ಬೆಳಗಾವಿ: ಮುಂದಿನ ಲೋಕಸಭಾ ಚುನಾವಣೆಗೆ ಅಧಿಕಾರಿಗಳ ವರ್ಗಾವಣೆ ಮಾಡಿ ಹಣ ದೋಚುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಜಿಲ್ಲಾಧಿಕಾರಿಗಳು, ಆಯುಕ್ತರು, ಸಿಇಒ, ಎಂಜಿನರ್ ಗಳಿಗೆ ರೇಟ್ ಫಿಕ್ಸ್ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಶಾಂತಿ ಸುವ್ಯವಸ್ಥೆ ಕಾಪಾಡುವ ಬದಲು ವರ್ಗಾವಣೆಯಲ್ಲಿ ತೊಡಗಿದೆ. ಐದು ವರ್ಷ ಪೂರ್ಣಗೊಳಿಸುವ ವಿಶ್ವಾಸವಿಲ್ಲ. ಒಂದು ವರ್ಷದಲ್ಲಿ ಎಲ್ಲವನ್ನೂ ದೋಚಲು ಮುಂದಾಗಿದೆ. ಕಾಂಗ್ರೆಸ್ ನ ತಲೆಯಲ್ಲಿ ಮದ, ಮತ್ಸರ, ಅಹಂಕಾರ ಇದೆ. ಜನ ಮತ್ತೆ ಕಾಂಗ್ರೆಸ್ ಗೆ ಬುದ್ದಿ ಕಲಿಸಲಿದ್ದಾರೆ. ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ರಾಜ್ಯದ ಜನರಿಗೆ ತೊಂದರೆಯಾದರೆ ನಮ್ಮ ಹೋರಾಟ ನಿರಂತರವಾಗಿ ಇರಲಿದೆ ಎಂದು ಹೇಳಿದರು.
ಜೈನಮುನಿ ಹತ್ಯೆ ಪ್ರಕರಣ ಪಾರದರ್ಶಕವಾಗಿ ನಡೆಯಬೇಕು. ತಪ್ಪಿತಸ್ಥಿಗೆ ಕಠಿಣ ಶಿಕ್ಷೆ ಆಗಬೇಕು. ಬಿಜೆಪಿಯ ಸತ್ಯಶೋಧನ ಸಮಿತಿಯಿಂದ ಜನರಿಂದ ಮಾಹಿತಿ ಪಡೆದುಕೊಂಡು ಅಧ್ಯಯನ ನಡೆಸಲಾಗುವುದು. ಪೊಲೀಸ್ ಹಾಗೂ ಸರ್ಕಾರದ ಮೇಲಿನ ನಂಬಿಕೆ ಇಲ್ಲ ಅಂತಲ್ಲ. ರಾಜ್ಯದಲ್ಲಿ ನಡೆದ ಹತ್ಯೆ ಪ್ರಕರಣಗಳ ಸತ್ಯಾಂಶ ಹೊರ ಬರಬೇಕು. ನಮ್ಮ ಅಧಿಕಾರಾವಧಿಯಲ್ಲಿ ನಡೆದ ಪ್ರವೀಣ ನೆಟ್ಟಾರು, ಹರ್ಷ ಹತ್ಯೆ ಸೇರಿದಂತೆ ವಿವಿಧ ಪ್ರಕರಣಗಳನ್ನು ಎನ್ ಐಎ ತನಿಖೆಗೆ ನೀಡಿದ್ದೇವೆ. ಪೊಲೀಸರ ಮೇಲೆ ನಂಬಿಕೆ ಇಲ್ಲ ಅಂತ ಅಲ್ಲ. ಹೊರಗಿನವರ ಕೈವಾಡವಿದೆಯೇ? ಅದರ ಸತ್ಯಾಂಶ ಏನು ಎಂಬುದು ಹೊರ ಬರಬೇಕು. ಸತ್ಯಾಸತ್ಯತೆ ಹೊರಬರಬೇಕು. ಜೈನಮುನಿ ಹತ್ಯೆ ಪ್ರಕರಣ ಸತ್ಯ ಹೊರಬರಬೇಕು ಎಂಬ ನಮ್ಮ ಬೇಡಿಕೆ ಇದೆ ಎಂದರು.
ಇದನ್ನೂ ಓದಿ:B’town: ಪಾತ್ರಕ್ಕಾಗಿ ಬೆತ್ತಲೆ ಆಗುವುದು.. ನಗ್ನತೆ ಪ್ರಶ್ನೆಗೆ ನೇರವಾಗಿ ಉತ್ತರಿಸಿದ ನಟಿ
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಗೂಂಡಾಗಿರಿ, ದರೋಡೆ, ಹಿಂದೂಗಳ ಹತ್ಯೆ, ಮಂಗಳೂರಿನ ಜೈಲಿನಲ್ಲಿ ಡಬಲ್ ಮರ್ಡರ್, ಮೈಸೂರಿನಲ್ಲಿ ಜೈಲಿನಲ್ಲಿ ಕೊಲೆ, ಹೀಗೆ ವಿವಿಧ ಪ್ರಕರಣಗಳು ನಡೆದಿವೆ. ಹೀಗೆ ನಿರಂತರ ಕೊಲೆ, ಸುಲಿಗೆ ನಡೆಯುತ್ತವೆ. ಯಾವಾಗ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೋ ಇಂಥ ಕೊಲೆಗಳು ವೈಭವೀಕರಣ ಹಾಗೂ ಕೊಲೆಗಡುಕರಿಗೆ ಬೆಂಗಾವಲಾಗಿ ಸರ್ಕಾರ ನಿಲ್ಲುತ್ತದೆ. ಆಗ ಮರಳು ಮಾಫಿಯಾ ಹಾಗೂ ಡ್ರಗ್ ಮಾಫಿಯಾ ಹಾವಳಿ ಹೆಚ್ಚಾಗಿತ್ತು. ಇದೆಲ್ಲ ಯಾಕಾಗಿದೆ ಎಂಬುದರ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದಾಗ, ಪಾಕಿಸ್ತಾನ ಧ್ವಜ ಹಿಡಿದು ಕುಣಿದಾಡಿದಾಗ ಕೇಸು ಏಕೆ ದಾಖಲಿಸಲಿಲ್ಲ. ಅವರಿಗೆ ಕಾಂಗ್ರೆಸ್ ಬೆಂಗಾವಲಾಗಿದೆಯೇ? ರಾಷ್ಟ್ರ ಪ್ರೇಮಿಗಳ ಪರವಾವಿ ದೂರು ದಾಖಲಿಸುತ್ತಿದ್ದಾರೆ.ಸಿದ್ದರಾಮಯ್ಯ ಬಂದಾಗ ದ್ವೇಷದ ರಾಜಕಾರಣ ಮಾಡುತ್ತದೆ. ಪೊಲೀಸರ ಕೈ ಕಟ್ಟಿ ಹಾಕುತ್ತಾರೆ. ಪೊಲೀಸರು ಮುಕ್ತವಾಗಿ ಕೆಲಸ ಮಾಡಲು ಅವಕಾಶ ಇಲ್ಲ. ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಮ್ಮಲ್ಲಿ ಪದ್ಧತಿ ಆಧಾರದ ಮೇಲೆ ವಿರೋಧ ಪಕ್ಷದ ನಾಯಕರ ಆಯ್ಕೆ ಆಗುತ್ತದೆ. ಕಾಂಗ್ರೆಸ್ ಗೆ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯ ಅಧ್ಯಕ್ಷರು ಆರು ತಿಂಗಳ ಕಾಲ ಇರಲಿಲ್ಲ. ಸದನದಲ್ಲಿ ಯಾವ ರೀತಿ ಹೋರಾಡಬೇಕು, ಅದರ ಜವಾಬ್ದಾರಿ ಯಾರಿಗೆ ಕೊಡಬೇಕೋ ಕೊಟ್ಟಿದ್ದೇವೆ. ಸರ್ಕಾರದ ವಿರುದ್ಧ ಹೋರಾಟ ನಡೆದಿದೆ ಎಂದು ಸ್ಪಷ್ಟಪಡಿಸಿದರು.