Advertisement

ಪಾಲಿಕೆ ಕೇಂದ್ರ ಕಚೇರಿಯಲ್ಲಿ ಇಲಿ ಕಾಟ

09:22 AM Feb 14, 2019 | |

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಇಲಿ-ಹೆಗ್ಗಣಗಳ ಕಾಟ ಹೆಚ್ಚಾಗಿದ್ದು, ಅವುಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲು ಸಾಧ್ಯವಾಗದಂಥ ಪರಿಸ್ಥಿತಿಯಲ್ಲಿ ಬಿಬಿಎಂಪಿಯಿದೆ.

Advertisement

ಪಾಲಿಕೆ ಆವರಣದಲ್ಲಿರುವ ಕೆಂಪೇಗೌಡ ಪೌರ ಸಭಾಂಗಣದ ಕಟ್ಟಡದಲ್ಲಿ ಇಲಿಗಳ ಹಾವಳಿ ಹೆಚ್ಚಾಗಿದ್ದು, ವಿವಿಧ ಸ್ಥಾಯಿ ಸಮಿತಿಗಳ ಕಡತಗಳನ್ನು ಕಚ್ಚಿ ಹಾಳು ಮಾಡುತ್ತಿವೆ. ಅಲ್ಲದೆ, ಕಚೇರಿಯಲ್ಲಿನ ಜೆರಾಕ್ಸ್‌ ಯಂತ್ರದ ತಂತಿಗಳನ್ನು ಕಚ್ಚಿ ಯಂತ್ರ ಹಾಳುಮಾಡಿವೆ. ಇಲಿಗಳ ನಿಯಂತ್ರಣದ ಬಗ್ಗೆ ತಲೆ
ಕೆಡಿಸಿಕೊಂಡಿರುವ ಮೇಯರ್‌ ಗಂಗಾಂಬಿಕೆ ಅವರು, ಅಧಿಕಾರಿಗಳು, ವಿಪಕ್ಷ ನಾಯಕರು ಹಾಗೂ ಸ್ಥಾಯಿ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಲು ತೀರ್ಮಾನಿಸಿದ್ದಾರೆ.

ಹಿಂದೆ ಪಾಲಿಕೆಯಲ್ಲಿ ಇಲಿಗಳ ಹಾವಳಿ ತಡೆಯಲು ಖಾಸಗಿ ಸಂಸ್ಥೆಯೊಂದಕ್ಕೆ 4.97 ಲಕ್ಷ ರೂ.ಗಳಿಗೆ ಗುತ್ತಿಗೆ ನೀಡಲಾಗಿತ್ತು. ಅದರಂತೆ ಸಂಸ್ಥೆಯು ಪಾಲಿಕೆ ಕೇಂದ್ರ ಕಚೇರಿ, ಟೌನ್‌ಹಾಲ್‌, ಮಲ್ಲೇಶ್ವರದ ಐಪಿಪಿ ಕೇಂದ್ರದಲ್ಲಿ ಇಲಿಗಳನ್ನು ಹಿಡಿಯಬೇಕಿತ್ತು. ಆದರೆ, ಸಂಸ್ಥೆ ಸಮರ್ಪಕವಾಗಿ ಕೆಲಸ ಮಾಡದ ಹಿನ್ನೆಲೆಯಲ್ಲಿ ಇಲಿಗಳ ಸಂಖ್ಯೆ ಹೆಚ್ಚಾಗಿದೆ.
 
ಲೆಕ್ಕ ನೀಡದ ಸಂಸ್ಥೆ: ಗುತ್ತಿಗೆ ಪಡೆದ ಸಂಸ್ಥೆ ಕಾಲಕಾಲಕ್ಕೆ ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳಿಗೆ ಲೆಕ್ಕ ನೀಡಬೇಕು ಎಂದು ಗುತ್ತಿಗೆ ಷರತ್ತು ವಿಧಿಸಲಾಗಿತ್ತು. ಆದರೆ, ಸಂಸ್ಥೆ ಸಮರ್ಪಕ ಲೆಕ್ಕ ನೀಡಿಲ್ಲ. ಎರಡು ವರ್ಷಗಳಿಂದ ಎಷ್ಟು ಇಲಿ ಹಿಡಿಯಲಾಗಿದೆ, ಅದಕ್ಕೆ ಯಾವೆಲ್ಲ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ತಿಳಿಸಬೇಕಿತ್ತು. ಆದರೆ, ಅದ್ಯಾವುದೂ ಆಗಿಲ್ಲ.

ಇನ್ನು 2012ರಿಂದ 2013ರವರೆಗೆ ಇಲಿ ಹಿಡಿಯುವ ಕೆಲಸ ಮಾಡಲಾಗಿದ್ದು, 2012ರ ಅಕ್ಟೋಬರ್‌ನಿಂದ 2013ರ ಜನವರಿ ಹಾಗೂ 2013 ಆಗಸ್ಟ್‌ನಿಂದ ಅಕ್ಟೋಬರ್‌ವರೆಗಿನ 6 ತಿಂಗಳಲ್ಲಿ ಒಟ್ಟು 2 ಲಕ್ಷ ರೂ. ಖರ್ಚು ಮಾಡಿ 20 ಇಲಿಗಳನ್ನು ಹಿಡಿಯಲಾಗಿತ್ತು. ಅಂದರೆ ಒಂದು ಇಲಿಗೆ ಬಿಬಿಎಂಪಿ 10 ಸಾವಿರ ರೂ. ಖರ್ಚು ಮಾಡಿದಂತಾಗಿತ್ತು ಎಂಬುದು ದಾಖಲೆಗಳಿಂದ ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next