Advertisement

ಕಾಪುವಿನಲ್ಲಿ ಅರಳಿ ನಿಂತ ರಾತ್ರಿಯಲ್ಲಿ ಅರಳುವ ವಿಸ್ಮಯ ಹೂವು “ಬ್ರಹ್ಮ ಕಮಲ”

04:44 PM Jun 10, 2020 | mahesh |

ಕಾಪು: ಕಾಪು ಪುರಸಭೆ ವ್ಯಾಪ್ತಿಯ ಉಳಿಯಾರಗೋಳಿ ಗ್ರಾಮದ ಕಲ್ಯದ ಶೋಭಾ ಸುಧಾಕರ ಅಮೀನ್ ಎಂಬವರ ಮನೆಯಂಗಳದಲ್ಲಿ ಹತ್ತಾರು ಬ್ರಹ್ಮ ಕಮಲ ಪುಷ್ಪಗಳು ಅರಳಿ ನಿಂತಿದ್ದು ಸ್ಥಳೀಯ ನಿವಾಸಿಗಳಲ್ಲಿ ಕೌತುಕ ಮೂಡಿಸಿದೆ. ರಾತ್ರಿ ರಾಣಿಯರು ಎಂದೇ ಪ್ರಸಿದ್ಧವಾಗಿರುವ ಬ್ರಹ್ಮ ಕಮಲ ಪುಷ್ಪವು ರಾತ್ರಿಯ ವೇಳೆಯೇ ಅರಳಿ, ಬೆಳಗಾಗುವುದರೊಳಗೆ ಬಾಡಿ ಹೋಗುವ ಅಪರೂಪದ ಪುಷ್ಪವಾಗಿದೆ. ವರ್ಷಕೊಮ್ಮೆ, ಅದೂ ಕೂಡಾ ರಾತ್ರಿ ಸಮಯದಲ್ಲಿ ಮಾತ್ರಾ ಅರಳುವ ಹೂವುಗಳಲ್ಲಿ ಬ್ರಹ್ಮ ಕಮಲವೂ ಒಂದಾಗಿದೆ. ಹಿಂದೂ ಧರ್ಮದ ನಂಬಿಕೆಯ ಪ್ರಕಾರ ಇದನ್ನು ಬಿಳಿ ಕಮಲವೆಂದೂ ಕರೆಯಲಾಗುತ್ತದೆ. ಶೋಭಾ ಸುಧಾಕರ್ ಅವರ ಮನೆಯಂಗಳದಲ್ಲಿ ಮಂಗಳವಾರ ರಾತ್ರಿ ಬರೋಬ್ಬರಿ 15 ಬ್ರಹ್ಮ ಕಮಲ ಪುಷ್ಪಗಳು ಅರಳಿ ನಿಂತಿವೆ. ಈ ಹೂವುಗಳು ಹಂತಹಂತವಾಗಿ ಅರಳುವುದನ್ನು ವೀಕ್ಷಿಸುವುದೇ ಸೋಜಿಗವಾಗಿದ್ದು, ಇದನ್ನು ವೀಕ್ಷಿಸಿದ ಸ್ಥಳೀಯ ನಿವಾಸಿಗಳು ಸಂತಸದೊಂದಿಗೆ ಅಚ್ಚರಿಯನ್ನೂ ವ್ಯಕ್ತ ಪಡಿಸಿದ್ದಾರೆ.

Advertisement

ಬ್ರಹ್ಮಕಮಲದ ಗಿಡವು ವರ್ಷಕ್ಕೊಮ್ಮೆ ಬಿಡುವ ಹೂಗಳನ್ನು ನೋಡುವುದೇ ಸೊಬಗು. ಅರಳಿದ ಬ್ರಹ್ಮ‌ಕಮಲ ಹೂವುಗಳನ್ನು ನೋಡುವವರ ಮನವೂ ಅರಳುತ್ತದೆ. ಬ್ರಹ್ಮಕಮಲ ಹೂ ಅರಳುವುದನ್ನು ಕಾದು ತಮ್ಮ ಮನಸ್ಸಿನ ಇಂಗಿತವನ್ನು ಬೇಡಿಕೊಂಡರೆ ಅವರ ಆಸೆ ಈಡೇರುತ್ತದೆ ಎಂಬ ನಂಬಿಕೆಯೂ ಇದೆ. ಈ ಹೂವು ಅರಳುವ ಮನೆಯವರು ಸಂಪದ್ಭರಿತರಾಗಿರುತ್ತಾರೆ ಎಂಬ ಪ್ರತೀತಿಯೂ ಕೂಡ ಇದೆ. ಬ್ರಹ್ಮ ಕಮಲ ಹೂವಿನ ಗಿಡವನ್ನು ದೈವಿಕ ಭಾವನೆಯಿಂದ ಹಾಗೂ ಅಲಂಕಾರಿಕ ಗಿಡವಾಗಿಯೂ ಬೆಳೆಸಲಾಗುತ್ತದೆ.

ಹಿಮಾಲಯದಲ್ಲಿ ಹೆಚ್ಚು : ಉತ್ತರಖಾಂಡ ಮತ್ತು ಹಿಮಾಲಯಗಳಲ್ಲಿ ಹೆಚ್ಚಾಗಿ ಕಂಡು ಬರುವ ಈ ಹೂವು ನೆಲ ಮಟ್ಟದಿಂದ ಎತ್ತರದಲ್ಲಿ ಬೆಳೆಯುವ ಹೂವಾಗಿರುವುದರಿಂದ ಬ್ರಹ್ಮಕಮಲ ಎಂದು ಕರೆಯಲ್ಪಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next