Advertisement

ಇಂದಿನಿಂದ ರಣಜಿ ಸೆಮಿಫೈನಲ್‌ ಕರ್ನಾಟಕ-ಸೌರಾಷ್ಟ್ರ ಸೆಣಸಾಟ

12:30 AM Jan 24, 2019 | Team Udayavani |

ಬೆಂಗಳೂರು: ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಸೆಮಿಫೈನಲ್‌ ಸಮರ ಗುರುವಾರದಿಂದ ಮೊದಲ್ಗೊಳ್ಳಲಿದೆ. ಬೆಂಗಳೂರಿನಲ್ಲಿ ಆತಿಥೇಯ ಕರ್ನಾಟಕ-ಸೌರಾಷ್ಟ್ರ ಸೆಣಸಾಡಿದರೆ, ಇದೇ ಮೊದಲ ಸಲ ಉಪಾಂತ್ಯ ತಲುಪಿರುವ ಕೇರಳ ತಂಡ ವಯನಾಡ್‌ನ‌ಲ್ಲಿ ಹಾಲಿ ಚಾಂಪಿಯನ್‌ ವಿದರ್ಭ ಸವಾಲನ್ನು ಎದುರಿಸಲಿದೆ.

Advertisement

ತವರು ನೆಲದಲ್ಲಿ ಈಗಾಗಲೇ ರಾಜಸ್ಥಾನ ವಿರುದ್ಧ ಕ್ವಾರ್ಟರ್‌ ಫೈನಲ್‌ ಪಂದ್ಯ ಗೆದ್ದಿರುವ ಮನೀಷ್‌ ಪಾಂಡೆ ಪಡೆ ಮತ್ತೂಂದು ಗೆಲುವಿನ ಆತ್ಮವಿಶ್ವಾಸದಲ್ಲಿದೆ. ಇನ್ನೊಂದೆಡೆ ಬಲಿಷ್ಠ ಸೌರಾಷ್ಟ್ರ ಕೂಡ ಮುನ್ನಡೆಯ ಯೋಜನೆಯಲ್ಲಿದೆ. ಹೀಗಾಗಿ ಎರಡೂ ತಂಡಗಳ ನಡುವಿನ ಕ್ರಿಕೆಟ್‌ ಕದನ ತೀವ್ರ ಕುತೂಹಲ ಕೆರಳಿಸಿದೆ.

ಸೇಡು ತೀರಿಸೀತೇ ಕರ್ನಾಟಕ?
ಸೆಮೀಸ್‌ನಲ್ಲಿ ಎದುರಾಗಿರುವ ಈ ಎರಡೂ ತಂಡಗಳೂ ಲೀಗ್‌ ಹಂತದಲ್ಲಿ ಒಂದೇ ಗುಂಪಿನಲ್ಲಿದ್ದವು. ಕರ್ನಾಟಕ ರಾಜ್‌ಕೋಟ್‌ನಲ್ಲಿ ನಡೆದ ಎಲೈಟ್‌ “ಎ’ ಗುಂಪಿನ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ 87 ರನ್‌ ಅಂತರದಿಂದ ಸೋಲನುಭವಿಸಿತ್ತು. ಈ ಸೋಲಿಗೆ ಸೇಡು ತೀರಿಸಿಕೊಳ್ಳಲು ಕರ್ನಾಟಕ ತಂಡಕ್ಕೆ ಒಳ್ಳೆಯ ಅವಕಾಶ ಎದುರಾಗಿದೆ. ಇದರಲ್ಲಿ ರಾಜ್ಯ ಆಟಗಾರರು ಎಷ್ಟರ ಮಟ್ಟಿಗೆ ಯಶಸ್ಸು ಕಾಣಬಹುದು ಎನ್ನುವುದನ್ನು ಕಾದು ನೋಡಬೇಕಿದೆ.

ರಾಜ್ಯಕ್ಕೆ ಮಾಯಾಂಕ್‌ ಬಲ
ರಾಜಸ್ಥಾನ ವಿರುದ್ಧದ ಕ್ವಾರ್ಟರ್‌ ಫೈನಲ್‌ ಪಂದ್ಯದ ವೇಳೆ ಗೈರಾಗಿದ್ದ ಮಾಯಾಂಕ್‌ ಅಗರ್ವಾಲ್‌ ತಂಡಕ್ಕೆ ವಾಪಸ್‌ ಆಗಿದ್ದಾರೆ. ಇದು ಸಹಜವಾಗಿಯೇ ತಂಡದ ಹುರುಪನ್ನು ಇಮ್ಮಡಿಗೊಳಿಸಿದೆ. ಅಗರ್ವಾಲ್‌ಗಾಗಿ ಪವನ್‌ ದೇಶಪಾಂಡೆ ಹೊರಗುಳಿಯಲಿದ್ದಾರೆ. ಈ ಸಣ್ಣ ಬದಲಾವಣೆ ಹೊರತುಪಡಿಸಿದರೆ ಉಳಿದಂತೆ ಬಹುತೇಕ ಹಳೆಯ ತಂಡವನ್ನು ಉಳಿಸಿಕೊಳ್ಳಲಾಗಿದೆ.

