ಬೆಂಗಳೂರು: ಔಷಧಿ ಕ್ಷೇತ್ರದಲ್ಲಿ ನ್ಯಾನೋ ತಂತ್ರಜ್ಞಾನದ ಬಳಕೆ ಹೆಚ್ಚಿಸಿದರೆ, ಸಮಾಜಕ್ಕೆ ಉತ್ಕೃಷ್ಟ ಆರೋಗ್ಯ ಸೇವೆ ಸಿಗಲಿದೆ. ಈ ನಿಟ್ಟಿನಲ್ಲಿ ವಿಜ್ಞಾನಿಗಳು ಸಂಶೋಧನೆಗೆ ಹೆಚ್ಚು ಆಸಕ್ತಿ ವಹಿಸಬೇಕು ಎಂದು ಭಾರತ ರತ್ನ ಪುರಸ್ಕೃತ ವಿಜ್ಞಾನಿ ಪ್ರೊ.ಸಿಎನ್‌ಆರ್ ರಾವ್ ಸಲಹೆ ನೀಡಿದ್ದಾರೆ.
ನ್ಯಾನೋ ಟೆಕ್ನಾಲಜಿ ಫೋರಂ ಜವಾಹರಲಾಲ್ ನೆಹರು ವಿಜ್ಞಾನ ಸಂಶೋನಾ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾನೋ ತಂತ್ರಜ್ಞಾನ ಕ್ಷೇತ್ರದ ಸಾಧನೆಗಾಗಿ ವಿಜ್ಞಾನಿ ಪ್ರೊ.ನಾರಾಯಣ್ ಪ್ರಧಾನ್ ಅವರಿಗೆ “ಯಂಗ್ ನ್ಯಾನೋ ಸೈಟಿಂಸ್ಟ್ ಇಂಡಿಯಾ-2017′ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
“ನ್ಯಾನೋ ತಂತ್ರಜ್ಞಾನದಲ್ಲಿ ಸಾಕಷ್ಟು ಆವಿಷ್ಕಾರಗಳು ನಡೆಯುತ್ತಿವೆ. ಔಷಧ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿಯಾಗಿಲ್ಲ. ವಿಜ್ಞಾನಿಗಳು ನ್ಯಾನೋ ಬಯೋ ಮತ್ತು ನ್ಯಾನೋ ಔಷಧ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ನಡೆಸಿದರೆ ಸಮಾಜಕ್ಕೆ ಸಹಾಯವಾಗಲಿದೆ. ಈ ನಿಟ್ಟಿನಲ್ಲಿ ನ್ಯಾನೋ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವ ಮತ್ತು ಹಿರಿಯ ವಿಜ್ಞಾನಿಗಳು ಪ್ರಯತ್ನಿಸಬೇಕು,’ ಎಂದು ಹೇಳಿದರು.
“ಕಳೆದ 15 ವರ್ಷಗಳಲ್ಲಿ ಭಾರತ ನ್ಯಾನೋ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತಹ ಸಾಧನೆ ಮಾಡಿದೆ. ಹಲವು ನಿರೀಕ್ಷೆಗಳನ್ನು ಮೂಡಿಸಿದೆ. ವೈಜ್ಞಾನಿಕ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಹಲವು ಯುವ ವಿಜ್ಞಾನಿಗಳು ಸಂಶೋಧನೆ ಕೈಗೊಂಡಿರುವುದು ಶ್ಲಾಘನೀಯ. ಈ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಿದ ವಿಜ್ಞಾನಿಗಳನ್ನು ಗುರುತಿಸಿ ನೀಡುತ್ತಿರುವ ಈ ಪ್ರಶಸ್ತಿ, ಹೆಚ್ಚಿನ ಸಂಖ್ಯೆಯಲ್ಲಿ ಯುವ ವಿಜ್ಞಾನಿಗಳನ್ನು ಪ್ರೇರೇಪಿಸಲಿದೆ,’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಭಾರತೀಯ ವಿಜಾnನಿಗಳಿಗೆ ನಿರಂತರ ಬೆಂಬಲ ನೀಡುತ್ತ ಬರುತ್ತಿರುವ ನ್ಯಾನೋಟೆಕ್ನಾಲಜಿ ಫೋರಂ ಜಗತ್ತಿನಲ್ಲೇ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಈ ಯುವ ವಿಜಾnನಿ ಪುರಸ್ಕಾರ ಕೇವಲ ನ್ಯಾನೋ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಜಾnನಿಗಳಿಗೆ ಮಾತ್ರ ಸೀಮಿತವಾಗದೆ, ಭೌತಶಾಸ್ತ್ರ, ರಸಾಯನಿಕ ಶಾಸ್ತ್ರ ಹಾಗೂ ಮೈಕ್ರೋಬಯಾಲಜಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ವಿಜಾnನಿಗಳಿಗೂ ನೀಡಿ ಪ್ರೋತ್ಸಾಹಿಸಬೇಕು,’ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಲ್ಯಾನ್‌ಸ್ಟರ್ ವಿಶ್ವವಿದ್ಯಾಲಯದ ಪ್ರೊ. ರಿಚರ್ಡ್ ಪಿ.ಹಲೈ “ಎಕ್ಸ್‌ಪೆರಿಮೆಂಟಲ್ ಕ್ವಾಂಟಮ್ ಸೈನ್ಸ್ ಅಂಡ್ ಟೆಕ್ನಾಲಜಿ ಹಾಗೂ ಲೊ ಟೆಂಪ್ರಚರ್’ ಕುರಿತು ಉಪನ್ಯಾಸ ನೀಡಿದರು. ಈ ವೇಳೆ ಯು.ಕೆ ಆಕ್ಸ್‌ಫರ್ಡ್ ಇನ್‌ಸ್ಟ್ರೆಮೆಂಟ್ ಮುಖ್ಯಸ್ಥ ಡಾ.ಜಿಹಾದ್ ಮೆಲೇಮ್, ಐಐಎಸ್‌ಸಿಯ ಪೊ›.ಎ.ಕೆ.ಸೂದ್, ಎನ್‌ಟಿ ಫೋರಂನ ಮಂಗೇಶ್ ಕುಲಕರ್ಣಿ, ಆಕ್ಸ್‌ಫರ್ಡ್ ಇನ್ಸ್‌ಸ್ಟ್ರೆಮೆಂಟ್ಸ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ರಾಜೇಶ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಶಸ್ತಿಗೆ 34 ಹೆಸರು ನಾಮನಿರ್ದೇಶನ
2017ನೇ ಸಾಲಿನ ಯಂಗ್ ಸೈಂಟಿಸ್ಟ್ ಇಂಡಿಯಾ ಪ್ರಶಸ್ತಿಗಾಗಿ 34 ಹೆಸರುಗಳು ನಾಮನಿದೇರ್ಶನಗೊಂಡಿದ್ದವು. ಅವುಗಳಲ್ಲಿ ನ್ಯಾನೋ ತಂತ್ರಜ್ಞಾನದಲ್ಲಿ ಗಣನೀಯ ಸೇವೆ ಸಲ್ಲಿಸಿದ ಪ್ರೊ.ನಾರಾಯಣ್ ಪ್ರಧಾನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಪ್ರಶಸ್ತಿಯು 2 ಲಕ್ಷ ರೂ.ನಗದು, ಪದಕ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ.