Advertisement

ನಿಪಾಹ್‌ ನಿಯಂತ್ರಣಕ್ಕೆ ಕ್ಷಿಪ್ರ ಪ್ರತಿಕ್ರಿಯೆ ತಂಡಗಳ ರಚನೆ

12:08 PM May 23, 2018 | |

ಬೆಂಗಳೂರು: ಕೇರಳದಲ್ಲಿ ಕಾಣಿಸಿಕೊಂಡಿದ್ದ ನಿಪಾಹ್‌ ವೈರಸ್‌ ಸೋಂಕು ಮಂಗಳೂರಿಗೂ ವಿಸ್ತರಿಸಿರುವ ಶಂಕೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ವೈರಸ್‌ ಹರಡದಂತೆ ತಡೆಯಲು ಕಟ್ಟೆಚ್ಚರ ವಹಿಸಿದ್ದು, ರೋಗ ಪತ್ತೆ ಹಾಗೂ ತುರ್ತು ಚಿಕಿತ್ಸೆಗಾಗಿ ಕ್ಷಿಪ್ರ ಪ್ರತಿಕ್ರಿಯೆ ತಂಡ (ರ್ಯಾಪಿಡ್‌ ರೆಸ್ಪಾನ್ಸ್‌ ಟೀಮ್‌) ರಚಿಸಿದೆ.

Advertisement

ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಕ್ಷಿಪ್ರ ಪ್ರತಿಕ್ರಿಯೆ ತಂಡಗಳು ರಚನೆಯಾಗಿದ್ದು, ದಿನದ 24 ಗಂಟೆಗಳ ಕಾಲ ನಿಗಾ ವಹಿಸಲಿವೆ. ಮುಖ್ಯವಾಗಿ ಕೋಜಿಕೋಡ್‌, ಪೆರಂಬ್ರಗ್ರಾಮ ಹಾಗೂ ಮಲಪುರಂ ಪ್ರದೇಶದಿಂದ ಆಗಮಿಸುವವರನ್ನು ತಪಾಸಣೆಗೆ ಒಳಪಡಿಸಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರೋಗ ಲಕ್ಷಣ ಕಂಡುಬಂದವರ ರಕ್ತದ ಮಾದರಿ, ಮೂಗು ಹಾಗೂ ಗಂಟಲಿನ ದ್ರವ ಮಾದರಿಯನ್ನು ಈ ತಂಡಗಳು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಿವೆ. ಜತೆಗೆ ರೋಗಿಗಳಿಗೆ ತುರ್ತು ಚಿಕಿತ್ಸೆಗೆ ನೆರವಾಗಲಿವೆ. ಪ್ರಕರಣ ಪತ್ತೆಯಾದ ಸ್ಥಳಕ್ಕೆ ತೆರಳಲು ಪ್ರತ್ಯೇಕ ವಾಹನ ಸೌಲಭ್ಯದ ಜತೆಗೆ ಅಗತ್ಯ ಔಷಧ ಒದಗಿಸಲಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ತಂಡಗಳು ರಾಜ್ಯ ಮಟ್ಟದ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಾರ್ಯ ನಿರ್ವಹಿಸಲಿವೆ ಎಂದು ಹೇಳಿದೆ.

ದಕ್ಷಿಣ ಕನ್ನಡ, ಉಡುಪಿ, ಮಂಗಳೂರು, ಮಡಿಕೇರಿ, ಕೊಡಗು, ಚಾಮರಾಜನಗರ ಸೇರಿದಂತೆ ಕೇರಳದ ಗಡಿ ಜಿಲ್ಲೆಗಳ ವೈದ್ಯಾಧಿಕಾರಿಗಳು ತೀವ್ರ ನಿಗಾ ವಹಿಸಲು ಹಾಗೂ ಸಕ್ರಿಯವಾಗಿ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇತರೆ ಇಲಾಖೆಗಳ ಸಮನ್ವಯ ಸಮಿತಿ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆಶಾ ಕಾರ್ಯಕರ್ತೆಯರ ಮೂಲವೂ ಜನರಲ್ಲಿ ಜಾಗೃತಿ ಮೂಡಿಸಲು ಸೂಚಿಸಲಾಗಿದೆ. ಈ ವೈರಸ್‌ ಜ್ವರ ಕುರಿತು ಹೆಚ್ಚಿನ ಮಾಹಿತಿಗೆ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಬಹುದು ಎಂದು ಇಲಾಖೆ ಕೋರಿದೆ.

