Advertisement

ಮತ್ತೆ ರೇಷನಿಂಗ್‌: ಮಂಗಳೂರಿಗೆ ಇಂದು, ನಾಳೆ ನೀರಿಲ್ಲ

01:43 AM May 07, 2019 | Sriram |

ಮಂಗಳೂರು: ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಜಾರಿಯಲ್ಲಿರುವ ನೀರು ರೇಷನಿಂಗ್‌ ನಿಯಮದಂತೆ ಮೇ 7 ಹಾಗೂ 8ರಂದು ಮಂಗಳೂರು ನಗರಕ್ಕೆ ನೀರು ಸರಬರಾಜು ಸ್ಥಗಿತವಾಗಲಿದೆ.

Advertisement

ಪಾಲಿಕೆ ನಿಯಮದ ಪ್ರಕಾರ, ಮೇ 3ರ ಬೆಳಗ್ಗೆ 6ರಿಂದ ಮೇ 7ರ ಬೆಳಗ್ಗೆ 6 ಗಂಟೆ ವರೆಗೆ (96 ಗಂಟೆ) ನೀರು ಸರಬರಾಜು ನಡೆಯಲಿದೆ. ಮೇ 7ರಂದು ಬೆಳಗ್ಗೆ 6 ಗಂಟೆಯಿಂದ ಮೇ 9ರ ಬೆಳಗ್ಗೆ 6 ಗಂಟೆ ವರೆಗೆ ಪೂರೈಕೆ ಇರುವುದಿಲ್ಲ. ಮೇ 9ರ ಬೆಳಗ್ಗೆ 6 ಗಂಟೆಯಿಂದ ಮೇ 13ರ ಬೆಳಗ್ಗೆ 6 ಗಂಟೆ ವರೆಗೆ 96 ತಾಸು ಕಾಲ ಸರಬರಾಜು ಇರಲಿದೆ. ಮೇ 15ರ ಬೆಳಗ್ಗೆ 6ರ ವರೆಗೆ ಸ್ಥಗಿತಗೊಳ್ಳುತ್ತದೆ. ಮೇ 15ರಂದು 6ರಿಂದ ಪ್ರಾರಂಭವಾಗುವ ಪೂರೈಕೆ ಮೇ 19ರ ಬೆಳಗ್ಗೆ 6 ಗಂಟೆಯವರೆಗೆ ಸರಬರಾಜು ಮಾಡಲಾಗುತ್ತದೆ. ಬಳಿಕ ಸ್ಥಗಿತ ಗೊಳ್ಳಲಿದ್ದು ಮೇ 21ರ ಬೆಳಗ್ಗೆ 6ಕ್ಕೆ ಪ್ರಾರಂಭಗೊಳ್ಳಲಿದೆ.

ಗೊಂದಲದ ಗೂಡು
ಈ ಮಧ್ಯೆ ನೀರು ರೇಷನಿಂಗ್‌ ನಿರ್ವಹಣೆಯಲ್ಲಿ ತಲೆದೋರಿರುವ ಸಮಸ್ಯೆಗಳಿಂದಾಗಿ ಕುಡಿಯವ ನೀರು ವಿತರಣೆ ಗೊಂದಲದ ಗೂಡಾಗಿದೆ. ಕೊನೆಯ ಹಾಗೂ ಎತ್ತರದ ಪ್ರದೇಶಗಳಿಗೆ ನೀರು ಲಭ್ಯತೆ ದುಸ್ತರವಾಗಿದ್ದು ಜನತೆ ಕುಡಿಯುವ ನೀರಿಗಾಗಿ ಸಂಕಷ್ಟ ಅನುಭವಿಸುವಂತಾಗಿದೆ. ಈ ಭಾಗಕ್ಕೆ ಸದ್ಯಕ್ಕೆ ಟ್ಯಾಂಕರ್‌ ನೀರೇ ಗತಿ.

ಮನಪಾ ಆಯುಕ್ತ ನಾರಾಯಣಪ್ಪ ಅವರು “ಉದಯವಾಣಿ’ ಜತೆಗೆ ಮಾತನಾಡಿ, “ಪಾಲಿಕೆ ವ್ಯಾಪ್ತಿಯಲ್ಲಿ ಸದ್ಯ ನೀರು ರೇಷನಿಂಗ್‌ ಜಾರಿಯಲ್ಲಿದ್ದು, ಹೀಗಾಗಿ ಕೆಲವು ಎತ್ತರದ ಪ್ರದೇಶಗಳಿಗೆ ನೀರು ಸರಬರಾಜಿನಲ್ಲಿ ಸಮಸ್ಯೆಯಾಗುತ್ತಿದೆ. ಅಂತಹ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ’ ಎಂದರು.

ಮಂಗಳೂರಿಗೆ ನೀರುಣಿಸುವ ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರಿನ ಮಟ್ಟ ದಿನಕ್ಕೆ 5ರಿಂದ 5 ಸೆಂ.ಮೀ ಕುಸಿಯುತ್ತಿದೆ. ಸೋಮವಾರ ಬೆಳಗ್ಗೆ 4.38 ಮೀ. ಇದ್ದ ನೀರಿನ ಮಟ್ಟ ಸಂಜೆಯ ವೇಳೆಗೆ 4.34 ಮೀ.ಗೆ ಇಳಿದಿದೆ. ಪ್ರಸ್ತುತ ರೂಪಿಸಿರುವ ನೀರಿನ ರೇಷನಿಂಗ್‌ ಸ್ವರೂಪ ಮೇ 21ರ ವರೆಗೆ ಜಾರಿಯಲ್ಲಿರುತ್ತದೆ. ಆ ಸಮಯದಲ್ಲಿ ಡ್ಯಾಂನಲ್ಲಿರುವ ನೀರಿನ ಪ್ರಮಾಣವನ್ನು ಅಂದಾಜಿಸಿಕೊಂಡು ಮಹಾನಗರ ಪಾಲಿಕೆ ಮುಂದಿನ ರೇಷನಿಂಗ್‌ ಸ್ವರೂಪವನ್ನು ನಿರ್ಧರಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next