Advertisement

ಪತಿಯಿಂದಲೇ ರೇಪ್‌! ರಂಜಾನ್‌ ನಂತರ ದೂರು ಕೊಡುವೆ ಎಂದ ಮಹಿಳೆ

11:58 AM Jun 18, 2017 | Team Udayavani |

ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯ ವಿರುದ್ಧವೇ ಅತ್ಯಾಚಾರ ಆರೋಪ ಹೊರಿಸಿರುವ ಮಹಿಳೆಯೊಬ್ಬರು, ಈ ಸಂಬಂಧ ಪೊಲೀಸರಿಗೆ ದೂರು ನೀಡಲು ನಿರಾಕರಿಸಿದ್ದಾರೆ. ಆದರೆ, ವೈದ್ಯಕೀಯ ಪರೀಕ್ಷಾ ವರದಿ ಆಧಾರದ ಮೇಲೆಯೇ ಭಾರತೀನಗರ ಠಾಣೆ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Advertisement

ಯಲಹಂಕ ನಿವಾಸಿ, ಪತಿ ಫ‌ಜ್ಲುದ್ದೀನ್‌ ಎಂಬಾತನ ವಿರುದ್ಧ ಅವರ ಪತ್ನಿಯೇ ಅತ್ಯಾಚಾರ ಆರೋಪ ಮಾಡಿದ್ದಾರೆ. ಜೂ.11ರಂದು ಪತಿ ಫ‌ಜ್ಲುದ್ದೀನ್‌ ಬಲವಂತವಾಗಿ ಸಂಭೋಗ ಮಾಡಿದ್ದಲ್ಲದೇ, ತೀವ್ರ ಹಲ್ಲೆ ನಡೆಸಿದ್ದಾನೆ. ಇದರಿಂದ ಗಾಬರಿಗೊಂಡ ಸಂತ್ರಸ್ತೆ ನಗರದ ಬೌರಿಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೇಳು ವರ್ಷಗಳ ಹಿಂದೆ ಫ‌ಜ್ಲುದ್ದೀನ್‌ನನ್ನು ಮಹಿಳೆ ವಿವಾಹವಾಗಿದ್ದು, ಇವರಿಗೆ ನಾಲ್ಕು ವರ್ಷದ ಮಗುವಿದೆ. ದಂಪತಿ ನಡುವೆ ನಿತ್ಯ ಜಗಳ ನಡೆಯುತ್ತಿತ್ತು. ಈ ಮಧ್ಯೆ ಪತಿ ಫ‌ಜ್ಲುದ್ದೀನ್‌ ವಿರುದ್ಧ 2015 ಜ.3ರಂದು ಯಲಹಂಕ ನ್ಯೂಟೌನ್‌ ಠಾಣೆಯಲ್ಲಿ ದೂರು ನೀಡಿದ್ದ ಮಹಿಳೆ “ಪತಿ ತನ್ನ ಮೂರು ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ,’ ಎಂದು ಆರೋಪಿಸಿದ್ದರು.

ಈ ಸಂಬಂಧ ಪೊಕೊ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಫ‌ಜ್ಲುದ್ದೀನ್‌ನ್ನು ಬಂಧಿಸಿದ್ದರು. ನಂತರ ಜಾಮೀನು ಪಡೆದು ಫ‌ಜ್ಲುದ್ದೀನ್‌ ಹೊರಬಂದಿದ್ದ. ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಚಿನ್ನಾಭರಣವನ್ನು ಪತ್ನಿಯೇ ಕದ್ದೊಯ್ದಿದ್ದಾಳೆ ಎಂದು ಆರೋಪಿಸಿ 2016 ಮಾ.15ರಂದು ಫ‌ಜ್ಲುದ್ದೀನ್‌ ಕೂಡ ದೂರು ನೀಡಿದ್ದ. ಈ ನಡುವೆ ಮಗಳ ಮೇಲಿನ ಅತ್ಯಾಚಾರ ಕೇಸಿನಿಂದ ಫ‌ಜ್ಲುದ್ದೀನ್‌ ಖುಲಾಸೆಗೊಂಡಿದ್ದ ಎಂದೂ ಪೊಲೀಸರು ತಿಳಿಸಿದ್ದಾರೆ.