ನಿಪಾಹ್‌ ವೈರಸ್‌ ಹರಡದಂತೆ ತಡೆಯಲು “ಕ್ಷಿಪ್ರ ಪ್ರತಿಕ್ರಿಯೆ ತಂಡ’ ರಚಿಸಲಾಗಿದ್ದು, ಈ ತಂಡಗಳು 24 ಗಂಟೆ ಕಾರ್ಯ ನಿರ್ವಹಿಸಲಿವೆ. ರೋಗ ಲಕ್ಷಣ ಕಂಡುಬಂದವರ ರಕ್ತದ ಮಾದರಿ, ಮೂಗು, ಗಂಟಲಿನ ದ್ರವದ ಮಾದರಿಯನ್ನು ಮಣಿಪಾಲ್‌ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಬಂದ ಬಳಿಕ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್‌ಐವಿ)ಗೆ ಕಳುಹಿಸಿ ದೃಢಪಡಿಸಿಕೊಳ್ಳಲಾಗುವುದು. ಕೇರಳಕ್ಕೆ ಹೊಂದಿಕೊಂಡ ಜಿಲ್ಲೆಗಳಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದ್ದು, ಆ ರೀತಿಯ ಲಕ್ಷಣ ಕಂಡುಬಂದವರ ಬಗ್ಗೆ ವರದಿ ಮಾಡುವಂತೆಯೂ ಸೂಚಿಸಲಾಗಿದೆ.
-ಡಾ. ಶರೀಫ್ ಮೊಹಮ್ಮದ್‌, ಸಂಶೋಧನಾ ಅಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

Advertisement

ಪ್ರತ್ಯೇಕ ನಿಗಾ ಅಗತ್ಯ: ನಿಪಾಹ್‌ ವೈರಸ್‌ ಕಾಣಿಸಿಕೊಂಡ ಇಲ್ಲವೇ ಶಂಕಿತರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ನಲ್ಲಿರಿಸಿ ಚಿಕಿತ್ಸೆ ನೀಡಬೇಕು. ರೋಗಿಯಿಂದ ಒಂದು ಮೀಟರ್‌ ಅಂತರ ಕಾಯ್ದುಕೊಂಡು ಚಿಕಿತ್ಸೆ ನೀಡಬೇಕು. ವಿಶ್ವ ಆರೋಗ್ಯ ಸಂಸ್ಥೆ ಸದ್ಯದಲ್ಲೇ ಹೊರಡಿಸಲಿರುವ ಮಾರ್ಗಸೂಚಿಯನ್ನು ರವಾನಿಸಲಿದ್ದು, ಅವುಗಳನ್ನು ಪಾಲಿಸಬೇಕು ಎಂದು ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. 

ಮಾಹಿತಿ ನೀಡಲು ಸೂಚನೆ: ನಿಪಾಹ್‌ ರೋಗದ ಲಕ್ಷಣ ಕಂಡುಬಂದ ಕೂಡಲೇ ರೋಗಿಯ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಬೇಕು. ತಕ್ಷಣವೇ ರೋಗಿಯ ಮಾಹಿತಿಯನ್ನು ಕೂಡಲೇ ಇಲಾಖೆಗೆ ನೀಡಬೇಕು ಎಂದು ರಾಜ್ಯದ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಸೂಚನಾ ಪತ್ರ ನೀಡಿದೆ.

ನಿಪಾಹ್‌ ವೈರಸ್‌ ಜ್ವರದ ಲಕ್ಷಣ: ಜ್ವರ, ತಲೆನೋವು, ವಾಂತಿ, ತಲೆ ಸುತ್ತು, ಪ್ರಜ್ಞಾಹೀನತೆಗೆ ಒಳಗಾಗುವುದು, ಅತಿ ಜ್ವರ ಮಿದುಳಿಗೆ ವ್ಯಾಪಿಸುವುದು, ಮಾತು ತೊದಲುವಿಕೆ, ಸೋಂಕಿತ ದಿನದಿಂದ 4ರಿಂದ 18 ದಿನಗಳಲ್ಲಿ ನಿಪಾಹ್‌ ವೈರಸ್‌ ರೋಗದ ಲಕ್ಷಣ ಕಾಣಿಸಿಕೊಳ್ಳುತ್ತದೆ.

