Advertisement

ಎಸ್‌ಡಿಎಂನಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ

12:28 PM Apr 21, 2019 | pallavi |

ಧಾರವಾಡ: ಇಲ್ಲಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಅಪರೂಪದ ಪಿತ್ತಕೋಶ ಶಸ್ತ್ರಚಿಕಿತ್ಸೆಯನ್ನು ವೈದ್ಯರು ಯಶಸ್ವಿಯಾಗಿ ನೆರವೇರಿಸಿದ್ದಾರೆ.

Advertisement

ಒಂದು ವರ್ಷದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 39 ವರ್ಷದ ಮಹಿಳೆ ತಪಾಸಣೆಗಾಗಿ ಎಸ್‌ಡಿಎಂ ಆಸ್ಪತ್ರೆ ಶಸ್ತ್ರಚಿಕಿತ್ಸಾ ಹೊರರೋಗಿ ವಿಭಾಗಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕ್ಷಕಿರಣ, ಸಿಟಿ ಸ್ಕ್ಯಾನ್‌ ಹಾಗೂ ಶಬ್ದಾತೀತ ತರಂಗ ತಪಾಸಣೆ ಕೈಗೊಂಡಾಗ ಮಹಿಳೆಯಲ್ಲಿ ‘ಸೈಟಸ್‌ ಇನ್‌ ವರ್ಸಸ್‌’ ಎಂಬ ಸ್ಥಿತಿಯೊಂದಿಗೆ ಪಿತ್ತಾಶಯ ಮತ್ತು ಪಿತ್ತ ನಳಿಕೆಯಲ್ಲಿ ಹರಳುಗಳು ಇರುವುದು ಕಂಡು ಬಂದಿದ್ದವು.

ಸೈಟಸ್‌ ಇನ್‌ ವರ್ಸಸ್‌ ಅಂದರೆ ಎದೆಗೂಡು ಹಾಗೂ ಹೊಟ್ಟೆಯಲ್ಲಿರುವ ಎಲ್ಲಾ ಅಂಗಗಳು ಜನ್ಮದಿಂದಲೇ ಎಡ-ಬಲಕ್ಕೆ ಅದಲು ಬದಲಾಗಿರುತ್ತವೆ. ಹೃದಯ ಬಲಭಾಗಕ್ಕಿದ್ದರೆ, ಪಿತ್ತ ಜನಕಾಂಗ ಎಡಕ್ಕಿರುತ್ತದೆ. ಹಾಗೆಯೇ ಅಪೆಂಡಿಕ್ಸ್‌ ಎಂಬ ಕರುಳಿನ ಬಾಲ ಎಡಕ್ಕಿರುತ್ತದೆ.

ಇಂತಹ ಸ್ಥಿತಿಯು ಹುಟ್ಟುವ 20 ಸಾವಿರ ಮಕ್ಕಳಲ್ಲಿ ಒಬ್ಬರಷ್ಟು ಪ್ರಚಲಿತ ಪ್ರಮಾಣ (0.02) ದಲ್ಲಿ ಇರುತ್ತದೆ. ಇಂತಹ ವಿರಳವಾದ ಪ್ರಕರಣದಲ್ಲಿ ಪಿತ್ತಕೋಶದ ಹರಳುಗಳ ಶಸ್ತ್ರಚಿಕಿತ್ಸೆಯಲ್ಲಿ ಕಂಡುಕೇಳರಿಯದ ಸನ್ನಿವೇಶಗಳು ಎದುರಾಗಬಹುದು.

ಎಡ ಪಾರ್ಶದಲ್ಲಿರುವ ಪಿತ್ತಕೋಶವನ್ನು ಮಾನಸಿಕವಾಗಿ ಕಣ್ಣಿಗೆ ಚಿತ್ರಣ ಊಹಿಸಿಕೊಂಡು ಅದಕ್ಕೆ ತಕ್ಕಂತೆ ಶಸ್ತ್ರಚಿಕಿತ್ಸೆ ಮಾಡುವ ಕೈಗಳನ್ನು ಹೊಸ ಪರಿಸ್ಥಿತಿಗೆ ಹೊಂದಿಸಿಕೊಂಡು ಹೊಸ ಆಪತ್ತಿನ ಸನ್ನಿವೇಶಗಳಿಗೆ ತಯಾರಾಗಿ ಮುಂದುವರಿಯಬೇಕಾಗುತ್ತದೆ. ಉದರ ದರ್ಶಕ ನಳಿಕೆ ಮುಖಾಂತರ ರೋಗಿಯ ಪಿತ್ತಕೋಶವನ್ನು ತೆಗೆಯಲಾಯಿತು. ಡಾ| ಮಲ್ಲಿಕಾರ್ಜುನ ದೇಸಾಯಿಯವರ ಸಹಾಯದೊಂದಿಗೆ ಡಾ| ಸುರೇಶ ಬಡಿಗೇರ, ಡಾ| ಲಿಖೀತ ರೈ, ಡಾ| ಜಯಂತ ಮೊಗೇರ, ಡಾ| ರಂಗಪ್ಪ ಪಾಟೀಲ ಹಾಗೂ ಡಾ| ಚಂದನ ವಿಶಾಲ್ ಯಶಸ್ವಿಯಾಗಿ ಎರಡು ಗಂಟೆ ಅವಧಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿದರು. ಅರಿವಳಿಕಾ ತಜ್ಞರಾದ ಡಾ| ರಾಘವೇಂಡ್ರ ರಾವ್‌, ಡಾ| ಸಿದ್ಧೇಶ, ಡಾ| ಲತಿಕಾ ಹಾಗೂ ಡಾ| ಕೀರ್ತನ್‌ ಸಹಕರಿಸಿದರು.

Advertisement

ಉದರದರ್ಶಕದಿಂದ ಪಿತ್ತಕೋಶವನ್ನು ಬೇರ್ಪಡಿಸುವ ಇಂತಹ ಸೈಟಸ್‌ ಇನ್‌ ವರ್ಸಸ್‌ ಪ್ರಕರಣಗಳು ವಿಶ್ವಾದ್ಯಂತ 70 ಜಾಹೀರಾಗಿವೆ. ಪಿತ್ತನಳಿಕೆಯಲ್ಲಿರುವ ಪಿತ್ತಾಶ್ಮಿರಗಳ(ಹರಳುಗಳು)ನ್ನು ಬೇರ್ಪಡಿಸುವ ವಿಧಾನವನ್ನು ಜೀರ್ಣಾಂಗವ್ಯೂಹದ ತಜ್ಞರಾದ ಡಾ| ಪ್ರೀತಮ್‌ ಹುರಕಡ್ಲಿ ಹಾಗೂ ಡಾ| ರೋಹಿತ್‌ ಮ್ಯೆದೂರ್‌ ಮತ್ತು ಚಂದ್ರು ಅವರು ಅನುಸರಿಸಿದರು. ಎಲ್ಲಾ ಅಂಗಗಳು ವಿರುದ್ಧ ದಿಕ್ಕಿನಲ್ಲಿ ಇದ್ದುದರಿಂದ ಇದು ಸ್ವಲ್ಪ ಕ್ಲಿಷ್ಟವಾಗಿತ್ತು. ವಿಶ್ವದ ಇತಿಹಾಸದಲ್ಲಿ ಇಂತಹ ಕೇಸುಗಳು 10 ಮಾತ್ರ ಬರೆಯಲಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next