Advertisement

ಘಾಟಿ ರಸ್ತೆಗಳ ಶೀಘ್ರ ದುರಸ್ತಿ: ಸಿಎಂ ಭರವಸೆ

10:16 AM Sep 15, 2019 | sudhir |

ಬೆಂಗಳೂರು: ಬೆಂಗಳೂರಿ ನಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಶಿರಾಡಿ, ಚಾರ್ಮಾಡಿ ಮತ್ತು ಇತರ ಘಾಟಿ ರಸ್ತೆಗಳನ್ನು ಅತಿಶೀಘ್ರವಾಗಿ ದುರಸ್ತಿ ಪಡಿಸಿ, ಸುಗಮ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

Advertisement

ವಿಧಾನಸೌಧದಲ್ಲಿ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳ ಸಭೆಯಲ್ಲಿ ಮುಖ್ಯಮಂತ್ರಿಗಳು ಈ ಭರವಸೆ ನೀಡಿದ್ದಾರೆ.

ಸಭೆಯ ಬಳಿಕ ಮಾಹಿತಿ ನೀಡಿದ ಮಂಗಳೂರು ನಗರ ಶಾಸಕ ವೇದವ್ಯಾಸ ಕಾಮತ್‌, ಭಾರೀ ಮಳೆಯಿಂದ ಶಿರಾಡಿ, ಚಾರ್ಮಾಡಿ ಸಹಿತವಾಗಿ ಬೆಂಗಳೂರು ಮತ್ತು ಮಂಗಳೂರು ಸಂಪರ್ಕ ಕಲ್ಪಿಸುವ ಘಾಟಿ ರಸ್ತೆಗಳು ಹದಗೆಟ್ಟಿವೆ. ಸಾರ್ವ
ಜನಿಕರ ಹಿತದೃಷ್ಟಿಯಿಂದ ಆದಷ್ಟು ಬೇಗ ಎಲ್ಲ ಘಾಟಿ ರಸ್ತೆಗಳ ದುರಸ್ತಿ ಮಾಡಿಕೊಡುವಂತೆ ಮುಖ್ಯಮಂತ್ರಿ ಗಳಲ್ಲಿ ಮನವಿ ಮಾಡಿದ್ದೇವೆ. ಇದಕ್ಕೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿ, ಘಾಟಿ ರಸ್ತೆಗಳ ತುರ್ತು ದುರಸ್ತಿಗೆ ಅಧಿಕಾರಿಗಳಿಗೆ ನಿರ್ದೇಶಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಪ್ರಾಪರ್ಟಿ ಕಾರ್ಡ್‌ ಸಮಸ್ಯೆ ಪ್ರಸ್ತಾವ
ಪ್ರಾಪರ್ಟಿ ಕಾರ್ಡ್‌ನಲ್ಲಿರುವ ಕೆಲವೊಂದು ಲೋಪದೋಷದಿಂದ ಭೂಮಿ ನೋಂದಣಿ, ಕಟ್ಟಡ ನೋಂದಣಿ ವಿಷಯವಾಗಿ ಮಂಗಳೂರಿನ ಜನತೆ ಎದುರಿಸುತ್ತಿರುವ ಸಮಸ್ಯೆಗೆ ಶೀಘ್ರದಲ್ಲೇ ಮುಕ್ತಿ ಸಿಗಲಿದೆ. ನಗರದ ಜನತೆ ಯಾವ ರೀತಿಯಲ್ಲಿ ಇದರಿಂದ ಸಮಸ್ಯೆಗೆ ಒಳಗಾಗಿದ್ದಾರೆ ಎಂಬುದನ್ನು ಸವಿಸ್ತಾರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಶಿವಮೊಗ್ಗ ನಗರದಲ್ಲೂ ಈ ರೀತಿಯ ಸಮಸ್ಯೆ ಇರುವುದರಿಂದ ಮುಖ್ಯಮಂತ್ರಿಯವರು ತಮಗೂ ಇದರ ಅರಿವಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ನಿರ್ದಿಷ್ಟ ಕಾಲಮಿತಿಗೆ ಹೊಂದಿಕೊಂಡು ಪ್ರಾಪರ್ಟಿ ಕಾರ್ಡ್‌ ಇಲ್ಲದೇ ಭೂ ಮತ್ತು ಕಟ್ಟಡ ಮೊದಲಾದ ನೋಂದಣಿ ಕಾರ್ಯ ಮಾಡಬೇಕು. ಪ್ರಾಪರ್ಟಿ ಕಾರ್ಡ್‌ ನಲ್ಲಿರುವ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕರಾವಳಿಯ ಸಂಸದರು, ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಸಹಿತವಾಗಿ ಸಭೆ ನಡೆಸಿ, ಲೋಪ ದೋಷಗಳನ್ನು ಸರಿಪಡಿಸಿದ ಅನಂತರ ಅದನ್ನು ಕಡ್ಡಾಯ ಮಾಡಬೇಕು. ಅಲ್ಲಿಯವರೆಗೂ ಪ್ರಾಪರ್ಟಿ ಕಾರ್ಡ್‌ ಇಲ್ಲದೇ ಭೂಮಿ ಮತ್ತು ಕಟ್ಟಡ ನೋಂದಣಿಗೆ ಅವಕಾಶ ಮಾಡಿಕೊಡುವಂತೆ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದರು.

ಸ್ಮಾರ್ಟ್‌ಸಿಟಿ : ವಾರದಲ್ಲಿ ಸಭೆ
ಕೇಂದ್ರ ಸರಕಾರದ ಸ್ಮಾರ್ಟ್‌ಸಿಟಿ ಯೋಜನೆಗೆ ಇನ್ನಷ್ಟು ವೇಗ ನೀಡಬೇಕು ಎಂದು ಕರಾವಳಿಯ ಜನಪ್ರತಿನಿಧಿಗಳ ನಿಯೋಗ ಮುಖ್ಯಮಂತ್ರಿಗಳನ್ನು ಕೋರಿಕೊಂಡಿದೆ. ನಗರಾಭಿವೃದ್ಧಿ ಖಾತೆಯೂ ಸದ್ಯ ಮುಖ್ಯಮಂತ್ರಿ ಯವರ ಬಳಿಯೇ ಇರುವುದರಿಂದ ಮುಂದಿನ ವಾರದಲ್ಲಿ ಈ ಕುರಿತಾಗಿ ವಿವಿಧ ಪ್ರದೇಶದ ಶಾಸಕರ ಸಭೆ ಕರೆದು, ಸ್ಮಾರ್ಟ್‌ಸಿಟಿ ಕಾಮಗಾರಿಗೆ ವೇಗ ನೀಡಲು ನಿರ್ದೇಶಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next