“ದುನಿಯಾ’ ರಶ್ಮಿ ಇಲ್ಲಿ ಮಾತಾಡುವುದಿಲ್ಲ…! ಹೀಗೆಂದಾಗ, ಒಂದಷ್ಟು ಪ್ರಶ್ನೆಗಳು ಓಡಾಡುವುದುಂಟು. ವಿಷಯ ಏನೆಂದರೆ, “ದುನಿಯಾ’ ರಶ್ಮಿ “ಕಾರ್ನಿ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ವಿಷಯ ಎಲ್ಲರಿಗೂ ಗೊತ್ತಿದೆ. ಆ ಚಿತ್ರ ಈಗ ಬಿಡುಗಡೆಗೆ ರೆಡಿಯಾಗಿದೆ. ಇದೇ ಮೊದಲ ಬಾರಿಗೆ ರಶ್ಮಿ ಈ ಚಿತ್ರದಲ್ಲಿ ಮಾತನಾಡದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಕೇವಲ ಸನ್ನೆ ಮಾಡುವ ಮೂಲಕವೇ ಇಡೀ ಚಿತ್ರದಲ್ಲಿ ನಟಿಸಿದ್ದಾರೆ.
ಎರಡು ದೃಶ್ಯ ಹೊರತುಪಡಿಸಿದರೆ, ಇಡೀ ಚಿತ್ರದುದ್ದಕ್ಕೂ ರಶ್ಮಿ ಅವರದು ಸನ್ನೆ ಮಾಡುವ ಪಾತ್ರ. ಅಷ್ಟೇ ಆಗಿದ್ದರೆ ಸುದ್ದಿಯಾಗುತ್ತಿರಲಿಲ್ಲ. ರಶ್ಮಿ ಇಲ್ಲಿ ಮೊದಲ ಸಲ ಫೈಟ್ ಕೂಡ ಮಾಡಿದ್ದಾರೆ. ಅದು ಯಾರೊಂದಿಗೆ ಅನ್ನುವುದನ್ನು ತೆರೆಯ ಮೇಲೆಯೇ ನೋಡಬೇಕು. “ಕಾರ್ನಿ’ ಅಂದರೆ, ದೇವಿಯ ಆಯುಧದ ಹೆಸರು. ಸಂಹಾರಕ್ಕೆ ಬಳಸುವ ಆಯುಧಕ್ಕೆ “ಕಾರ್ನಿ’ ಎಂಬ ಹೆಸರಿದೆ. ಇದು ಸಂಸ್ಕೃತ ಪದ.
ಕಥೆಗೆ ಸೂಕ್ತವೆನಿಸಿ, ನಿರ್ದೇಶಕ ವಿನಿ (ವಿನೋದ್‌ಕುಮಾರ್) “ಕಾರ್ನಿ’ ಅಂತ ಹೆಸರಿಟ್ಟಿದ್ದಾರೆ. ಹಾಗಾದರೆ, ಇಲ್ಲಿ ರಶ್ಮಿಯೇ “ಕಾರ್ನಿ’ ಅಂದುಕೊಂಡರೂ ಅಚ್ಚರಿ ಇಲ್ಲ. ಇಡೀ ಚಿತ್ರ ರಶ್ಮಿ ಅವರ ಸುತ್ತವೇ ಸಾಗಲಿದೆ. ಹಾಗಂತ, ನಾಯಕ ಇಲ್ಲವೆಂದಲ್ಲ ನಿರಂತ್ ಎಂಬ ಹೊಸ ಹುಡುಗ ಇಲ್ಲಿ ನಾಯಕ. ರಶ್ಮಿ ಹೇಳುವಂತೆ, “ಪ್ರೀತಿ ಕಿತಾಬು’ ಬಳಿಕ ಬಂದ ಯಾವ ಕಥೆಯೂ ಇಷ್ಟವಾಗಿಲ್ಲ. ಎರಡು ವರ್ಷ ಗ್ಯಾಪ್‌ನಲ್ಲಿದ್ದ ಅವರಿಗೆ “ಕಾರ್ನಿ’ ಇಷ್ಟವಾಗಿದ್ದು, ಕಥೆ ಮತ್ತು ಪಾತ್ರ.