ವೈರಸ್‌ ಹರಡುವ ವಿಧಾನ: ಬಾವಲಿಗಳಿಂದ ಪ್ರಾಣಿಗಳಿಗೆ, ಪ್ರಾಣಿಗಳಿಂದ ಪ್ರಾಣಿಗಳಿಗೆ ಹಾಗೂ ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ಬಾವಲಿ ಮತ್ತು ಪ್ರಾಣಿಗಳಿಂದ ಸ್ರವಿಸುವ ದ್ರವಗಳ ನೇರ ಸಂಪರ್ಕ ಹೊಂದಿದರೂ ಹರಡುತ್ತದೆ. ಸೋಂಕಿತ ಬಾವಲಿ, ಪ್ರಾಣಿಗಳ ಸೋಂಕಿತ ಪದಾರ್ಥಗಳನ್ನು ಉಪಯೋಗಿಸುವುದರಿಂದಲೂ ಹರಡುತ್ತದೆ.

ಮುಂಜಾಗರೂಕತಾ ಕ್ರಮ: ಯಾವುದೇ ರೀತಿಯ ಜ್ವರ ಕಂಡುಬಂದರೆ ನಿರ್ಲಕ್ಷಿಸುವುದು ಸಲ್ಲದು. ನಿಪಾಹ್‌ ವೈರಸ್‌ ಲಕ್ಷಣಗಳಿರುವ ಜ್ವರ ಕಂಡು ಬಂದರೆ ತಕ್ಷಣ ವೈದ್ಯರ ಸಲಹೆ ಪಡೆಯಬೇಕು. ರೋಗಿಯೊಂದಿಗೆ ಕಾರ್ಯ ನಿರ್ವಹಿಸುವ ಸಿಬ್ಬಂದಿ ಮಾಸ್ಕ್, ಕೈಗವಚ ಧರಿಸುವುದು ಕಡ್ಡಾಯ. ಯಾವುದೇ ಪ್ರಾಣಿ, ಪಕ್ಷಿ ಕಚ್ಚಿದ ಹಾಗೂ ಮಳೆ ಗಾಳಿಗೆ ಬಿದ್ದ ಹಣ್ಣು ಸೇವಿಸಬಾರದು. ಬೀದಿಬದಿ ಕತ್ತರಿಸಿದ ಹಣ್ಣು ಹಂಪಲು ತಿನ್ನಬಾರದು.

ನೀರಾ ಇಳಿಸುವವರು ವೈಯಕ್ತಿಕವಾಗಿ ಸ್ವತ್ಛತೆ ಕಾಪಾಡಿಕೊಳ್ಳಬೇಕು. ಶುಚಿಯಾಗಿಲ್ಲದ ಕೈಗಳಿಂದ ಕಣ್ಣು, ಮೂಗು ಉಜ್ಜಬಾರದು. ಕಚ್ಚಾ ಖರ್ಜೂರ ಸೇವಿಸದಿರುವುದು ಒಳಿತು. ಸಂಸ್ಕರಿಸದ ಯಾವುದೇ “ಡ್ರೈ ಫ‌ೂಟ್‌’ ಉಪಯೋಗಿಸುವುದು. ಹಂದಿ ಸಾಕಣೆ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಯಾವುದೇ ರೀತಿಯ ಗಾಯ ಅಥವಾ ಸೋಂಕಿಗೆ ಒಳಗಾಗಿದ್ದರೆ ಸೂಕ್ತ ಚಿಕಿತ್ಸೆ ಪಡೆಯಬೇಕು.

ಸೋಂಕಿತ, ಕಾಯಿಲೆ ಬಂದಿರುವ ಹಂದಿಗಳ ಸಂಪರ್ಕದಲ್ಲಿರಬಾರದು. ಬಾವಲಿಗಳು ಹೆಚ್ಚಾಗಿರುವ ಪ್ರದೇಶದಲ್ಲಿ ಸಂಗ್ರಹಿಸುವ ಶೇಂದಿ ಹಾಗೂ ಪಾನೀಯಗಳನ್ನು ಸೇವಿಸದಿರುವುದು ಉತ್ತಮ. ಬಾವಲಿಗಳು ಹೆಚ್ಚಿರುವ ಪ್ರದೇಶಗಳಲ್ಲಿ ತೆರೆದ ಬಾವಿ ನೀರನ್ನು ಶುದ್ದೀಕರಿಸಿ ಬಳಸಬೇಕು. ಬಾವಿಗಳನ್ನು ಬಲೆಗಳಿಂದ ಮುಚ್ಚಬೇಕು.

Advertisement

Udayavani is now on Telegram. Click here to join our channel and stay updated with the latest news.

Next