ಮುಂಬಯಿ: ಕೇರಳದ ಮಾಜಿ ಗೃಹ ಸಚಿವ, ಸಿಪಿಐ(ಎಂ) ಹಿರಿಯ ನಾಯಕ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೋಯ್ ವಿನೋದಿನಿ ಬಾಲಕೃಷ್ಣನ್ ಅವರ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಮುಂಬಯಿಯ ಓಶಿವಾರಾ ಠಾಣೆಯಲ್ಲಿ 33ರ ಹರೆಯದ ಮಹಿಳೆ ದೂರು ದಾಖಲಿಸಿದ್ದು, ಬಿನೋಯ್ ನನ್ನ ಮೇಲೆ ಅತ್ಯಾಚಾರ ಮಾಡಿ ವಂಚಿಸಿದ್ದಾನೆ ಎಂದು ಪೊಲೀಸರ ಬಳಿ ನ್ಯಾಯ ಕೇಳಿದ್ದಾರೆ.
ಕೆಲ ವರ್ಷಗಳ ಹಿಂದೆ ಬಿನೋಯ್‌ಗೆ ಬಾರ್ ಡಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ ದುಬೈನಲ್ಲಿ ಪರಿಚಯವಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಬಿನೋಯ್ ಆಕೆಯೊಂದಿಗೆ ದೇಹ ಸಂಪರ್ಕ ಬೆಳೆಸಿ ವಿವಾಹವಾಗುವ ಭರವಸೆ ನೀಡಿದ್ದು, ಕೆಲಸವನ್ನೂ ಬಿಡುವಂತೆ ಹೇಳಿದ್ದ ಎಂದು ದೂರಿನಲ್ಲಿ ಹೇಳಿಕೊಳ್ಳಲಾಗಿದೆ.
2010 ರಲ್ಲಿ ಅಂಧೇರಿಯ ಬಾಡಿಗೆ ಫ್ಲ್ಯಾಟ್‌ಗೆ ಬಿನೋಯ್ ನಿರಂತರವಾಗಿ ಆಗಮಿಸುತ್ತಿದ್ದ, ನಮ್ಮಿಬ್ಬರ ಸಂಬಂಧಕ್ಕೆ ಸಾಕ್ಷಿಯಾಗಿ ನನಗೆ ಮಗುವಿದೆ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಬಿನೋಯ್ ಬೇರೊಂದು ಮದುವೆಯಾದ ವಿಚಾರ ಕಳೆದ ವರ್ಷ ತಿಳಿದಿದೆ. ಆ ಬಳಿಕ ಆತ ನನಗೆ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾರೆ.