Advertisement
ಒಂದು ರೀತಿಯಲ್ಲಿ ಇದು ಕಾಂಗ್ರೆಸ್ ಸ್ವತಹ ಆಹ್ವಾನಿಸಿಕೊಂಡ ಗೊಂದಲ. ಬಿಜೆಪಿ ಅಧಿಕಾರಕ್ಕೇರುವುದನ್ನು ತಡೆಯಬೇಕೆಂಬ ಏಕೈಕ ಗುರಿಯಿಂದ ಅದು ಬರೀ 38 ಸ್ಥಾನಗಳಿದ್ದ ಪಕ್ಷಕ್ಕೆ ಮುಖ್ಯಮಂತ್ರಿ ಪಟ್ಟವನ್ನು ಧಾರೆಯೆರೆದು ನೀಡಿತು. ಆಗ ಬೇಷರತ್ತು ಬೆಂಬಲ ಘೋಷಿಸಿದ ಪಕ್ಷ ಅನಂತರ ಒಂದೊಂದೇ ಷರತ್ತುಗಳನ್ನು ಮುಂದಿಡತೊಡಗಿತು. ಸಾಕಷ್ಟು ಹೆಣಗಾಡಿದ ಬಳಿಕ ಹೇಗೋ ಸರಕಾರವೊಂದು ಅಸ್ತಿತ್ವಕ್ಕೆ ಬಂದು ಇನ್ನೇನು ಎಲ್ಲವೂ ಸರಿಯಾಗುತ್ತಿದೆ ಎಂದುಕೊಳ್ಳುತ್ತಿರುವಾಗಲೇ ಭಿನ್ನಮತ ಘಟಸ್ಫೋಟವಾಗಿದೆ. ಕಾಂಗ್ರೆಸ್‌ನಲ್ಲಿ ಸೂಕ್ತ ಸ್ಥಾನಮಾನ ಸಿಗದವರು ಬಂಡೆದಿದ್ದರೆ ಜೆಡಿಎಸ್‌ನಲ್ಲಿ ಸಮರ್ಪಕ ಖಾತೆ ಸಿಗಲಿಲ್ಲ ಎಂದು ಹಲವು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ಸ್ವತಹ ಹೈಕಮಾಂಡ್ ಸೂಚಿಸಿದರೂ ಭಿನ್ನಮತ ಶಮನವಾಗುತ್ತಿಲ್ಲ.
Related Articles
Advertisement
ರಾಜ್ಯದಲ್ಲಿ ಒಂದು ವರ್ಷದ ಹಿಂದೆಯೇ ಚುನಾವಣಾ ಕಾವು ಕಾಣಿಸಿಕೊಂಡಿತ್ತು. ಅನಂತರ ನಡೆದದ್ದೆಲ್ಲ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡಿರುವ ಕಾರ್ಯಕ್ರಮಗಳೇ. ಆಡಳಿತ ಯಂತ್ರವೂ ಸಂಪೂರ್ಣವಾಗಿ ಚುನಾವಣೆಯಲ್ಲಿ ತೊಡಗಿಕೊಂಡಿತ್ತು. ಚುನಾವಣೆ ಘೋಷಣೆಯಾದ ಮೇಲಂತೂ ಸರಕಾರಿ ಕೆಲಸಗಳೆಲ್ಲ ನನೆಗುದಿಗೆ ಬಿದ್ದಿವೆ. ಚುನಾವಣೆ ಮುಗಿದು ಹೊಸ ಸರಕಾರ ರಚನೆಯಾದ ಬಳಿಕ ಜಡವಾಗಿರುವ ಆಡಳಿತ ಯಂತ್ರಕ್ಕೆ ಚುರುಕುಮುಟ್ಟಿಸುವ ಕೆಲಸ ಮೊದಲು ಆಗಬೇಕಿತ್ತು. ಆದರೆ ಅತಂತ್ರ ಸ್ಥಿತಿಯಿಂದಾಗಿ ಆಡಳಿತದಲ್ಲಿ ಸ್ಥಿರತೆಯೇ ಇಲ್ಲದಂತಾಗಿದೆ. ಇದರಿಂದ ಜನರಿಗೆ ಆಗಿರುವ ಸಮಸ್ಯೆಗಳು ಒಂದೆರಡಲ್ಲ. ಆದರೆ ಗೆದ್ದು ಬಂದಿರುವವರು ಇದ್ಯಾವುದರ ಪರಿವೆ ಇಲ್ಲದಂತೆ ಕಿತ್ತಾಡುವುದರಲ್ಲಿ ಮಗ್ನರಾಗಿದ್ದಾರೆ.
ಸ್ವತಹ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾದಿಯಾಗಿ ಸರಕಾರದಲ್ಲಿರುವ ಪ್ರಮುಖರೆಲ್ಲ ಬಂಡಾಯ ಶಮನದಲ್ಲಿ ನಿರತರಾದರೆ ಆಡಳಿತ ನಡೆಸುವವವರು ಯಾರು? ಆರಂಭದಲ್ಲೇ ಅಧಿಕಾರಕ್ಕಾಗಿ ಈ ರೀತಿ ಕಿತ್ತಾಡುವುದರಿಂದ ಯಾವ ರೀತಿಯ ಆಡಳಿತವನ್ನು ನಿರೀಕ್ಷಿಸಬಹುದು ಎಂಬೆಲ್ಲ ಪ್ರಶ್ನೆಗಳು ಜನರಲ್ಲಿ ಸುಳಿದಾಡುತ್ತಿವೆ. ಭಿನ್ನಮತ ಶಮನವನ್ನು ಪಕ್ಷದ ಉಸಾಬರಿಗೆ ಬಿಟ್ಟು ಆಡಳಿದತ್ತ ಗಮನ ನೀಡಬೇಕಾದುದು ಸದ್ಯದ ಅಗತ್ಯ. ಸರಕಾರ ಈ ನಿಟ್ಟಿನಲ್ಲಿ ಮುಂದಡಿಯಿಡಲಿ. ಅಂತೆಯೇ ವಿಪಕ್ಷವೂ ಕದಡಿದ ನೀರಿನಲ್ಲಿ ಮೀನು ಹಿಡಿಯುವ ಪ್ರಯತ್ನ ಮಾಡದೆ ಜವಾಬ್ದಾರಿಯುತವಾಗಿ ವರ್ತಿಸಬೇಕು.