Advertisement

ಅಧಿಕಾರಕ್ಕೆ ಅಂಟಿಕೊಳ್ಳದ ರಾಷ್ಟ್ರನಾಯಕ

02:29 PM Apr 06, 2017 | Team Udayavani |

ದಾವಣಗೆರೆ: ಮಾಜಿ ಉಪ ಪ್ರಧಾನಿ, ಹಸಿರು ಕ್ರಾಂತಿ ಹರಿಕಾರ ಡಾ| ಬಾಬು ಜಗಜೀವನರಾಂ ದಲಿತರಿಗೆ ಮಾತ್ರವಲ್ಲ ಎಲ್ಲರಿಗೂ ಒಳಿತಾಗುವ ಕೆಲಸ ಮಾಡಿದ ಮಹಾನ್‌ ರಾಷ್ಟ್ರನಾಯಕ ಎಂದು ಮೈಸೂರಿನ ಮಾನಸಗಂಗ್ರೋತ್ರಿಯ ಡಾ| ಬಾಬು ಜಗಜೀವನರಾಂ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಂಶೋಧನಾ ಅಧಿಕಾರಿ ಡಾ| ಎಂ. ಶ್ರೀನಿವಾಸಮೂರ್ತಿ ಬಣ್ಣಿಸಿದ್ದಾರೆ. 

Advertisement

ಬುಧವಾರ ಡಾ|ಬಾಬು ಜಗಜೀವನರಾಂ ಭವನದಲ್ಲಿ ಮಾಜಿ ಉಪ ಪ್ರಧಾನಿ ಡಾ| ಬಾಬು ಜಗಜೀವನರಾಂ ಅವರ 110ನೇ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ನೇರ ನುಡಿ ಮತ್ತು ಸೌಜನ್ಯವಾಗಿ ಪ್ರಶ್ನಿಸುವ ಮನೋಭಾವ ಹೊಂದಿದ್ದ ಬಾಬೂಜಿ ಎಂದಿಗೂ ಅಧಿಕಾರಕ್ಕೆ ಅಂಟಿಕೊಳ್ಳಲಿಲ್ಲ ಎಂದರು. 

1908ರಲ್ಲಿ ಬಿಹಾರದ ಚಾಂದ್ವ ಗ್ರಾಮದಲ್ಲಿ ಜನಿಸಿದ ಜಗಜೀವನರಾಂರವರಲ್ಲಿ ರವಿದಾಸ ಸಂತ ಪರಂಪರೆಯ ಶಿವನಾರಾಯಣಿ ಪಂಥದ ಸಾತ್ವಿಕ ಪ್ರಭಾವ ಇತ್ತು. ಅಸಾಮಾನ್ಯ ವಿದ್ಯಾರ್ಥಿಯಾಗಿದ್ದ ಡಾ| ಜಗಜೀವನರಾಂ ಅವರ ಭಾಷಣದಿಂದ ಪ್ರಭಾವಿತಗೊಂಡ ಪಂಡಿತ್‌ ಮದನ ಮೋಹನ ಮಾಳವಿಯಾ ತಮ್ಮ ಬನಾರಸ್‌ ಹಿಂದು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಆಹ್ವಾನವಿತ್ತಿದ್ದರು ಎಂದು ತಿಳಿಸಿದರು. 

ಸ್ವ-ಸಾಮರ್ಥ್ಯದ ಮೂಲಕ ಸ್ವಾತಂತ್ರ ಚಳವಳಿ ಸಂದರ್ಭ ಮತ್ತು ಆನಂತರ ಚುನಾವಣೆಯಲ್ಲಿ ಮಹಾನ್‌ ನಾಯಕರೆಂದು ತೋರಿಸಿಕೊಟ್ಟರು. ಅತಿ ಕ್ಷಾಮದ ಸಂದರ್ಭದಲ್ಲಿ ಕೇಂದ್ರದ ಕೃಷಿ ಖಾತೆಯನ್ನು ಸವಾಲಾಗಿ ಸ್ವೀಕರಿಸಿ, ಹಸಿವಿನಿಂದ ಯಾರೂ ಸಾಯದ ಹಾಗೆ ನೋಡಿಕೊಳ್ಳುತ್ತೇನೆಂದು ಪಣ ತೊಟ್ಟರು.

ಆಧುನಿಕ ಕೃಷಿ ಪದ್ಧತಿಗೆ ಅನಕ್ಷರಸ್ಥ ರೈತರನ್ನು ಸಜ್ಜುಗೊಳಿಸಿದರು. ಆಹಾರದ ಸ್ವಾವಲಂಬನೆ ಸಾಧಿಸುವ ಮೂಲಕ ಹಸಿರು ಕ್ರಾಂತಿಯ ಹರಿಕಾರರಾದರು. ರಕ್ಷಣಾ ಸಚಿವರಾಗಿದ್ದಾಗ ಪಾಕಿಸ್ತಾನದ ವಿರುದ್ಧ ಯುದ್ಧ ಗೆದ್ದ ಕೀರ್ತಿ ಅವರಿಗೆ ಸಲ್ಲುತ್ತದೆ. ಬಾಬೂಜೀ ಕೇವಲ ದಲಿತರಿಗೆ ಮಾತ್ರವಲ್ಲ ಎಲ್ಲರಿಗೂ ಒಳಿತಾಗುವ ಕೆಲಸ ಮಾಡಿದವರು ಎಂದು ತಿಳಿಸಿದರು. 

Advertisement

ಜಗಜೀವನರಾಂ ಅವರು ಸಂವಿಧಾನಶಿಲ್ಪಿ ಡಾ| ಅಂಬೇಡ್ಕರ್‌ರವರನ್ನು ಉತ್ತಮ ನಾಯಕರೆಂದು ಒಪ್ಪಿಕೊಂಡಿದ್ದರು. ಆದರೆ, ಧರ್ಮದ ವಿಚಾರದಲ್ಲಿ ಅವರ ದೃಷ್ಟಿಕೋನ ಭಿನ್ನವಾಗಿದ್ದವು. ಇಂದಿಧಿ ರಾಗಾಂಧಿಯವರಧಿ 20 ಅಂಶಗಳ ಕಾರ್ಯಕ್ರಮದ ರೂವಾರಿ ಬಾಬು ಜಗಜೀವನರಾಂ ಅಂತರ್ಜಾತಿ  ವಿವಾಹದಿಂದ ಜಾತಿ ನಿರ್ಮೂಲನೆ ಸಾಧ್ಯ ಹೊರತು ಪಂಕ್ತಿಯೂಟ ಮತ್ತಿತರೆ ಮೇಲ್ಮಟ್ಟದ ಆಚರಣೆಗಳಿಂದ ಅಲ್ಲ ಎನ್ನುತ್ತಿದ್ದರು. 

ಅಂತಹ ಮಹಾನ್‌ ನಾಯಕನ ವಿಚಾರಧಾರೆ ಪಸರಿಸಲು ಸರ್ಕಾರ 5 ವಿಶ್ವವಿದ್ಯಾಲಯಗಳಿಗೆ ಅನುದಾನ ನೀಡಿದೆ. ಅಧ್ಯಯನ ಪೀಠ, ಭವನ ಪ್ರಾರಂಭಿಸುತ್ತಿದೆ ಎಂದು ತಿಳಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next