ಈಗಾಗಲೇ ದಕ್ಷಿಣದಿಂದ ಉತ್ತರದತ್ತ ಮುಖ ಮಾಡಿರುವ ನಟಿ ರಶ್ಮಿಕಾ ಮಂದಣ್ಣ, ಬಾಲಿವುಡ್ ಸಿನಿಮಾ ರಂಗದಲ್ಲಿ ಮತ್ತೆ ಮಿಂಚಲು ರೆಡಿಯಾಗಿದ್ದಾರೆ. ಹಿಂದಿಯಲ್ಲಿ ಈಗಾಗಲೇ ಬಿಗ್ ಬಿ ಅಮಿತಾಭ್ ಬಚ್ಚನ್ ಜೊತೆ ತೆರೆ ಹಂಚಿಕೊಂಡಿರುವ ರಶ್ಮಿಕಾ, ಇದೀಗ ಶಾಹಿದ್ ಕಪೂರ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಸಿನಿಮಾಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಬಿಟೌನ್‌ನಲ್ಲಿ ಹರಿದಾಡುತ್ತಿದೆ.
ಇನ್ನು ಸದ್ಯಕ್ಕೆ ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. ರಣಬೀರ್ ಕಪೂರ್ ಜೊತೆ ಆನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದು, ವಿಕ್ಕಿ ಕೌಶಲ್ ಜೊತೆಯೂ ಒಂದು ಸಿನಿಮಾ ಮಾಡುತ್ತಿದ್ದಾರೆ. ಅಲ್ಲದೇ, ಛತ್ರಪತಿ ಶಿವಾಜಿ ಕುರಿತಾದ ಸಿನಿಮಾಗೂ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಶಾಹಿದ್ ಕಪೂರ್ ಅವರ ಹೊಸ ಸಿನಿಮಾ ಕೂಡ ರಶ್ಮಿಕಾಗೆ ಒಲಿದು ಬಂದಿದೆ.
ಮೂಲಗಳ ಪ್ರಕಾರ, ದಿಲ್ ರಾಜು, ಏಕ್ತಾ ಕಪೂರ್ ಜಂಟಿಯಾಗಿ ನಿರ್ಮಾಣ ಮಾಡಲಿರುವ, ಅನೀಸ್ ಬಾಜ್ಮಿ ನಿರ್ದೇಶನದಲ್ಲಿ ತಯಾರಾಗುವ ಹೊಸ ಚಿತ್ರಕ್ಕೆ ರಶ್ಮಿಕಾ ನಾಯಕಿ ಎನ್ನಲಾಗುತ್ತಿದೆ. ಬಿಗ್ ಬಜೆಟ್ ನಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಶಾಹಿದ್ ಹೊಸ ಬಗೆಯಲ್ಲಿ ಮೊದಲ ಬಾರಿಗೆ ದ್ವಿ ಪಾತ್ರದಲ್ಲಿ ಕಾಣಿಸಿ ಕೊಳ್ಳಲಿದ್ದಾರಂತೆ. ಈ ಪಾತ್ರಕ್ಕಾಗಿ ಈಗಾಗಲೇ ಶಾಹಿದ್ ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದು, ಸಿನಿಮಾಕ್ಕೆ ರಶ್ಮಿಕಾ ನಾಯಕಿಯಾದರೆ ಬೆಸ್ಟ್ ಎನ್ನುವ ಮಾತು ಚಿತ್ರತಂಡ ಅಭಿಪ್ರಾಯ. ಹೀಗಾಗಿ ಈಗಾಗಲೇ ಚಿತ್ರತಂಡ ಕೂಡ ರಶ್ಮಿಕಾ ಜೊತೆ ಮಾತನಾಡಿದ್ದು, ರಶ್ಮಿಕಾ ಕೂಡ ಈ ಆಫರ್ ಅನ್ನು ಖುಷಿಯಿಂದ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಶೀಘ್ರದಲ್ಲಿಯೇ ಈ ಸಿನಿಮಾದ ಟೈಟಲ್ ಮತ್ತಿತರ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಹೆಚ್ಚಿನ ಮಾಹಿತಿ ಹೊರ ಬರಲಿದೆ.