Advertisement

ಬಾಂಗ್ಲಾದೇಶಕ್ಕೆ ವೈಟ್‌ವಾಶ್‌: ಟಿ20ಯಲ್ಲಿ ಅಫ್ಘಾನ್‌ ಪರಾಕ್ರಮ

06:00 AM Jun 09, 2018 | Team Udayavani |

ಡೆಹ್ರಾಡೂನ್‌: ಬಾಂಗ್ಲಾದೇಶವನ್ನು 3ನೇ ಟಿ20 ಪಂದ್ಯದಲ್ಲೂ ಕೆಡವಿದ ಅಫ್ಘಾನಿಸ್ಥಾನ ಕ್ಲೀನ್‌ಸ್ವೀಪ್‌ ಸಾಧನೆಯೊಂದಿಗೆ ಮೆರೆದಿದೆ. ಡೆಹ್ರಾಡೂನ್‌ನಲ್ಲಿ ಗುರುವಾರ ರಾತ್ರಿ ನಡೆದ ಅಂತಿಮ ಮುಖಾಮುಖೀಯಲ್ಲಿ ಅಫ್ಘಾನ್‌ ಪಡೆ ಒಂದು ರನ್ನಿನ ರೋಚಕ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್‌ ನಡೆಸಿದ ಅಫ್ಘಾನಿಸ್ಥಾನ 6 ವಿಕೆಟಿಗೆ 145 ರನ್‌ ಗಳಿಸಿದರೆ, ಇದನ್ನು ದಿಟ್ಟ ರೀತಿಯಲ್ಲೇ ಬೆನ್ನಟ್ಟಿದ ಬಾಂಗ್ಲಾದೇಶ 6 ವಿಕೆಟಿಗೆ 144ರ ತನಕ ಬಂದು ತನ್ನ ದುರದೃಷ್ಟವನ್ನು ಹಳಿದುಕೊಂಡಿತು!

Advertisement

ರಶೀದ್‌ ಖಾನ್‌ ಕಡಿವಾಣ
ಮೊದಲೆರಡು ಪಂದ್ಯಗಳಲ್ಲಿ ಬಾಂಗ್ಲಾ ಮೇಲೆ ಸವಾರಿ ಮಾಡಿದ ಲೆಗ್‌ಸ್ಪಿನ್ನರ್‌ ರಶೀದ್‌ ಖಾನ್‌ ಗುರುವಾರ ರಾತ್ರಿಯೂ ಮೋಡಿಗೈದರು. ಅಂತಿಮ ಓವರಿನಲ್ಲಿ ಬಾಂಗ್ಲಾ ಗೆಲುವಿಗೆ 9 ರನ್‌ ಅಗತ್ಯವಿತ್ತು. ಈ ಓವರ್‌ ಎಸೆಯಲು ಬಂದ ರಶೀದ್‌ ಮೊದಲ ಎಸೆತದಲ್ಲೇ ಬೇರೂರಿ ನಿತಿದ್ದ ಮುಶ್ಫಿಕರ್‌ ರಹೀಂ ವಿಕೆಟ್‌ ಹಾರಿಸಿದರು. ಅನಂತರದ 4 ಎಸೆತಗಳಲ್ಲಿ ಉತ್ತಮ ನಿಯಂತ್ರಣ ಸಾಧಿಸಿ ಕೇವಲ 5 ರನ್‌ ನೀಡಿದರು. ಬಾಂಗ್ಲಾ ಗೆಲುವಿಗೆ ಅಂತಿಮ ಎಸೆತದಲ್ಲಿ ಬೌಂಡರಿ ಅಗತ್ಯವಿತ್ತು. ಆದರೆ 3ನೇ ರನ್‌ ಕದಿಯುವ ಯತ್ನದಲ್ಲಿ ಮಹಮದುಲ್ಲ ರನೌಟಾದರು. ಪಂದ್ಯ ಟೈ ಆಗುವುದು ತಪ್ಪಿತು. ಅದೃಷ್ಟ ಅಫ್ಘಾನ್‌ ಪಾಳೆಯದಲ್ಲೇ ಸುತ್ತುತ್ತಿತ್ತು!

ಜೂ. 14ರಿಂದ ಬೆಂಗಳೂರಿನಲ್ಲಿ ಟೆಸ್ಟ್‌ ಕ್ರಿಕೆಟಿಗೆ ಪಾದಾರ್ಪಣೆ ಮಾಡಲಿರುವ ಅಫ್ಘಾನ್‌ ಪಾಲಿಗೆ ಈ ಗೆಲುವು ಅಪಾರ ಆತ್ಮವಿಶ್ವಾಸ ತುಂಬಿದೆ.
ಚೇಸಿಂಗ್‌ ವೇಳೆ ಬಾಂಗ್ಲಾ 53 ರನ್ನಿಗೆ 4 ವಿಕೆಟ್‌ ಕಳೆದುಕೊಂಡಿತಾದರೂ ರಹೀಂ (46) ಮತ್ತು ಮಹಮದುಲ್ಲ (45) 84 ರನ್‌ ಜತೆಯಾಟದ ಮೂಲಕ ಹೋರಾಟ ಜಾರಿಯಲ್ಲಿರಿಸಿದ್ದರು. ಆದರೆ ರಶೀದ್‌ ಮುಂದೆ ಬಾಂಗ್ಲಾ ಆಟ ಸಾಗಲಿಲ್ಲ. 

ಸಂಕ್ಷಿಪ್ತ ಸ್ಕೋರ್‌: ಅಫ್ಘಾನಿಸ್ಥಾನ-20 ಓವರ್‌ಗಳಲ್ಲಿ 6 ವಿಕೆಟಿಗೆ 145 (ಶೇನ್ವರಿ ಔಟಾಗದೆ 33, ಸ್ತಾನಿಕ್‌ಜಾಯ್‌ 27, ಶಾಜಾದ್‌ 26, ನಜ್ಮುಲ್‌ ಇಸ್ಲಾಮ್‌ 18ಕ್ಕೆ 2, ಅಬು ಜಾಯೇದ್‌ 27ಕ್ಕೆ 2). ಬಾಂಗ್ಲಾದೇಶ-20 ಓವರ್‌ಗಳಲ್ಲಿ 6 ವಿಕೆಟಿಗೆ 144 (ರಹೀಂ 46, ಮಹಮದುಲ್ಲ 45, ರಶೀದ್‌ 24ಕ್ಕೆ 1, ಮುಜೀಬ್‌ 25ಕ್ಕೆ 1). 

ಪಂದ್ಯಶ್ರೇಷ್ಠ: ಮುಶ್ಫಿಕರ್‌ ರಹೀಂ, ಸರಣಿಶ್ರೇಷ್ಠ: ರಶೀದ್‌ ಖಾನ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next