Advertisement
ತೆಲುಗು, ತಮಿಳು ಅಂದ್ರೆ ಓಕೆ. ಕನ್ನಡ ಅಂದ್ರೆ ಯಾಕೆ?: “ಗೀತ ಗೋವಿಂದಂ’ ಚಿತ್ರದ ಬಹುದೊಡ್ಡ ಸಕ್ಸಸ್ ನಂತರ ಅಲ್ಲೀಗ ಅವರು ಬಹುಬೇಡಿಕೆಯ ನಟಿ. ಹೀಗಾಗಿ ತಮಗೆ ಬಹುಬೇಡಿಕೆಯಿರುವುದರಿಂದ ರಶ್ಮಿಕಾ ಈಗ ತೆಲುಗು ಕಲಿತುಕೊಂಡಿದ್ದಾರೆ. ಜೊತೆಗೆ ತಮಿಳು ಭಾಷೆಯ ಮೇಲೂ ಹಿಡಿತ ಸಾಧಿಸಿದ್ದಾರೆ. ಇತ್ತೀಚೆಗೆ ತಮ್ಮ “ಡಿಯರ್ ಕಾಮ್ರೆಡ್’ ಚಿತ್ರದ ಪ್ರಚಾರಕ್ಕೆ ಹೈದರಾಬಾದ್‌ನಲ್ಲಿ ಇದ್ದಾಗ ತೆಲುಗಿನಲ್ಲೇ ಮಾತನಾಡುತ್ತಿದ್ದ ರಶ್ಮಿಕಾ, ಚೆನ್ನೈಗೆ ಹೋದಾಗ ಶುದ್ಧ ತಮಿಳಿನಲ್ಲಿ ಮಾತನಾಡಿದ್ದರು.
Related Articles
Advertisement
ಕನ್ನಡದ ಬಗ್ಗೆ ಯಾಕೆ ಈ ಧೋರಣೆ?: ಕನ್ನಡದಿಂದಲೇ ನಟಿಯಾಗಿ ಹೋಗಿ ಟಾಲಿವುಡ್‌ನಲ್ಲಿ ಮಿಂಚುತ್ತಿರುವ ರಶ್ಮಿಕಾ, ಕನ್ನಡದ ಬಗ್ಗೆ ತೋರುತ್ತಿರುವ ಧೋರಣೆ ಸರಿಯಲ್ಲ ಎನ್ನುವುದು ಒಕ್ಕೊರಲ ಅಭಿಪ್ರಾಯ. ಕರ್ನಾಟಕದಲ್ಲಿ ಇರುವಾಗಲೂ ಅದರಲ್ಲೂ ಕನ್ನಡದ ಮಾಧ್ಯಮಗಳ ಮುಂದೆ ಬಂದಾಗಲೂ ಉದ್ದೇಶ ಪೂರ್ವಕವಾಗಿಯೇ ಇಂಗ್ಲೀಷ್ ಮತ್ತು ತೆಲುಗಿನಲ್ಲಿಯೇ ಮಾತನಾಡುತ್ತಾರೆ. ಇತ್ತೀಚೆಗೆ “ಡಿಯರ್ ಕಾಮ್ರೆಡ್’ ಚಿತ್ರದ ಪ್ರಚಾರಕ್ಕೆ ನಟ ವಿಜಯ್ ದೇವರಕೊಂಡ ಜತೆಗೆ ಬೆಂಗಳೂರಿಗೆ ಬಂದಾಗಲೂ ಇದೇ ಪುನಾರಾವರ್ತನೆ ಆಯಿತು.
“ಡಿಯರ್ ಕಾಮ್ರೆಡ್’ ಚಿತ್ರದ ಕನ್ನಡದ ಅವತರಣಿಕೆಗೆ ನಾನೇ ವಾಯ್ಸ್ ಡಬ್ಬಿಂಗ್ ಮಾಡಿದ್ದೇನೆ. ಇದು ತಮಗೆ ಸಾಕಷ್ಟು ಖುಷಿ ತಂದಿದೆ ಎಂಬುದಾಗಿ ಸಂತೋಷಪಟ್ಟರೂ, ಅವರು ಅಲ್ಲಿ ಮಾತನಾಡಿದ್ದು ಮಾತ್ರ ಇಂಗ್ಲಿಷ್ ಮಿಶ್ರಿತ ಕಂಗ್ಲೀಷ್‌ನಲ್ಲಿ! ಅದರಲ್ಲೂ ತೆಲುಗು ಪದಗಳೇ ಹೆಚ್ಚಿದ್ದವು. ಪತ್ರಿಕಾಗೋಷ್ಠಿಯಲ್ಲಿನ ಅವರು ಮಾತುಗಳಿನ್ನು ಕೇಳಿದ್ದ ಸಿನಿ ಪ್ರೇಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಅದರ ಹಿಂದೆಯೇ ರಶ್ಮಿಕಾ ಈಗ ತಮಿಳಿನಲ್ಲಿ ನೀಡಿರುವ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದ್ದು, ಕನ್ನಡದ ಸಿನಿ ಪ್ರೇಕ್ಷಕರ ಆಕ್ರೋಶ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ರಶ್ಮಿಕಾ ಮಂದಣ್ಣ ವಿರುದ್ಧ ಮಂಡಳಿಗೆ ದೂರು: “ಕನ್ನಡ ನನಗೆ ಬಲು ಕಷ್ಟ. ಕನ್ನಡ ಮಾತನಾಡಲು ಬರುವುದಿಲ್ಲ’ ಎಂದಿದ್ದ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ. ಕೆಲ ದಿನಗಳ ಹಿಂದೆ ಪರಭಾಷೆಯ ವಾಹಿನಿಯ ಸಂದರ್ಶನದಲ್ಲಿ, ನಟಿ ರಶ್ಮಿಕಾ ಮಂದಣ್ಣ ಸುಳ್ಳು ಹೇಳಿಕೆ ನೀಡಿದ್ದಾರೆ. ಅದ್ದರಿಂದ ರಶ್ಮಿಕಾ ಸಿನಿಮಾಗಳನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡಬಾರದು.
ಕನ್ನಡದಿಂದಲೇ ಬೆಳೆದು, ಕನ್ನಡವನ್ನು ತಾತ್ಸಾರದಿಂದ ನೋಡುವ ಇಂತಹ ನಟಿಯರಿಗೆ ಇದು ಪಾಠವಾಗಬೇಕು ಎಂದು ಕನ್ನಡ ಪರ ಹೋರಾಟಗಾರರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, “ರಶ್ಮಿಕಾ ಮಂದಣ್ಣ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಚೇಂಬರ್‌ಗೆ ದೂರು ನೀಡಿದ್ದಾರೆ. ಈ ಬಗ್ಗೆ ಶೀಘ್ರದಲ್ಲಿಯೇ ರಶ್ಮಿಕಾ ಅವರನ್ನು ಕರೆದು ಮಾತನಾಡಲಾಗುವುದು. ಅವರ ಹೇಳಿಕೆ, ನಿಲುವುಗಳ ಪರಾಮರ್ಶೆಯ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದಿದ್ದಾರೆ.