Advertisement

ಮನೆ ಬಾಗಿಲಲ್ಲೇ ರ್ಯಾಪಿಡ್‌ ಟೆಸ್ಟ್ ಆರಂಭ

08:08 AM Jul 18, 2020 | Suhan S |

ಬೆಂಗಳೂರು: ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕಂಟೈನ್ಮೆಂಟ್‌ ಪ್ರದೇಶ, ಕೊಳೆಗೇರಿ ಪ್ರದೇಶ ಹಾಗೂ ಪೌರಕಾರ್ಮಿಕರ ಕಾಲೋನಿಗಳಲ್ಲಿ ರ್ಯಾಪಿಡ್‌ ಆ್ಯಂಟಿಜೆನ್‌ ಕಿಟ್‌ ಮೂಲಕ ಕೋವಿಡ್‌ ಪರೀಕ್ಷೆ ನಡೆಸುವ ಕಾರ್ಯಕ್ಕೆ ಶುಕ್ರವಾರ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಮೇಯರ್‌ ಎಂ. ಗೌತಮ್‌ ಕುಮಾರ್‌ ಚಾಲನೆ ನೀಡಿದರು.

Advertisement

ಈ ವೇಳೆ ಮಾತನಾಡಿ, ಜನಸಂದಣಿ ಮತ್ತು ಇಕ್ಕಟ್ಟಾದ ಪ್ರದೇಶಗಳಲ್ಲಿ ಸೋಂಕು ತೀವ್ರವಾಗಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಕೊಳೆಗೇರಿ ಪ್ರದೇಶ, ಕಂಟೈನ್ಮೆಂಟ್‌ ಪ್ರದೇಶ, ಪೌರಕರ್ಮಿಕರ ಕಾಲೋನಿಗಳು ಹಾಗೂ ತೀರಾ ಉಸಿರಾಟ ತೊಂದರೆ ಮತ್ತು ಶೀತ ಜ್ವರದ ಲಕ್ಷಣಗಳು ಇರುವವರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿದರು. ಪೂರ್ವ ವಲಯಕ್ಕೆ 40, ಪಶ್ಚಿಮ ವಲಯಕ್ಕೆ 40,ದಕ್ಷಿಣ ವಲಯಕ್ಕೆ 35, ಬೊಮ್ಮನಹಳ್ಳಿ 20, ದಾಸರಹಳ್ಳಿ 12, ಯಲಹಂಕ 15, ಆರ್‌.ಆರ್‌. ನಗರ 20, ಮಹದೇವಪುರ ವಲಯಕ್ಕೆ 20 ಹಾಗೂ ಬೆಂಗಳೂರು ನಗರ ಜಿಲ್ಲೆಯ ಕೆಲ ಗ್ರಾಮೀಣ ಪ್ರದೇಶಗಳಿಗೆ 12 ವಾಹನಗಳನ್ನು ನಿಯೋಜನೆ ಮಾಡಲಾಗಿದೆ. ವಲಯ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ವಾಹನಗಳು ಕಾರ್ಯ ನಿರ್ವಹಿಸಲಿವೆ. ಪ್ರತಿ ವಾಹನದಲ್ಲಿ ಒಬ್ಬ ಲ್ಯಾಬ್‌ ಟೆಕ್ನಿಷಿಯನ್‌, ಕಿರಿಯ ಆರೋಗ್ಯ ಸಿಬ್ಬಂದಿ ಹಾಗೂ ಒಬ್ಬರು ಸಹಾಯಕ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಪ್ರತಿನಿತ್ಯ ಪರೀಕ್ಷೆ ನಡೆಸಿದ ಅಂಕಿ ಅಂಶಗಳನ್ನು ಐಸಿಎಂಆರ್‌ಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದರು.

ಉಪ ಮೇಯರ್‌ ರಾಮಮೋಹನ ರಾಜು, ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ. ಮಂಜುನಾಥ್‌ ರಾಜು, ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next