ಯವತ್ಮಾಲ್: ಮಹಾರಾಷ್ಟ್ರದ ಯವತ್ಮಾಲ್‌ನಲ್ಲಿ ಸುಮಾರು 6 ಕೋಟಿ ವರ್ಷಗಳಷ್ಟು ಹಳೆಯದಾದ ಬೃಹತ್ ಲಾವಾಶಿಲೆ ಪತ್ತೆಯಾಗಿದೆ. ಯವತ್ಮಾಲ್ ಜಿಲ್ಲೆಯ ವಾನಿ-ಪಂಡಾಕವಾಡಾ ಎಂಬ ಪ್ರಾಂತ್ಯದಲ್ಲಿರುವ ಶಿಬ್ಲಾ-ಪಾರ್ಡಿ ಗ್ರಾಮದ ಬಳಿ ರಸ್ತೆ ಕಾಮಗಾರಿ ನಡೆಸುತ್ತಿದ್ದಾಗ ಅಪರೂಪದ ಈ ಬೃಹತ್ ಶಿಲೆ ಪತ್ತೆಯಾಗಿದ್ದು, ಇದು ಏಕಶಿಲಾ ಸ್ತಂಭದ ಸ್ವರೂಪದಲ್ಲಿದೆ.
ಮಾಧ್ಯಮಗಳಿಗೆ ಇದರ ಬಗ್ಗೆ ಹೆಚ್ಚಿನ ವಿವರ ನೀಡಿದ ಪರಿಸರವಾದಿ ಹಾಗೂ ಭೂವಿಜ್ಞಾನಿ ಪ್ರೊ. ಸುರೇಶ್ ಚೋಪಾನೆ, “ಯವತ್ಮಾಲ್‌ನಲ್ಲಿ ಸುಮಾರು 6 ಕೋಟಿ ವರ್ಷಗಳ ಹಿಂದೆ ಇದ್ದ ಜ್ವಾಲಾಮುಖೀ ಪರ್ವತದಿಂದ ಹೊರಬಂದಿರುವ ಲಾವಾದಿಂದ ಷಟ್ಕೊನಾಕೃತಿಯಲ್ಲಿರುವ ಈ ಬೃಹತ್ ಕಲ್ಲು ಸೃಷ್ಟಿಯಾಗಿದೆ. ಅಗ್ನಿಪರ್ವತದಿಂದ ಹೊರಬಂದ ಲಾವಾ, ಹತ್ತಿರದ ನದಿಯಲ್ಲಿ ವಿಲೀನವಾಗಿ, ಇದ್ದಕ್ಕಿದ್ದಂತೆ ತಣ್ಣಗಾಗುವುದರಿಂದ ಇಂಥ ಕಲ್ಲಾಗಿ ಮಾರ್ಪಡುತ್ತದೆ. ಮುಂಬೈ, ಕೊಲ್ಹಾಪುರ, ನಾಂದೇಡ್‌ನಲ್ಲಿಯೂ ಇಂಥ ಕಲ್ಲುಗಳನ್ನು ನೋಡಬಹುದು” ಎಂದು ತಿಳಿಸಿದ್ದಾರೆ.
“”ಭೂಗರ್ಭಶಾಸ್ತ್ರದ ದೃಷ್ಟಿಕೋನದಲ್ಲಿ ಇಂಥ ಕಲ್ಲುಗಳು ಅಧ್ಯಯನ ಯೋಗ್ಯವಾಗಿದ್ದು ಭಾರೀ ಮಹತ್ವ ಪಡೆದುಕೊಂಡಿವೆ. ಇಲ್ಲಿಯವರೆಗೆ ಇಂಥ ಲಕ್ಷಾನುಲಕ್ಷ ವರ್ಷಗಳಷ್ಟು ಹಳೆಯದಾದ ಕಲ್ಲುಗಳು, ಶಂಖಾಕೃತಿಯ ಚಿಪ್ಪುಗಳು ಸಿಕ್ಕಿದ್ದು ಅವೆಲ್ಲವೂ ಮಹಾರಾಷ್ಟ್ರದ ಮಾನವಪೂರ್ವ ಇತಿಹಾಸದ ಅನ್ವೇಷಣೆಗೆ ಪೂರಕ ದಾಖಲೆಗಳನ್ನು ಒದಗಿಸಿವೆ.
ಇದನ್ನೂ ಓದಿ : ಜಗತ್ಪ್ರಸಿದ್ಧ ದೂಧಸಾಗರ ಜಲಪಾತ ವೀಕ್ಷಣೆ ಪ್ರಸಾಸಿಗರಿಗೆ ಕಷ್ಟ ಕಷ್ಟ
ಇತ್ತು ಡೈನೋಸಾರ್: ಈವರೆಗೆ ಸಿಕ್ಕಿರುವ ಇಂಥ ಕಲ್ಲು, ಚಿಪ್ಪುಗಳು, ಪ್ರಾಣಿಗಳ ಪಳೆಯುಳಿಕೆಯಿಂದ ಯವತ್ಮಾಲ್ ಪ್ರಾಂತ್ಯದಲ್ಲಿ 6 ಕೋಟಿ ವರ್ಷಗಳ ಹಿಂದೆ ಬೃಹತ್ ಡೈನೋಸಾರ್ ಮಾದರಿಯ ಪ್ರಾಣಿಗಳು ಇದ್ದವು ಎಂದು ಪ್ರೋ.ಚೋಪಾನೆ ಪ್ರತಿಪಾದಿಸಿದ್ದಾರೆ. ದಟ್ಟ ಅರಣ್ಯದಿಂದ ಕೂಡಿದ್ದ ಯವತ್ಮಾಲ್ ಜಿಲ್ಲೆಯಲ್ಲಿ ಲಾವಾರಸ ಸ್ಫೋಟಗೊಂಡದ್ದರಿಂದ ಎಲ್ಲವೂ ಸುಟ್ಟು ಕರಕಲಾಗಿ ಹೋಗಿದ್ದಿರುವ ಸಾಧ್ಯತೆಗಳು ಇವೆ ಎಂದು ಹೇಳಿದ್ದಾರೆ. ಕರ್ನಾಟಕದ ಉಡುಪಿಯಲ್ಲಿರುವ ಸೈಂಟ್ ಮೇರಿಸ್ ದ್ವಿಪದಲ್ಲಿ ಕೂಡ ಇದೇ ಮಾದರಿಯ ಕಲ್ಲುಗಳು ಇವೆ. 70 ಮಿಲಿಯ ವರ್ಷಗಳ ಹಿಂದೆ ಹಾಲಿ ವಿದರ್ಭ ಜಿಲ್ಲೆ ಇರುವ ಪ್ರದೇಶದಲ್ಲಿ ಸಮುದ್ರ ಇತ್ತು ಎಂದು ಅವರು ಹೇಳಿದ್ದಾರೆ.
“ಪಿಟಿಐ’ ಸುದ್ದಿ ಸಂಸ್ಥೆ ಜತೆಗೆ ಮಾತನಾಡಿದ ಭಾರತೀಯ ಭೂಸರ್ವೇಕ್ಷಣಾ ಇಲಾಖೆಯ ನಾಗ್ಪುರ ಕಚೇರಿಯ ವಕ್ತಾರ ರಾಷ್ಟ್ರಪಲ್ ಚವಾಣ್ ಇಂಥ ಕಲ್ಲುಗಳು ದೇಶದ ಅಲ್ಲಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ ಎಂದು ಹೇಳಿದ್ದಾರೆ.