ಬಲಾಡ್ಯ ಸೌರಾಷ್ಟ್ರ
ಪ್ರವಾಸಿ ಸೌರಾಷ್ಟ್ರ ತಂಡದಲ್ಲಿ ಹಲವು ಅನುಭವಿ ಆಟಗಾರರಿದ್ದಾರೆ. ಅದರಲ್ಲೂ ಟೆಸ್ಟ್‌ ಸ್ಪೆಷಲಿಸ್ಟ್‌ ಚೇತೇಶ್ವರ ಪೂಜಾರ ಬಲ ತಂಡಕ್ಕಿರುವುದು ಪ್ಲಸ್‌ ಪಾಯಿಂಟ್‌. ಕ್ವಾರ್ಟರ್‌ ಫೈನಲ್‌ ಹೀರೋ ಹಾರ್ವಿಕ್‌ ದೇಸಾಯಿ ಅರ್ಪಿತ್‌ ವಸವಾಡ, ಸ್ನೇಲ್‌ ಪಟೇಲ್‌, ಜಯದೇವ್‌ ಉನದ್ಕತ್‌ ತಂಡದ ಹೀರೋಗಳಾಗಿ ಗುರುತಿಸಲ್ಪಡುತ್ತಾರೆ.

Advertisement

ಕ್ವಾರ್ಟರ್‌ ಫೈನಲ್‌ನಲ್ಲಿ ಉತ್ತರಪ್ರದೇಶ ವಿರುದ್ಧ 372 ರನ್‌ ಚೇಸ್‌ ಮಾಡಿ ಅಮೋಘ ಗೆಲುವು ಸಾಧಿಸುವ ಮೂಲಕ ಸೌರಾಷ್ಟ್ರ ತನ್ನ ಬ್ಯಾಟಿಂಗ್‌ ಬಲವನ್ನು ಜಾಹೀರುಗೊಳಿಸಿದೆ. ಹೀಗಾಗಿ ತವರಿನ ಪಂದ್ಯವಾದರೂ ಕರ್ನಾಟಕದ ಮುಂದಿನ ಸವಾಲು ಸುಲಭದ್ದೇನೂ ಅಲ್ಲ.

ಕರ್ನಾಟಕ: ಮನೀಷ್‌ ಪಾಂಡೆ (ನಾಯಕ), ಶ್ರೇಯಸ್‌ ಗೋಪಾಲ್‌ (ಉಪ ನಾಯಕ), ಆರ್‌. ವಿನಯ್‌ ಕುಮಾರ್‌, ಡಿ. ನಿಶ್ಚಲ್‌, ಮಾಯಾಂಕ್‌ ಅಗರ್ವಾಲ್‌, ಕರುಣ್‌ ನಾಯರ್‌, ಆರ್‌. ಸಮರ್ಥ್, ಅಭಿಮನ್ಯು ಮಿಥುನ್‌, ರೋನಿತ್‌ ಮೋರೆ, ಕೆ. ಗೌತಮ್‌, ಪ್ರಸಿದ್ಧ್ ಎಂ.ಕೃಷ್ಣ, ಕೆ.ವಿ. ಸಿದ್ಧಾರ್ಥ್, ಜೆ. ಸುಚಿತ್‌, ಬಿ.ಆರ್‌. ಶರತ್‌, ಶರತ್‌ ಶ್ರೀನಿವಾಸ್‌.

ಸೌರಾಷ್ಟ್ರ: ಜಯದೇವ್‌ ಉನದ್ಕತ್‌ (ನಾಯಕ), ಅರ್ಪಿತ್‌ ವಸವಡ, ಚೇತೇಶ್ವರ್‌ ಪೂಜಾರ, ಶೆಲ್ಡನ್‌ ಜಾಕ್ಸನ್‌, ಸ್ನೆಲ್‌ ಪಟೇಲ್‌, ಹಾರ್ವಿಕ್‌ ದೇಸಾಯಿ, ಪ್ರೇರಕ್‌ ಮಂಕಡ್‌, ಚಿರಾಗ್‌ ಜಾನಿ, ಕಿಶನ್‌ ಪರ್ಮಾರ್‌, ಧರ್ಮೇಂದ್ರ ಜಡೇಜ, ಕಮಲೇಶ್‌ ಮಕ್ವಾನ, ಚೇತನ್‌ ಸಕಾರಿಯ, ವಿಶ್ವರಾಜ್‌ ಜಡೇಜ, ಸಮರ್ಥ್ ವ್ಯಾಸ್‌, ಶೌರ್ಯ ಸನಾದಿಯ, ಜಾಯ್‌ ಚೌಹಾಣ್‌.

ಆರಂಭ: ಬೆಳಗ್ಗೆ 9.30
ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

ವೀಕ್ಷಕರಿಗೆ ಉಚಿತ ಪ್ರವೇಶ
ಕರ್ನಾಟಕ- ಸೌರಾಷ್ಟ್ರ ಸೆಮಿಫೈನಲ್‌ ಪಂದ್ಯವನ್ನು ಅಭಿಮಾನಿಗಳು ಉಚಿತವಾಗಿ ವೀಕ್ಷಿಸಬಹುದಾಗಿದೆ ಎಂದು ರಾಜ್ಯ ಕ್ರಿಕೆಟ್‌ ಸಂಸ್ಥೆ ತಿಳಿಸಿದೆ. ಆಸಕ್ತ ಅಭಿಮಾನಿಗಳು ಗೇಟ್‌ ನಂ.15ರಲ್ಲಿ ಪ್ರವೇಶ ಪಡೆಯಬಹುದಾಗಿದೆ ಎಂದು ಕೆಎಸ್‌ಸಿಎ ಮಾಧ್ಯಮ ವಕ್ತಾರ ವಿನಯ್‌ ಮೃತ್ಯುಂಜಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next