Advertisement

ಜಗನ್ನಾಥನ ಸನ್ನಿಧಿಯಲ್ಲಿ ರಶ್ಮಿಯ ಜಪ

09:00 AM Jul 25, 2019 | Lakshmi GovindaRaj |

ಕೆಲ ಸಮಯದಿಂದ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಎಲ್ಲೂ ಕಾಣಿಸಿಕೊಂಡಿರದ ನಟಿ ದುನಿಯಾ ರಶ್ಮಿ, ಈಗ ಸಾಲು ಸಾಲು ಚಿತ್ರಗಳ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಸೆಂಟಿಮೆಂಟ್‌ ಚಿತ್ರಗಳಿಗೆ ಹೆಸರಾದ ನಿರ್ದೇಶಕ ಓಂ ಸಾಯಿಪ್ರಕಾಶ್‌ ಅವರು ಈಗ ಪಕ್ಕಾ ಆ್ಯಕ್ಷನ್‌, ಲವ್‌, ಕಮರ್ಷಿಯಲ್‌ ಸಿನಿಮಾಗೆ ಕೈ ಹಾಕಿದ್ದಾರೆ. ಕನ್ನಡ ಚಿತ್ರರಂಗದ ಎಲ್ಲಾ ಸೂಪರ್‌ ಸ್ಟಾರ್‌ ಚಿತ್ರಗಳಿಗೂ ಆ್ಯಕ್ಷನ್‌-ಕಟ್‌ ಹೇಳಿರುವ ಸಾಯಿಪ್ರಕಾಶ್‌ ಈಗ ಲಿಖಿತ್‌ ರಾಜ್‌ ಎಂಬ ಹೊಸ ಪ್ರತಿಭೆಯೊಂದನ್ನು ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ.

Advertisement

“ಜಗ್ಗಿ ಜಗನ್ನಾಥ್‌’ ಎಂಬ ಹೆಸರಿನ ಈ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳೆಲ್ಲಾ ಮುಕ್ತಾಯಗೊಂಡು, ಇತ್ತೀಚೆಗಷ್ಟೇ ಸಿನಿಮಾದ ಪ್ರಥಮ ಪ್ರತಿ ಕೂಡ ಹೊರಬಂದಿದೆ. ಈ ಚಿತ್ರದ ಮೂಲಕ ಬಹು ದಿನಗಳ ನಂತರ ದುನಿಯಾ ರಶ್ಮಿ ನಾಯಕಿಯಾಗಿ ತೆರೆಯ ಮೇಲೆ ಬರುತ್ತಿದ್ದಾರೆ. ಇದರ ಜೊತೆಗೆ ಡೈಲಾಗ್‌ ಕಿಂಗ್‌ ಸಾಯಿಕುಮಾರ್‌ ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂರು ಹಾಡುಗಳನ್ನು ರಾಜಾಸ್ತಾನದ ಸುಂದರ ಲೊಕೇಶನ್‌ಗಳಲ್ಲಿ ಶೂಟಿಂಗ್‌ ಮಾಡಲಾಗಿದೆ.

ಚಿತ್ರದಲ್ಲಿ ಭಿನ್ನ ಪ್ರೇಮಕಥೆ ಹಾಗೂ ಆ್ಯಕ್ಷನ್‌ ಜೊತೆಗೆ ಅಂಡರ್‌ವರ್ಲ್ಡ್ ಅಂಶಗಳನ್ನು ಸೇರಿಸಲಾಗಿದೆಯಂತೆ. ಪೇಪರ್‌ ಆಯುವ ಸಾಮಾನ್ಯ ಯುವಕನೊಬ್ಬ ಅಘೋರಿಯಾದ ನೈಜ ಘಟನೆಯನ್ನು “ಜಗ್ಗಿ ಜಗನ್ನಾಥ್‌’ ಚಿತ್ರದಲ್ಲಿ ಹೇಳಲಾಗಿದೆ. ಚಿತ್ರದ ಬಗ್ಗೆ ಮಾತನಾಡುವ ರಶ್ಮಿ, “ಇದು ನಾನು ಮೂರು ವರ್ಷಗಳ ಹಿಂದೆ ಒಪ್ಪಿಕೊಂಡ ಸಿನಿಮಾ. ಪಾತ್ರ ಚೆನ್ನಾಗಿದೆ. ಬಡ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ.

ಹೀಗಿರುವಾಗ ಆಕೆಯ ಜೀವನದಲ್ಲಿ ಪ್ರೀತಿಯಾಗಿ, ಮುಂದೆ ಅದರಿಂದ ಏನೇನಾಗುತ್ತದೆ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆ’ ಎನ್ನುವುದು ರಶ್ಮಿ ಮಾತು. ಹೆಚ್‌. ಜಯರಾಜು, ಜಿ.ಶಾರದ, ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎ.ಎಂ. ನೀಲ್‌ ಸಂಗೀತ, ರೇಣುಕುಮಾರ್‌ ಛಾಯಾಗ್ರಹಣವಿದೆ. ಚಿತ್ರದಲ್ಲಿ ಲಿಖಿತ್‌ ರಾಜ್‌, ದುನಿಯಾ ರಶ್ಮಿ, ಸಾಯಿಕುಮಾರ್‌, ತಬಲಾ ನಾಣಿ, ಪದ್ಮಜಾ ರಾವ್‌, ಲಯ ಕೋಕಿಲ, ಮೈಕೋ ನಾಗರಾಜ್‌, ಪೆಟ್ರೋಲ್‌ ಪ್ರಸನ್ನ, ಕಡ್ಡಿಪುಡಿ ಚಂದ್ರು, ಮುನಿ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.