Advertisement

ಅರ್ಜೆಂಟಲ್ಲಿ ಪರೀಕ್ಷೆ ಬರೆದು ರ್‍ಯಾಂಕ್‌ ಬಂದೆ

05:21 PM Apr 07, 2020 | Suhan S |

ಏಳನೇ ತರಗತಿಯಲ್ಲಿರುವಾಗ, ನಾನು ಒಂದು ತಿಂಗಳು ಶಾಲೆಗೆ ಹೋಗಿರಲಿಲ್ಲ. ಅದಕ್ಕೆ ಕಾರಣ ಏನು ಅನ್ನೋದು ಸರಿಯಾಗಿ ನೆನಪಿಗೆ ಬರುತ್ತಿಲ್ಲ. ಆದರೆ, ಒಂದು ತಿಂಗಳ ನಂತರ ಶಾಲೆಗೆ ಹೋದಾಗ ನನಗೆ ಒಂದು ಶಾಕ್‌ ಕಾದಿತ್ತು. ಅದೇನೆಂದರೆ, ಅಂದು ನಾನು ಚಿಂತನ- ವಿಜ್ಞಾನ ಎಂಬ ಪರೀಕ್ಷೆ ಬರೆಯಬೇಕಿತ್ತು.

Advertisement

ಸಹಪಾಠಿಗಳು ಹೇಳಿದಾಗಲೇ ನನಗೆ ಈ ವಿಷಯ ಗೊತ್ತಾಗಿದ್ದು. ಆದರೆ, ನಾನು ಆ ಪರೀಕ್ಷೆಯನ್ನು ಕಟ್ಟಿರಲಿಲ್ಲ. ಹಾಗಾಗಿ, ಅವರ ಮಾತನ್ನು ಹಗುರವಾಗಿ ಪರಿಗಣಿಸಿ ಸುಮ್ಮನೇ ಕೂತಿದ್ದೆ. ನಮ್ಮ ಟೀಚರ್‌ ಬಂದವರೇ- “ಪರೀಕ್ಷೆಗೆ ರೆಡಿ ತಾನೇ’ ಅಂದರು. ನಾನು ಗಾಬರಿಯಿಂದ, “ಯಾವ ಪರೀಕ್ಷೆ?’ ಎಂದು ಕೇಳಿದೆ. ನನಗೆ ವಿಷಯ ತಿಳಿದಿಲ್ಲ ಎಂದು ಅವರಿಗೆ ಗೊತ್ತಾಗಿದ್ದೇ ತಡ, ಎಲ್ಲವನ್ನೂ ವಿವರಿಸಿದರು. ನಂತರ- “ನೋಡೂ, ನಿನ್ನ ಮೇಲೆ ಬಹಳ ನಂಬಿಕೆ ಇಟ್ಟು, ನಮ್ಮ ಶಾಲೆಗೆ ಕೀರ್ತಿ ತರುತ್ತೀಯ ಎನ್ನುವ ನಿರೀಕ್ಷೆಯಲ್ಲಿ ನೀನು ಶಾಲೆಗೆ ಬಾರದೇ ಇದ್ದರೂ, ನಿನ್ನ ಹೆಸರಲ್ಲಿ ಫೀ ತುಂಬಿದ್ದೇನೆ. ಇವತ್ತೇ ಆ ಪರೀಕ್ಷೆ’ ಎಂದರು.

ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ. “ಬಾ’ ಎಂದು ಕರೆದ ಟೀಚರ್‌, ನಿಗದಿಪಡಿಸಿದ ಸ್ಥಳದಲ್ಲಿ ಕೂಡಿಸಿ, ಪ್ರಶ್ನೆ ಪತ್ರಿಕೆ ಕೊಟ್ಟರು. ನನಗೆ ಪ್ರಶ್ನೆಪತ್ರಿಕೆಗಿಂತ, ಟೀಚರ್‌ ನನ್ನ ಮೇಲಿಟ್ಟಿರೋ ನಂಬಿಕೆಯೇ ಹೆಚ್ಚಾಗಿ ಭಯಪಡಿಸಿಬಿಟ್ಟಿತ್ತು. ಹಾಗೋ- ಹೀಗೋ ಪರೀಕ್ಷೆ ಬರೆದು ನಿಟ್ಟುಸಿರು ಬಿಟ್ಟೆ.

ಒಂದಷ್ಟು ವಾರಗಳ ನಂತರ ಫ‌ಲಿತಾಂಶ ಬಂತು. ಅದರಲ್ಲಿ, ಯಾವ ಯಾವ ಶಾಲೆಯ ಮಕ್ಕಳು ಯಾವ ಸ್ಥಾನ ಪಡೆದುಕೊಂಡಿದ್ದಾರೆ ಎನ್ನುವ ವಿವರವಿತ್ತು. ನಮ್ಮ ಟೀಚರ್‌ ಅದನ್ನು ಹಿಡಿದುಕೊಂಡು, ಫ‌ಲಿತಾಂಶ ಹೇಳುತ್ತಾ ಬಂದರು. ನಮ್ಮ ಶಾಲೆಯ ರಿಸಲ್ಟ್ ಹೇಳ್ಳೋ ಹೊತ್ತಿಗೆ ಎದೆ ಬಡಿತ ಜಾಸ್ತಿ ಆಗಿತ್ತು. ನನ್ನ ಸಹಪಾಠಿ ಸಿಂದಗಿ ತಾಲೂಕಿಗೆ ನಾಲ್ಕನೇ ಶ್ರೇಣಿ ಬಂದ ವಿಷಯ ತಿಳಿಸಿದರು. ನಂತರ ಸ್ವಲ್ಪ ಹೊತ್ತು ಸತಾಯಿಸಿದ ಟೀಚರ್‌, ನಾನು ರಾಜ್ಯಕ್ಕೆ ಎರಡನೇ ಸ್ಥಾನ ಬಂದಿರುವುದನ್ನು ಅನೌನ್ಸ್ ಮಾಡಿದರು. ಸಂತೋಷ ತಡೆಯಲಾಗದೇ ಮನೆಗೆ ಬಂದವಳೆ, ಮನೆಯವರ ಮುಂದೆ ನಡೆದ ಎಲ್ಲಾ ವಿಷಯ ತಿಳಿಸಿದೆ. ನನ್ನ ಮೇಲೆ ಅಪಾರ ನಂಬಿಕೆ ಇಟ್ಟು ನನ್ನ ಹೆಸರಲ್ಲಿ ಅರ್ಜಿ ತುಂಬಿ ಒಂದು ಪರೀಕ್ಷೆಯಲ್ಲಿ ಶ್ರೇಣಿ ಪಡೆಯಲು ಕಾರಣರಾದ ಆ ಟೀಚರ್‌ಗೊಂದು ಸಲಾಂ.

 

Advertisement

-ಪ್ರೀತಿ ನಾಗನಗೌಡ ಪಾಟೀಲ, ಸಿಂದಗಿ

Advertisement

Udayavani is now on Telegram. Click here to join our channel and stay updated with the latest news.

Next