮುಂದುವರಿಸಿದ್ದರೆ, ಅಗತ್ಯವಿರುವಷ್ಟು ಸಾಮಗ್ರಿ ಸಂಗ್ರಹಿಸದೆ ಬೇಕಾದಾಗಲೆಲ್ಲ ಖರೀದಿಸಿದ ರಾಯಿತು ಎಂದುಕೊಂಡವರು ಇದೀಗ ಕಾಮಗಾರಿಯನ್ನೇ ಸ್ಥಗಿತಗೊಳಿಸಬೇಕಾಗಿದೆ.ಒಟ್ಟಾರೆ ಕಟ್ಟಡ ಸಾಮಗ್ರಿಗಳ ದರದಲ್ಲಿ ಸರಾಸರಿ ಶೇ.45 ಹೆಚ್ಚಾಗಿದ್ದು, ಅಪಾರ್ಟ್‌ಮೆಂಟ್, ಮನೆ ಇಲ್ಲವೆ ಕಟ್ಟಡ ಅಂದುಕೊಂಡ ವೆಚ್ಚಕ್ಕಿಂತ ಶೇ.50 ಹೆಚ್ಚಿನ ಹಣ ವ್ಯಯಿಸಬೇಕಾಗಿದೆ.
ಕೆಲವೊಬ್ಬರು ಮಾಡಿಕೊಂಡ ಒಪ್ಪಂದವನ್ನೇ ಮುರಿದುಕೊಳ್ಳುವ ಸ್ಥಿತಿಗೆ ತಲುಪತೊಡಗಿದ್ದಾರೆ. ಹೊಸದಾಗಿ ರಿಯಲ್ ಎಸ್ಟೇಟ್ ಉದ್ಯಮಕ್ಕಿಳಿದವರು, ಪ್ರಯೋಗಕ್ಕೆಂದು ಕಟ್ಟಡ ನಿರ್ಮಾಣ ಉದ್ಯಮಕ್ಕೆ ಬಂದವರು, ಸಾಲ ತಂದು ಈ ಉದ್ಯಮಕ್ಕೆ ಹಾಕಿ ಕಟ್ಟಿದ ಕಟ್ಟಡ ಮಾರಾಟವಾಗಿ ಹೇಗೋ ತಂದ ಸಾಲ ತೀರುತ್ತದೆ, ಕೈಗೊಂದಿಷ್ಟು ಹಣ ಉಳಿಯುತ್ತದೆ ಎಂದು ಭಾವಿಸಿದವರು ಇದೀಗ ಪರದಾಡುವಂತಾಗಿದೆ. ಗಂಟಲಕ್ಕಿಳಿದ ಬಿಸಿತುಪ್ಪದ ಸ್ಥಿತಿಯಲ್ಲಿದ್ದಾರೆ.
ಮಧ್ಯಮ ವರ್ಗದವರಿಗೆ ಸಂಕಷ್ಟ: ತಲೆಗೊಂದು ಸ್ವಂತ ಸೂರು ಹೊಂದಿರಬೇಕೆಂಬ ಆಸೆ ಬಹುತೇಕರ ದ್ದಾಗಿರುತ್ತದೆ. ಅದರಲ್ಲೂ ಮಧ್ಯಮ ವರ್ಗದವರು, ನೌಕರರು ತಮ್ಮ ವೇತನ, ಆದಾಯಕ್ಕನುಗುಣವಾಗಿ ಕನಸಿನ ಮನೆ ಹೊಂದುವ ಯತ್ನಕ್ಕೆ ಮುಂದಾಗುತ್ತಾರೆ. ಬ್ಯಾಂಕ್, ಹಣಕಾಸು ಸಂಸ್ಥೆಗಳಲ್ಲಿ ಸಾಲ ಮಾಡಿ ಮನೆ ನಿರ್ಮಾಣಕ್ಕೆ ಮುಂದಾಗುತ್ತಾರೆ. ಇದೀಗ ಕಟ್ಟಡ ಸಾಮಗ್ರಿಗಳ ದರ ಹೆಚ್ಚಳ ಎಲ್ಲ ಲೆಕ್ಕಾಚಾರವನ್ನೇ ಬುಡಮೇಲು ಮಾಡತೊಡಗಿದೆ.
ಅಪಾರ್ಟ್‌ಮೆಂಟ್‌ನಲ್ಲಿ ಸುಮಾರು 750 ಚದರ ಅಡಿಗೆ ಅಂದಾಜು 25-35 ಲಕ್ಷ ರೂ.ಒಳಗೆ ಮುಗಿಯುತ್ತಿತ್ತು ಇದೀಗ ಅಷ್ಟೇ ಜಾಗದಲ್ಲ ಮನೆ ನಿರ್ಮಾಣಕ್ಕೆ 40-45 ಲಕ್ಷ ರೂ. ಆಗುತ್ತಿದ್ದು, ಹೆಚ್ಚಿನ ದರ ನೀಡಲು ಜನರು ಮುಂದಾಗಬೇಕು ಇಲ್ಲವೆ ಹಿಂದಿನ ದರ ಎಂದರೆ ನಿರ್ಮಾಣ ಪ್ರಮಾಣ ಕಡಿಮೆ ಮಾಡಬೇಕಾಗಿದೆ.
ಮತ್ತೂಂದು ಸಮಸ್ಯೆ ಎಂದರೆ ಮಧ್ಯಮ ವರ್ಗದವರು ತಮ್ಮ ಆದಾಯಕ್ಕೆ ಅನುಗುಣವಾಗಿ ಮನೆ ಖರೀದಿ, ನಿರ್ಮಾಣ ಯೋಜನೆಗೆ ಮುಂದಾಗುತ್ತಾರೆ. ದಿಢೀರನೆ ಸುಮಾರು 10ಲಕ್ಷ ರೂ.ನಷ್ಟು ವೆಚ್ಚದಲ್ಲಿ ಹೆಚ್ಚಳವಾದರೆ ಅದನ್ನು ಭರಿಸುವ ಇಲ್ಲವೆ ಸರಿದೂಗಿಸುವ ಸಾಮರ್ಥ್ಯ ಅವರಲ್ಲಿ ಇರಲ್ಲ. ಬಹುತೇಕರು ಮನೆ ಯೋಜನೆಯನ್ನೇ ಮುಂದೂಡುತ್ತಾರೆ ಇಲ್ಲವೆ ಕೈ ಬಿಡುತ್ತಾರೆ.
ಇನ್ನು ನೌಕರಿಯಲ್ಲಿದ್ದವರಿಗೆ ಬ್ಯಾಂಕ್ ನವರು ಅವರ ವಾರ್ಷಿಕ ವೇತನ ಆದಾರದಲ್ಲಿ ಇಂತಿಷ್ಟು ಎಂದು ಮನೆ ಸಾಲ ನೀಡುತ್ತಾರೆ. ವಾರ್ಷಿಕ ಸುಮಾರು 5-6 ಲಕ್ಷ ರೂ. ವೇತನ ಹೊಂದಿದವರಿಗೆ ಸಾಮಾನ್ಯವಾಗಿ ಬ್ಯಾಂಕ್‌ನವರು 30-35 ಲಕ್ಷ ರೂ.ವರೆಗೆ ಮನೆ ಸಾಲ ನೀಡುತ್ತಾರೆ. ಮನೆ ಖರೀದಿ ವೆಚ್ಚದಲ್ಲಿ 10ಲಕ್ಷ ರೂ. ಹೆಚ್ಚಳವಾಗಿದ್ದು, ಬ್ಯಾಂಕ್‌ನವರು ನೀಡುವ ಸಾಲದಲ್ಲಿ ಹೆಚ್ಚಳ ಮಾಡಲ್ಲ. ನೌಕರಿದಾರ ದಿಢೀರನೆ 10 ಲಕ್ಷ ಹೊಂದಿಸುವುದು ಸಾಧ್ಯವಾಗದೆ ಮನೆ ಖರೀದಿಗೆ ಅಡ್ಡಿಯಾಗಲಿದೆ.
ನಿವೇಶನಗಳ ಮೇಲೆ ಹೂಡಿಕೆ ಕುಸಿತ: ಹುಬ್ಬಳ್ಳಿ – ಧಾರವಾಡದಲ್ಲಿ ಮೂರು ಹಂತದಲ್ಲಿ ಅಪಾರ್ಟ್‌ಮೆಂಟ್‌ಗಳು ಮಾರಾಟ ಆಗುತ್ತಿದ್ದವು. 25ರಿಂದ 35-40 ಲಕ್ಷ ರೂ.ವರೆಗೆ, 50-60 ಲಕ್ಷ ರೂ. ಹಾಗೂ 1 ಕೋಟಿ ರೂ. ಮೇಲಿನ ದರದಲ್ಲಿ ಅಪಾರ್ಟ್ ಮೆಂಟ್‌ಗಳಲ್ಲಿನ ಮನೆಗಳು ಮಾರಾಟ ಆಗುತ್ತಿದ್ದವು. 25-35 ಲಕ್ಷ ರೂ. ಒಳಗಿನ ಮನೆಗಳ ಖರೀದಿ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿತ್ತು. 50-60 ಲಕ್ಷ ರೂ. ಇದಕ್ಕಿಂತಲೂ ಕಡಿಮೆ ಇದ್ದು, 1 ಕೋಟಿ ರೂ. ಅಥವಾ ಅದಕ್ಕಿಂತ ಮೇಲ್ಪಟ್ಟ ಅಪಾರ್ಟ್‌ಮೆಂಟ್ ಗಳಲ್ಲಿ ಖರೀದಿ ಅತ್ಯಲ್ಪ ಎನ್ನಬಹುದು. ಕೋವಿಡ್ ನಂತರದಲ್ಲಿ 50-60 ಲಕ್ಷ ರೂ. ವೆಚ್ಚದ ಅಪಾರ್ಟ್‌ಮೆಂಟ್ ಹಾಗೂ 1 ಕೋಟಿ ರೂ. ಮೇಲ್ಪಟ್ಟವುಗಳ ಖರೀದಿಗೆ ಒಂದಿಷ್ಟು ಬೇಡಿಕೆ ಇದೆ ಆದರೆ ಅವುಗಳ ಖರೀದಿ ಅತ್ಯಂತ ಕಡಿಮೆ.