ಅವರಿಗೆ ಮೊದಲ ಸಲ ಇಲ್ಲಿ ವಿಭಿನ್ನ ಪಾತ್ರ ಸಿಕ್ಕಿದೆಯಂತೆ. ಮೇಕ್ ಓವರ್ ಚೇಂಜ್ ಆಗಿರಬೇಕು ಎಂಬ ಕಾರಣಕ್ಕೆ ಒಳ್ಳೆಯ ಕಥೆಗಾಗಿ ಎದುರು ನೋಡುತ್ತಿರುವಾಗ ಸಿಕ್ಕ ಕಥೆ “ಕಾರ್ನಿ’. ಅವರಿಗಿಲ್ಲಿ ಚಾಲೆಂಜ್ ಎನಿಸಿದ್ದು, ಸಂಭಾಷಣೆಯೇ ಇಲ್ಲದೆ, ಕೇವಲ ಸನ್ನೆಯಲ್ಲೇ ಅಭಿನಯಿಸಿ ತೋರಿಸಬೇಕಾಗಿದ್ದು. ಅದೊಂದು ಟಫ್ ಟಾಸ್ಕ್ ಎನ್ನುವ ರಶ್ಮಿ, ಆ ಪಾತ್ರಕ್ಕೆ ಸಾಕಷ್ಟು ವರ್ಕ್‌ಶಾಪ್ ಮಾಡಿ ಮಾಡಿದ್ದಾಗಿ ಹೇಳುತ್ತಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ.
ಕನ್ನಡಕ್ಕೊಂದು ಹೊಸತನ ಕಾಣಬಹುದು. ನನಗೆ ಮೊದಲ ಸಲ ಫೈಟ್ ಮಾಡುವ ಅವಕಾಶವೂ ಸಿಕ್ಕಿದೆ ಎನ್ನುವ ರಶ್ಮಿ, ಹದಿನೈದು ರಾತ್ರಿಗಳನ್ನು ಭಯಾನಕ ಬಂಗಲೆಯೊಂದರಲ್ಲಿ ಈ ಚಿತ್ರಕ್ಕಾಗಿ ಕಳೆದಿದ್ದಾಗಿ ವಿವರಿಸುತ್ತಾರೆ. ಸಂಜೆ 6ಕ್ಕೆ ಚಿತ್ರೀಕರಣ ಶುರುವಾದರೆ, ಮುಂಜಾನೆ 7 ರವರೆಗೆ ಚಿತ್ರೀಕರಣ ನಡೆಯುತ್ತಿತ್ತು. ಒಂದು ಚೂರು ಕೂಡ ನಿದ್ದೆ ಮಾಡಲು ಅವಕಾಶ ಇರುತ್ತಿರಲಿಲ್ಲ.
ನಾನು “ಕಾರ್ನಿ’ ನೋಡಿದ್ದೇನೆ. ಹಾಲಿವುಡ್ ಶೈಲಿಯಲ್ಲೇ ಸೌಂಡ್ ಡಿಸೈನ್ ಮಾಡಲಾಗಿದೆ. ಮೇಕಿಂಗ್ ಕೂಡ ಹೊಸದಾಗಿದೆ. ನನ್ನ ಮಟ್ಟಿಗೆ ಹೇಳುವುದಾದರೆ, “ಕಾರ್ನಿ’ ಹೊಸ ಇಮೇಜ್ ಕಲ್ಪಿಸಿಕೊಡುವ ಚಿತ್ರವಾಗಲಿದೆ ಎನ್ನುತ್ತಾರೆ. ಸದ್ಯಕ್ಕೆ ರಶ್ಮಿ ಕಥೆ ಕೇಳುತ್ತಿದ್ದಾರೆ. ಕಳೆದ ವಾರ ನಾಲ್ಕು ಕಥೆ ಕೇಳಿದ್ದು, ಅದರಲ್ಲಿ ಒಂದು ಓಕೆ ಮಾಡಿದ್ದಾರೆ. ಅದು ಇಷ್ಟರಲ್ಲೇ ಚಿತ್ರೀಕರಣ ಶುರುವಾಗಲಿದೆಯಂತೆ.
ಬಹುತೇಕ ಹೊಸ ತಂಡ ಆ ಚಿತ್ರ ಮಾಡುತ್ತಿದೆ. ಇನ್ನು, “ಕಾರ್ನಿ’ ಜೊತೆಗೆ “ಆಟಕ್ಕುಂಟು ಲೆಕ್ಕಕ್ಕಿಲ್ಲ’ ಚಿತ್ರ ಕೂಡ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ರಶ್ಮಿ ಕನ್ನಡ ಚಿತ್ರರಂಗಕ್ಕೆ ಬಂದು ಹತ್ತು ವರ್ಷ ಕಳೆದಿದೆ. ಅವರಿಗೆ ದುನಿಯಾ ನಂತರ ಹಿಟ್ ಸಿನಿಮಾ ಸಿಕ್ಕಿಲ್ಲ. ಆವರೇಜ್ ಚಿತ್ರದಲ್ಲೇ ಕಾಣಿಸಿಕೊಂಡಿರುವ ರಶ್ಮಿಗೆ ಇನ್ನೊಂದು ಹಿಟ್ ಕೊಡುವ ಆಸೆ. ಅಂತಹ ಹಿಟ್ “ಕಾರ್ನಿ’ ಆಗಲಿ ಎಂಬ ಆಶಯ ರಶ್ಮಿ ಅವರದು.