Advertisement

ಅಪರೂಪಕ್ಕೆ ಬೆಸೆದ ಸಂಬಂಧ…

06:00 AM Oct 05, 2018 | Team Udayavani |

ಮನೆಗೆ ತೆರಳುತ್ತ  ಇದ್ದಾಗ ಹಳೆಯ ಘಟನೆಗಳನ್ನು ಮೆಲುಕು ಹಾಕುತ್ತ ಹೋಗುತ್ತಿದ್ದೆ. ಅದಾಗಲೇ ನೆನಪಾದ್ದು ನಾನು ಹತ್ತನೆಯ ತರಗತಿಯಲ್ಲಿ ಕಲಿಯುತ್ತ ಇರುವಾಗ ನಡೆದಂತಹ ಒಂದು ಘಟನೆ. ಆ ಸಮಯ ಶಾಲೆಗೆ ರಜೆ ಇತ್ತು. ಅಪ್ಪ ಮತ್ತು ನಾನು ಅಜ್ಜಿ ಮನೆಯಿಂದ ವಾಪಸು ಮನೆಗೆ ಬರುತ್ತಿದ್ದೆವು. ಗಂಟೆ ನಾಲ್ಕು ಆಗಿತ್ತು. ಬಸ್ಸು ಏರಿ ಸೀಟು ಹಿಡಿದು ಒಂದು ಸೀಟಿನಲ್ಲಿ ಕುಳಿತುಕೊಂಡೆ. ಅಪ್ಪ ಪಕ್ಕದ ಸೀಟಿನಲ್ಲಿ ಕುಳಿತುಕೊಂಡಿದ್ದರು. ನನ್ನ ಪಕ್ಕದಲ್ಲಿ  ಕಾಲೇಜು ವಿದ್ಯಾರ್ಥಿಯೊಬ್ಬ ಕುಳಿತಿದ್ದ. 
    
ಬಸ್ಸು ತುಂಬ ರಶ್‌ ಆಗಿತ್ತು. ಸ್ವಲ್ಪ ಹೊತ್ತಿನ ಬಳಿಕ ಒಬ್ಬ ವೃದ್ಧ ವ್ಯಕ್ತಿಯೊಬ್ಬ ಬಸ್ಸನ್ನೇರಿದರು. ಮೊದಲೇ ಹೇಳಿದ ಹಾಗೆ ಬಸ್ಸು ರಶ್‌ ಇದ್ದುದರಿಂದ ಆ ವ್ಯಕ್ತಿಗೆ ನಿಂತುಕೊಳ್ಳಲು ಕಷ್ಟವಾಗುತ್ತಿದ್ದರಿಂದ, ಬದಿಗೆ ಸರಿದು “ಕುಳಿತುಕೊಳ್ಳಿ’ ಅಂತ ಹೇಳಿದೆ. ಅವರು ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳಲು ಆರಂಭಿಸಿದರು. ನಾನು ಅವರ ಮಾತುಗಳನ್ನು ಆಲಿಸುತ್ತಿಲ್ಲವೆಂದು ಅನಿಸಬಾರದು, ಅವರಿಗೆ ಬೇಸರವಾಗುತ್ತದೆ ಎಂಬ ಕಾರಣಕ್ಕೆ ಹೂಂಗುಟ್ಟಲು ಶುರು ಮಾಡಿದೆ.

Advertisement

ಬಳಿಕ ಅವರು ನನ್ನ ಹತ್ತಿರದಲ್ಲಿ ಕುಳಿತಿದ್ದ ಹುಡುಗನನ್ನು ಗಮನಿಸಿದರು ಅಂತ ಕಾಣಿಸುತ್ತೆ. “ನನಗೂ ನಿಮ್ಮ ಹಾಗೆ ಇಬ್ಬರು ಮೊಮ್ಮಕ್ಕಳಿದ್ದಾರೆ, ಆದರೆ ಅವರು ನನ್ನೊಂದಿಗೆ ಇಲ್ಲ’ ಅಂತ ಹೇಳಿದಾಗ ಅಲ್ಲಿಯವರೆಗೆ ಹೂಂಗುಟ್ಟುತ್ತಿದ್ದ ನಾನು ಕುತೂಹಲದಿಂದ “ಅವರು  ಎಲ್ಲಿದ್ದಾರೆ?’ ಎಂದು ಕೇಳಿದೆ. ಆ ಸಮಯದಲ್ಲಿ ಅವರಂದಿದ್ದು, “ನನ್ನ ಮಗ ಮತ್ತು ಸೊಸೆ ಇಬ್ಬರೂ ವಿದೇಶದಲ್ಲಿದ್ದಾರೆ, ಅವರ ಜೊತೆ ಮೊಮ್ಮಕ್ಕಳು ಸಹ ಅಲ್ಲಿಯೇ ಇದ್ದಾರೆ’ ಎಂದು ಕೊಂಚ ದುಃಖದಲ್ಲಿ ಹೇಳಿದರು. 

ಸಂಬಂಧಗಳ ಮಹತ್ವ ತಿಳಿದಿರದಿದ್ದ ನನಗೆ ಅವರೊಂದಿಗೆ ಕೊಂಚ ಹೊತ್ತು ಮಾತಾಡಿದ್ದು, ನನ್ನ ಮನಸ್ಸಿನಲ್ಲಿ ಸಂಬಂಧಗಳ ಬಗ್ಗೆ ಇದ್ದ ಯೋಚನೆಯನ್ನೇ ಬದಲಿಸಿತು. ನನಗೆ ಸಂಬಂಧಗಳ ಬಗ್ಗೆ ಅರಿವು ಮೂಡಿಸಿದ ಅಜ್ಜ ನಿಗೆ ಮನಸ್ಸಿನಲ್ಲಿಯೇ ಧನ್ಯವಾದ ಹೇಳಿದೆ. 

ಜಯಶ್ರೀ ಬಲ್ಯಾಯ
ದ್ವಿತೀಯ ಪತ್ರಿಕೋದ್ಯಮ, ವಿವೇಕಾನಂದ ಕಾಲೇಜು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next