ಸಿರ್ಸಾ : ಇಬ್ಬರು ಸಾಧ್ವಿಗಳ ಮೇಲಿನ ಅತ್ಯಾಚಾರದ ಅಪರಾಧಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಬಹುತೇಕ ಸ್ಯಾಟೀರಿಯಾಸಿಸ್ (ಅನಿಯಂತ್ರಿತ ಮತ್ತು ಅತಿರೇಕದ ಸೆಕ್ಸ್ ಹುಚ್ಚು) ಕಾಯಿಲೆಯಿಂದ ಬಳಲುತ್ತಿದ್ದಾನೆ ಎಂದು ಆತನನ್ನು ಜೈಲಿನಲ್ಲಿ ಪರೀಕ್ಷಿಸಿರುವ ವೈದ್ಯರು ಹೇಳಿದ್ದಾರೆ.
ಮೂಲಗಳ ಪ್ರಕಾರ ಡೇರಾ ಮುಖ್ಯಸ್ಥನು ಅತಿ ಕಾಮಿ “ಡಾನ್ ಜುವಾನ್’ ರೀತಿಯ ವ್ಯಕ್ತಿಯಾಗಿದ್ದಾನೆ. ಅತಿ ಕಾಮಿ ಡಾನ್ ಜುವಾನ್ ಹಲವಾರು ಮಹಿಳೆಯರನ್ನು ಲೈಂಗಿಕವಾಗಿ ಛೇಡಿಸಿ ಅವರೊಂದಿಗೆ ಅನಿಯಂತ್ರಿತ ಲೈಂಗಿಕ ಕ್ರಿಯೆ ನಡೆಸುವ ಹುಚ್ಚನ್ನು ಹೊಂದಿರುವ ಅತ್ಯಂತ ಕುಖ್ಯಾತ ವ್ಯಕ್ತಿಯಾಗಿದ್ದಾನೆ.
ಡೇರಾ ಮುಖ್ಯಸ್ಥ ಕೂಡ ಇದೇ ರೀತಿ ಅತಿ ಕಾಮಿ, ಅನಿಯಂತ್ರಿತ ಸೆಕ್ಸ್ ಹುಚ್ಚಿನ ವ್ಯಕ್ತಿಯಾಗಿದ್ದಾನೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ರೋಹಟಕ್ ಜೈಲಿನಲ್ಲಿ ತೀರಾ ಮಾನಸಿಕ ಗೊಂದಲದಲ್ಲಿ ಇರುವವನಂತೆ ಕಂಡು ಬರುತ್ತಿರುವ ಡೇರಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್‌ನನ್ನು ಪರೀಕ್ಷಿಸಿರುವ ಜೈಲಿನ ವೈದ್ಯರು, “ಗುರ್ಮಿತ್ ದೈಹಿಕವಾಗಿ, ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ; ತುಂಬ ಗೊಂದಲದಲ್ಲಿರುವವನಂತೆ ಕಂಡು ಬರುತ್ತಿದ್ದಾನೆ; ಆತ ಅಂತರ್‌ಮುಖೀಯಾಗುತ್ತಿದ್ದಾನೆ’ ಎಂದು ಹೇಳಿದ್ದಾರೆ.
ಇಬ್ಬರು ಸಾಧ್ವಿಗಳನ್ನು ಅಥವಾ ಮಹಿಳಾ ಅನುಯಾಯಿಗಳನ್ನು ರೇಪ್ ಮಾಡಿದ 15 ವರ್ಷಗಳ ಹಿಂದಿನ ಕೇಸಿನಲ್ಲಿ ಡೇರಾ ಮುಖ್ಯಸ್ಥ ಸಿಂಗ್‌ಗೆ ಕಳೆದ ಆ.28ರಂದು ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ಮತ್ತು 30 ಲಕ್ಷ ರೂ.ದಂಡ ವಿಧಿಸಿದೆ.