ಸಿಗರೇಟ್‌ನಿಂದ ಸುಟ್ಟ ಪತಿ: ಜೂ.11ರಂದು ಬಂಬೂಬಜಾರ್‌ನಲ್ಲಿ ಪತಿ ಫ‌ಜ್ಲುದ್ದೀನ್‌ ಬಲವಂತವಾಗಿ ಸಂಭೋಗ ಮಾಡಿದಲ್ಲದೇ, ಸಿಗರೇಟ್‌ನಿಂದ ಮುಖ, ಎದೆಭಾಗ ಹಾಗೂ ಖಾಸಗಿ ಭಾಗಕ್ಕೆ ಸುಟ್ಟಿದ್ದಾನೆ. ಜತೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಘಟನೆಯಿಂದ ಗಾಬರಿಗೊಂಡಿದ್ದ ಸಂತ್ರಸ್ತೆ ದೂರು ನೀಡಿರಲಿಲ್ಲ. ಇದೀಗ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದದ್ದರಿಂದ ಶುಕ್ರವಾರ ಬೌರಿಂಗ್‌ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದರು.

Advertisement

ಈ ವೇಳೆ ಪರೀಕ್ಷೆ ನಡೆಸಿದ ವೈದ್ಯರು ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಸಂತ್ರಸ್ತೆ ಬಳಿ ಸ್ಪಷ್ಟನೆ ಕೇಳಿದ್ದರು. ಮಹಿಳೆ ಕೂಡ ತನ್ನ ಮೇಲೆ ದೌರ್ಜನ್ಯ ನಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಪತಿಯೇ ತನ್ನ ಮೇಲೆ ದೌರ್ಜನ್ಯವೆಸಗಿದ್ದಾಗಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯರು, ಭಾರತೀನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ರಂಜಾನ್‌ ನಂತರ ದೂರು: ವೈದ್ಯರು ನೀಡಿದ ದೂರಿನ ಮೇರೆಗೆ ಪೊಲೀಸರು ಸಂತ್ರಸ್ತೆಯನ್ನು ಸಂಪರ್ಕಿಸಿದ್ದಾರೆ. ದೂರು ನೀಡುವಂತೆಯೂ ಮನವಿ ಮಾಡಿದ್ದಾರೆ. ಆದರೆ, ರಂಜಾನ್‌ ಮಾಸ ಚಾಲ್ತಿಯಲ್ಲಿರುವುದರಿಂದ ದೂರು ನೀಡಲಾರೆ ಎಂದು ಮಹಿಳೆ ಹೇಳಿದ್ದಾರೆ. ಮುಂದಿನ ತಿಂಗಳು ದೂರು ನೀಡುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷಾ ವರದಿ ಆಧಾರದ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿ ಬಂಧನಕ್ಕಾಗಿ ಶೋಧ ನಡೆಸಲಾಗುತ್ತಿದೆ.

 ಮಹಿಳೆಯ ಆರೋಪಗಳ ಬಗ್ಗೆಯೂ ಪೊಲೀಸರಿಗೆ ಗೊಂದಲಉಂಟಾಗಿದೆ. ಒಮ್ಮೆ ಬಂಬೂಬಜಾರ್‌ ಬಳಿ ಕೃತ್ಯ ನಡೆದಿದೆ ಎಂದರೆ, ಮತ್ತೂಮ್ಮೆ ಕೆ.ಆರ್‌.ಪುರಂ ಬಳಿ ನಡೆದಿದೆ ಎನ್ನುತ್ತಾರೆ. ಇನ್ನೊಮ್ಮೆ ಅತ್ಯಾಚಾರವಾಗಿರುವ ಸ್ಥಳವೇ ಗೊತ್ತಿಲ್ಲ ಎಂಬ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಸಂತ್ರಸ್ತೆ ದೂರು ನೀಡಲು ನಿರಾಕರಿಸಿದ್ದು, ರಂಜಾನ್‌ ನಂತರ ದೂರು ನೀಡುತ್ತೇನೆಂದು ಹೇಳಿದ್ದಾರೆ. ಆದರೆ, ಸೂಕ್ಷ್ಮ ಪ್ರಕರಣವಾಗಿದ್ದರಿಂದ ವೈದ್ಯರ ಬಳಿ ಸಂತ್ರಸ್ತೆ ನೀಡಿರುವ ದೂರಿನ ಹೇಳಿಕೆಗಳು ಹಾಗೂ ವೈದ್ಯಕೀಯ ವರದಿ ಆಧಾರದ ಮೇಲೆ ಭಾರತೀನಗರ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ.
-ಹೇಮಂತ್‌ ನಿಂಬಾಳ್ಕರ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next