Advertisement

ಮಳಖೇಡದಲ್ಲಿ ನಾಳೆಯಿಂದ ರಾಷ್ಟ್ರಕೂಟ ಉತ್ಸವ

10:55 AM Mar 03, 2018 | |

ಕಲಬುರಗಿ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕು ಮಳಖೇಡದಲ್ಲಿ ಮಾರ್ಚ್‌ 4 ಹಾಗೂ 5ರಂದು ರಾಷ್ಟ್ರಕೂಟ ಉತ್ಸವ-2018 ಏರ್ಪಡಿಸಲಾಗಿದೆ.

Advertisement

ರಾಷ್ಟ್ರಕೂಟ ಉತ್ಸವದ ಅಂಗವಾಗಿ ಮಾರ್ಚ್‌ 4ರಂದು ಬೆಳಗ್ಗೆ 9:00ಕ್ಕೆ ಮಳಖೇಡದ ಕೋಟೆಯೊಳಗೆ ಪೂಜೆ ನೆರವೇರಿಸಲಾಗುತ್ತದೆ. ಬೆಳಗ್ಗೆ 9:00ರಿಂದ 11:00ರ ವರೆಗೆ ರಾಷ್ಟ್ರಕೂಟ ಉತ್ಸವದ ವೇದಿಕೆಯಲ್ಲಿ 8 ಕಲಾ ತಂಡಗಳಿಂದ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ.

ಅಂದು ಬೆಳಗ್ಗೆ 11:00ಕ್ಕೆ ಜ್ಞಾನಪೀಠ ಪುರಸ್ಕೃತ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಚಂದ್ರಶೇಖರ ಕುಂಬಾರ ರಾಷ್ಟ್ರಕೂಟ ಉತ್ಸವ ಉದ್ಘಾಟಿಸುವರು. ಮಳಖೇಡ ಭಂಗೀಮಠದ ಗಂಗಾಧರ ಶಿವಾಚಾರ್ಯ ಮಹಾಸ್ವಾಮೀಜಿ, ಮಳಖೇಡ ದರ್ಗಾದ ಹಜರತ್‌ ಸೈಯದ್‌ ಶಹಾ ಮುಸ್ತಫಾ ಖಾದ್ರಿ, ಸೇಡಂ ಶಿವಶಂಕರ ಮಠದ ಶಿವಶಂಕರ ಶಿವಚಾರ್ಯ ಮಹಾಸ್ವಾಮೀಜಿ, ಸೇಡಂ ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಮಹಾಸ್ವಾಮೀಜಿ, ಸೇಡಂ ಹಾಲಪ್ಪಯ್ಯ ಮಠದ ಪಂಚಾಕ್ಷರಿ ಮಹಾಸ್ವಾಮೀಜಿ ಹಾಗೂ ಮಳಖೇಡ ಉತ್ತರಾದಿಮಠದ ವ್ಯವಸ್ಥಾಪಕ ಪಂ| ವೆಂಕಣ್ಣಚಾರ್ಯರು ಸಾನ್ನಿಧ್ಯ ವಹಿಸುವರು. ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅವರು ವಿಶೇಷ ಆಮಂತ್ರಿತರಾಗಿ ಆಗಮಿಸುವರು.

ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಅಧ್ಯಕ್ಷತೆ ವಹಿಸಿ ಕವಿರಾಜ ಮಾರ್ಗ ಪ್ರತಿಕೃತಿ ಮಂಟಪ ಉದ್ಘಾಟಿಸುವರು. ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಖಾತೆ ಸಚಿವ ಪ್ರಿಯಾಂಕ ಖರ್ಗೆ ಮಾನ್ಯಖೇಡದ ರಾಷ್ಟ್ರಕೂಟರು ಪುಸ್ತಕ ಬಿಡುಗಡೆ ಮಾಡುವರು. ಲೋಕಸಭಾ ಸದಸ್ಯ ಡಾ| ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯಸಭಾ ಸದಸ್ಯ ಡಾ| ಬಸವರಾಜ ಪಾಟೀಲ ಸೇಡಂ ಅವರು ಚಿತ್ರಕಲಾ ಪ್ರದರ್ಶನ ಉದ್ಘಾಟಿಸುವರು. ಅಂದು ಮಧ್ಯಾಹ್ನ 12:45ರಿಂದ 1:20ರ ವರೆಗೆ ರಾಷ್ಟ್ರಕೂಟರ ಇತಿವೃತ್ತ ಹಾಗೂ ರಾಷ್ಟ್ರಕೂಟರು ಮತ್ತು ಧಾರ್ಮಿಕ ಸಹಿಷ್ಣುತೆ ಕುರಿತು 1ನೇ ಗೋಷ್ಠಿ, 1:35ರಿಂದ 2:20ರ ವರೆಗೆ ಕವಿರಾಜಮಾರ್ಗದ ಕನ್ನಡ ಜಗತ್ತು ಮತ್ತು ಕವಿರಾಜಮಾರ್ಗದ ದೇಸೀ-ಮಾರ್ಗ ಕುರಿತು 2ನೇ ಗೋಷ್ಠಿ, 2:35ರಿಂದ 3:10ರ ವರೆಗೆ ಸಮಕಾಲೀನ ಕನ್ನಡ ಭಾಷೆ ಸವಾಲುಗಳು ಕುರಿತು ವಿಶೇಷ ಸಂವಾದ ಕಾರ್ಯಕ್ರಮ ಮತ್ತು 3ನೇ ಗೋಷ್ಠಿ, ನಂತರ ಮಧುರ ಹಾಡು ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3:20ರಿಂದ ಸಂಜೆ 4:10ರ ವರೆಗೆ ಪದ್ಮಶ್ರೀ ಪುರಸ್ಕೃತ ಇಂಬ್ರಾಹಿಂ ಸುತಾರ ಅವರ ವಿಶೇಷ ಅನುಭಾವ ಕಾರ್ಯಕ್ರಮ ನಡೆಯಲಿದೆ. ಸಂಜೆ 4:25ರಿಂದ 5:00ರ ವರೆಗೆ ರಾಷ್ಟ್ರಕೂಟರ ಪರಂಪರೆ ಸೌಹಾರ್ದತೆ ನೆಲೆಗಳು ಹಾಗೂ ರಾಷ್ಟ್ರಕೂಟರ ಸಾಂಸ್ಕೃತಿಕ ಕೊಡುಗೆ ಕುರಿತು 4ನೇ ಗೋಷ್ಠಿ, ಹಾಗೂ ಸಂಜೆ 5:15ರಿಂದ 6:00ರ ವರೆಗೆ ರಾಷ್ಟ್ರಕೂಟರ ವಾಸ್ತುಶಿಲ್ಪ ಹಾಗೂ ರಾಷ್ಟ್ರಕೂಟರ ಶಾಸನಗಳು ಕುರಿತು 5ನೇ ಗೋಷ್ಠಿ ನಡೆಯಲಿದೆ.

ಮಾರ್ಚ್‌ 5ರಂದು ಬೆಳಗ್ಗೆ 8:30ರಿಂದ 9:30ರ ವರೆಗೆ ವಿವಿಧ ಎಂಟು ಜನ ಕಲಾವಿದರಿಂದ ವಿಶೇಷ ಗಾಯನ ಕಾರ್ಯಕ್ರಮಗಳು ನಡೆಯಲಿದೆ. ಬೆಳಗ್ಗೆ 9:30ರಿಂದ 10:15ರ ವರೆಗೆ ಕವಿರಾಜಮಾರ್ಗ ಪರಿಸರದ ಸಾಹಿತ್ಯ ಹಾಗೂ ರಾಷ್ಟ್ರಕೂಟರ ಕಾಲದ ಜಾನಪದ ಕುರಿತು 6ನೇ ಗೋಷ್ಠಿ, ಬೆಳಗ್ಗೆ 11:00ರಿಂದ ಮಧ್ಯಾಹ್ನ 12:5ರ ವರೆಗೆ ವಚನ, ದಾಸ, ತತ್ವಪದ ಮತ್ತು ಸೂಫಿಸಾಹಿತ್ಯ ಕುರಿತು 7ನೇ ಗೋಷ್ಠಿ ನಡೆಯಲಿದೆ. ಮಧ್ಯಾಹ್ನ 12:30ರಿಂದ 1:30ರ ವರೆಗೆ ಓಡಿಸಿ ನೃತ್ಯ ಕಾರ್ಯಕ್ರಮ, ಮಧ್ಯಾಹ್ನ 1:30ರಿಂದ 3:00ರ
ವರೆಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ.

Advertisement

ಮಧ್ಯಾಹ್ನ 3:00ರಿಂದ ಸಂಜೆ 4:30ರ ವರೆಗೆ ರಾಷ್ಟ್ರಕೂಟ ಉತ್ಸವದ ಸಮಾರೋಪ ಸಮಾರಂಭ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ| ಮಲ್ಲೇಪುರಂ ಜಿ. ವೆಂಕಟೇಶ ಸಮಾರೋಪ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಆಗಮಿಸಲಿದ್ದಾರೆ. ನಂತರ ಸಂಜೆ 4:30ರಿಂದ ರಾತ್ರಿ 11:30ರ ವರೆಗೆ ಕಲಬುರಗಿ ರಂಗಾಯಣದಿಂದ ಜಾನಪದ ನೃತ್ಯ, ಗಂಗಾವತಿ ಪ್ರಾಣೇಶ ಮತ್ತು ತಂಡದಿಂದ ನಗೆ ಹಬ್ಬ, ಮಾನ್ಯಖೇಟದ ಮುಕುಟ ನಾಟಕ, ಬೆಂಗಳೂರಿನ ಸುಮಾ ಅವರಿಂದ ಮಾತನಾಡಿಸುವ ಗೊಂಬೆ ಮತ್ತು ಕೊನೆಯದಾಗಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ ಜನ್ಯಾ ಮತ್ತು ತಂಡದಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next