ಇನ್ನು ಖಾಲಿ ನಿವೇಶನಗಳ ಮೇಲೆ ಈ ಹಿಂದೆ ಹೆಚ್ಚಿನದಾಗಿ ಹೂಡಿಕೆ ಉದ್ದೇಶದೊಂದಿಗೆ ಖರೀದಿಸುವವರ ಸಂಖ್ಯೆ ಅಧಿಕವಾಗಿತ್ತು. ಕೋವಿಡ್ ನಂತರದಲ್ಲಿ ಅದು ಕುಗ್ಗಿದ್ದು, ಇದೀಗ ಮನೆ ಇಲ್ಲವೆ ಕಟ್ಟಡ ನಿರ್ಮಿಸುವವರು ಮಾತ್ರ ನಿವೇಶನ ಖರೀದಿಗೆ ಮುಂದಾಗುತ್ತಿದ್ದಾರೆ. ಹೂಡಿಕೆ ಉದ್ದೇಶದೊಂದಿಗೆ ಖರೀದಿಸುವವರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ ಎಂಬುದು ರಿಯಲ್ ಎಸ್ಟೇಟ್ ಉದ್ಯಮದ ಕೆ.ಮಹೇಶ, ಅಮೃತ ಮೆಹರವಾಡೆ ಅವರ ಅನಿಸಿಕೆ.
ಸ್ಥಿತಿ ಹೇಳಿಕೊಳ್ಳುವಂತಿಲ್ಲ ಅನುಭವಿಸುವಂತೆಯೂ ಇಲ್ಲ : ಕಟ್ಟಡ ಸಾಮಗ್ರಿಗಳ ಬೆಲೆ ದಿಢೀರ್ ಹೆಚ್ಚಳದಿಂದ ನಿರ್ಮಾಣ ಉದ್ಯಮದಲ್ಲಿ ತೊಡಗಿವರ ಸ್ಥಿತಿ ಹೇಳಿಕೊಳ್ಳುವಂತಿಲ್ಲ, ಅನುಭವಿಸುವಂತೆಯೂ ಇಲ್ಲ ಎನ್ನುವಂತಾಗಿದೆ. ರೇರಾದಡಿ ನೋಂದಾಯಿತಗೊಂಡವರು ತಮ್ಮ ಮೌಲ್ಯ ಉಳಿಸಿಕೊಳ್ಳಬೇಕಾಗಿದೆ. ಗುಣಮಟ್ಟದಲ್ಲಿಯೂ ರಾಜಿ ಇಲ್ಲದೇ ಕಾಲಮಿತಿಯಲ್ಲಿ ನಿರ್ಮಾಣ ಪೂರ್ಣಗೊಳಿಸಬೇಕಾಗಿದೆ. ಆಗಿರುವ ಒಪ್ಪಂದದಂತೆ ಹಳೆ ದರಕ್ಕೆ ಗ್ರಾಹಕರಿಗೆ ಕಟ್ಟಡ ನಿರ್ಮಾಣ ಮಾಡಿಕೊಡಬೇಕಾಗಿದೆ. ಆದರೆ ದರ ಹೆಚ್ಚಳ ಹೊರೆ ನಿರ್ಮಾಣ ಉದ್ಯಮದಲ್ಲಿದ್ದವರ ಮೇಲೆ ಬೀಳುತ್ತದೆ. ಹೆಸರು ಉಳಿಸಿಕೊಳ್ಳಲು, ಉದ್ಯಮದಲ್ಲಿ ಮುಂದುವರಿಯಲು ಮಾಡಿಕೊಂಡ ಒಪ್ಪಂದ ಪೂರ್ಣಗೊಳಿಸಬೇಕಾಗಿದೆ. ದರ ಹೆಚ್ಚಳದಿಂದ ಹೊಸ ಯೋಜನೆಗಳಿಗೆ ಹಿನ್ನಡೆಯಾಗಿದೆ.
-ಬ್ರಯಾನ್ ಡಿಸೋಜಾ, ಖಜಾಂಚಿ, ಹು.ಧಾ.ಕ್ರೆಡೈ
ಹುಬ್ಬಳ್ಳಿ-ಧಾರವಾಡದಲ್ಲಿ ಈ ಹಿಂದೆ 25-35 ಲಕ್ಷ ರೂ. ವೆಚ್ಚದಲ್ಲಿ ದೊರೆಯುತ್ತಿದ್ದ ಅಪಾರ್ಟ್‌ಮೆಂಟ್‌ಗಳ ಮನೆ, ದರ ಹೆಚ್ಚಳದಿಂದ ಇದೀಗ 40-45 ಲಕ್ಷ ರೂ.ಗೆ ಹೆಚ್ಚಳವಾಗಿದೆ.
–ಅಮರೇಗೌಡ ಗೋನವಾರ