ಉನ್ನಾವೊ:ಹೈದಾರಾಬಾದ್ ನ ಪಶುವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೈದ ಘಟನೆ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಏತನ್ಮಧ್ಯೆ ಅತ್ಯಾಚಾರ ಪ್ರಕರಣದಲ್ಲಿ ಜೈಲುಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಹೊರಬಂದ ಆರೋಪಿಗಳು ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಭೀಬತ್ಸ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ಉನ್ನಾವೋ ಜಿಲ್ಲೆಯ ಗ್ರಾಮದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಸುಕಿನ ವೇಳೆ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಆಕೆಯ ದೇಹ ತೀವ್ರ ಸುಟ್ಟು ಹೋಗಿದ್ದರಿಂದ ವೈದ್ಯರು ಲಕ್ನೋ ಆಸ್ಪತ್ರೆಗೆ ದಾಖಲಿಸಿರುವುದಾಗಿ ವರದಿ ತಿಳಿಸಿದೆ.
ತನಿಖಾಧಿಕಾರಿಗಳಿಗೆ ಸಂತ್ರಸ್ತೆ ನೀಡಿರುವ ಮಾಹಿತಿ ಪ್ರಕಾರ, ಒಂದು ವರ್ಷದ ಹಿಂದೆ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಇಬ್ಬರು ಆರೋಪಿಗಳು ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವುದಾಗಿ ತಿಳಿಸಿದ್ದಾಳೆ. ಇಬ್ಬರೂ ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದ ಮೇಲೆ ಈ ದುಷ್ಕೃತ್ಯ ನಡೆಸಿರುವುದಾಗಿ ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.
ಪ್ರಕರಣದ ಸಂಬಂಧ ಸಂತ್ರಸ್ತೆ ಪೋಷಕರ ಜತೆ ರಾಯ್ ಬರೇಲಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಇದೊಂದು ದುರದೃಷ್ಟಕರ ಘಟನೆ. ಇಬ್ಬರು ಆರೋಪಿಗಳಾದ ಹರಿ ಶಂಕರ್ ತ್ರಿವೇದಿ ಹಾಗೂ ಶುಭಂ ತ್ರಿವೇದಿಯನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿರುವುದಾಗಿ ಡಿಜಿಪಿ ಓಪಿ ಸಿಂಗ್ ತಿಳಿಸಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ಪ್ರಕರಣವನ್ನು ನ್ಯಾಯಾಲಯ ರಾಯ್ ಬರೇಲಿಗೆ ವರ್ಗಾಯಿಸಿತ್ತು. ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಮುಂದಿನ ಕ್ರಮದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸಂತ್ರಸ್ತೆಗೆ ಲಕ್ನೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.