Advertisement

ದೇವರೇ..ಕೊಡವರು ಮಾಡಿದ ತಪ್ಪೇನು ? ರಶ್ಮಿಕಾ ಮಂದಣ್ಣ ಪತ್ರ 

02:06 PM Aug 23, 2018 | |

ಬೆಂಗಳೂರು : ಜಲಪ್ರಳಯಕ್ಕೆ ತತ್ತರಿಸಿ ಹೋಗಿರುವ ಕೊಡಗಿನ ನೋವಿಗೆ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಭಾವನಾತ್ಮಕ ಪತ್ರವೊಂದನ್ನು ಬರೆದು ಟ್ವೀಟ್‌ ಮಾಡಿ ದೇವರಲ್ಲೇ ಕೊಡಗಿನ ಜನರು ಮಾಡಿದ ತಪ್ಪೇನು ಎಂಬ ನಿವೇದನೆಯನ್ನು ಸಲ್ಲಿಸಿದ್ದಾರೆ. 

Advertisement

ಟ್ವೀಟ್‌ ಮಾಡಿರುವ ಪತ್ರ ಹೀಗಿದೆ

ನಮಗೆ ನೋವಾದಾಗ ಅಮ್ಮಾ..ಎಂದು ಕೂಗುತ್ತೇವೆ. ಅಮ್ಮನೇ ಮುನಿಸಿಕೊಂಡಾಗ ಯಾರನ್ನು ಕೂಗುವುದು,ಏನೆಂದು ಕೂಗುವುದು…ನಾ ಹುಟ್ಟಿದ ಬೆಳೆದ, ಆಡಿದ್ದ, ಓದಿದ್ದ , ಉಸಿರಾಡುತ್ತಿದ್ದ ಕೊಡಗು ಇಂದು ಮುಳುಗಿದ ಹಡಗಾಗಿದೆ.ಜಲಪ್ರಳಯಕ್ಕೆ ಲಕ್ಷಾಂತರ ಜನರು ಅಕ್ಷರಶಃ ನೀರುಪಾಲಾಗಿದ್ದಾರೆ. ಇದಕ್ಕೆ ಮೂಕ ಜೀವಿಗಳು ಹೊರತಾಗಿಲ್ಲ. ಯಾರಿಗೂ ನೋವು ಮಾಡದ ನಮ್ಮವರು ಇಂದು ನೋವಿನಲ್ಲಿದ್ದಾರೆ…

ಪ್ರಪಂಚದಲ್ಲಿ ಮೂರರಷ್ಟು ನೀರು ಒಂದರಷ್ಟು ಭೂಮಿ ಎಂಬುವುದನ್ನು ನೀರೆ ಮುಂದೆ ನಿಂತು ಹೇಳಿದಂತಿದೆ..!

ನಾನು, ನೀನು, ನಂದು, ನಿಂದು, ಮೇಲು, ಕೀಳು, ಶ್ರೀಮಂತಿಕೆ ಎಲ್ಲಾ ನೀರಿನಲ್ಲಿ ಕೊಚ್ಚಿ ಹೋಗಿದೆ. ಮನುಷ್ಯತ್ವವೇ ಕಣ್‌ತುಂಬಿಕೊಂಡಿದೆ. 
ಮಳೆಯ ಶಬ್ಧ, ನೀರಿನ ಆರ್ಭಟ ಕೇಳಿದರೆ ಜೀವ ನಡುಗುವಂತಾಗಿದೆ. 

Advertisement

ಮಕ್ಕಳು ಮಾಡಿದ ತಪ್ಪಾದರು ಏನು? ಪ್ರಾಣಿಗಳು ಮಾಡಿದ ತಪ್ಪಾದರು ಏನು? ದೇವರೇ ಉತ್ತರಿಸು..

ಬೆಟ್ಟಗಳು ನೆಂದು ನೆಲವಾಗಿ ಬಯಲು ಕೆರೆಗಳಾಗಿ, ದಾರಿಗಳು ನದಿಗಳಾಗಿ ಕೊಡಗು ಸಮುದ್ರವಾಗಿದೆ…ನೀರು, ನೀರು, ನೀರು ಬಿಟ್ಟರೆ ಕಣ್ಣೀರು..

ಧೈರ್ಯವಾಗಿರಿ ನಾವಿದ್ದೇವೆ ಎಂಬ ನಿಮ್ಮಗಳ ಮಾತು ನಮ್ಮನ್ನು ಜೀವಂತವಾಗಿರಿಸಿದೆ. 

ಸರ್ಕಾರಗಳು , ಸ್ವಯಂ ಸಂಘಗಳು, ಸಂಸ್ಥೆಗಳು, ಚಿತ್ರರಂಗದವರು, ಪತ್ರಕರ್ತರು,ಮಾಧ್ಯಮದವರು, ವಿದ್ಯಾರ್ಥಿಗಳು,ಕೋಟ್ಯನುಕೋಟಿ ಕನ್ನಡಿಗರು, ಲ್ಲಾ ಭಾಷಿಕರು ಪ್ರಪಂಚದ ಮೂಲೆ ಮೂಲೆಗಳಲ್ಲಿರುವ ಕೊಡವ ಸಮಾಜದವರು, ನೀವುಗಳು ಕೈಮೀರಿ ಸಹಾಯ ಮಾಡಿದ್ದೀರಿ, ಮಾಡುತ್ತಿದ್ದೀರಿ. ಬಳ್ಳಾರಿಯ ಜೈಲಿನ ಕೈದಿಗಳು ನಾಲ್ಕು ವಾರಗಳ ಮಾಂಸದೂಟ ಬೇಡವೆಂದು 3 ಲಕ್ಷ ರೂಪಾಯಿ ಕೊಡಗಿನ ಸಂತ್ರಸ್ತ್ರರಿಗೆ ಕಳುಹಿಸಿದ್ದಾರೆಂದರೆ ಮನುಷ್ಯತ್ವ ನಮಗಿಂತ ಮುಂದಿದೆ ಎನಿಸುತ್ತದೆ. ನಿಮ್ಮ ಸಹಾಯಕ್ಕೆ ಸ್ಪಂದನೆಗೆ ನಾನು ಋಣಿ…

ಮನಪೂರ್ವಕವಾಗಿ ಕೊಡಗಿನ ಪರವಾಗಿ ಒದ್ದೆ ಕಣ್ಣಿನಿಂದ ವಂದಿಸುತ್ತಿದ್ದೇನೆ. ಕೊಡಗನ್ನು ಕೊಡಗಿನವರ ನೆಂದ ನೊಂದ ಬದುಕನ್ನು ಪುನರ್‌ ನಿರ್ಮಿಸಬೇಕಾಗಿದೆ.  ಕೈ ಜೋಡಿಸಿ ನಾನು ನಿಮ್ಮೊಂದಿಗೆ ಇರುತ್ತೇನೆ ..ರಶ್ಮಿಕಾ ಮಂದಣ್ಣ 

Advertisement

Udayavani is now on Telegram. Click here to join our channel and stay updated with the latest news.

Next