ಆಂಗೋಲೆ (ಆಂಧ್ರ ಪ್ರದೇಶ): ಆರಂಭಿಕ ಹದಿಹರೆಯದ ಪೃಥ್ವಿ ಶಾ ಅವರ ಶತಕದ ನೆರವಿನಿಂದ ಮುಂಬಯಿ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಕೂಟದಲ್ಲಿ ಆಂಧ್ರ ಪ್ರದೇಶ ತಂಡದೆದುರು ಮೊದಲ ದಿನ ಆರು ವಿಕೆಟಿಗೆ 248 ರನ್ನುಗಳ ಸಾಧಾರಣ ಮೊತ್ತ ಪೇರಿಸಿದೆ.
ಪೃಥ್ವಿ ಶಾ ಅವರ ಶತಕ ಮತ್ತು ಸಿದ್ಧೇಶ್ ಲಾಡ್ ಅವರ ಅರ್ಧಶತಕದಿಂದಾಗಿ ಮುಂಬಯಿ ಸಾಧಾರಣ ಮೊತ್ತ ಗಳಿಸುವಂತಾಯಿತು. ತಂಡದ ಉಳಿದ ಆಟಗಾರರೆಲ್ಲರೂ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡರು. ಪೃಥ್ವಿ ಶಾ ಅವರು ಸಿದ್ಧೇಶ್ ಲಾಡ್ ಜತೆ ನಾಲ್ಕನೇ ವಿಕೆಟಿಗೆ 125 ರನ್ನುಗಳ ಜತೆಯಾಟ ನಡೆಸಿದ್ದರಿಂದ ಮುಂಬಯಿ ಆರಂಭಿಕ ಕುಸಿತದಿಂದ ಪಾರಾಯಿತು. ಈ ಮೊದಲು ಮುಂಬಯಿ 64 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು.
ಕಳೆದ ವಾರ 18ನೇ ಹರೆಯಕ್ಕೆ ಕಾಲಿಟ್ಟ ಪೃಥ್ವಿ ಶಾ ತನ್ನ 7ನೇ ಪಂದ್ಯ ಮತ್ತು 13ನೇ ಇನ್ನಿಂಗ್ಸ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಐದನೇ ಶತಕ ಸಿಡಿಸಿ ಗಮನ ಸೆಳೆದರು. ಒಡಿಶಾ ವಿರುದ್ಧದ ಈ ಹಿಂದಿನ ಪಂದ್ಯದಲ್ಲೂ ಶಾ ಶತಕ ಹೊಡೆದಿದ್ದರು. ಪೃಥ್ವಿ ಶಾ ಇದೀಗ ಸಚಿನ್ ತೆಂಡುಲ್ಕರ್ ದಾಖಲೆ ಸನಿಹ ಇದ್ದಾರೆ. 18ರ ಹರೆಯದಲ್ಲಿ ತೆಂಡುಲ್ಕರ್ 7 ಶತಕ ಸಿಡಿಸಿದ್ದರು.
2016-17ನೇ ಋತುವಿನಲ್ಲಿ ತಮಿಳುನಾಡು ವಿರುದ್ಧದ ಸೆಮಿಫೈನಲ್ ಪಂದ್ಯದ ಮೂಲಕ ರಣಜಿ ಟ್ರೋಫಿಗೆ ಪಾದಾರ್ಪಣೆಗೈದ ಪಂದ್ಯದಲ್ಲಿಯೇ ಶತಕ ಸಿಡಿಸಿದ್ದ ಶಾ ಆಬಳಿಕ ದುಲೀಪ್ ಟ್ರೋಫಿಗೆ ಪಾದಾರ್ಪಣೆಗೈದ ಪಂದ್ಯದಲ್ಲೂ ಶತಕ ಸಿಡಿಸಿ ಈ ಸಾಧನೆ ಮಾಡಿದ ಅತೀ ಕಿರಿಯ ಆಟಗಾರ ಎಂದೆನಿಸಿಕೊಂಡಿದ್ದರು.
173 ಎಸೆತ ಎದುರಿಸಿದ ಪೃಥ್ವಿ ಶಾ 14 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 114 ರನ್ ಗಳಿಸಿ ಔಟಾದರು. ಲಾಡ್ 86 ರನ್ ಹೊಡೆದರು.
ಸಂಕ್ಷಿಪ್ತ ಸ್ಕೋರು: ಮುಂಬಯಿ ಪ್ರಥಮ ಇನ್ನಿಂಗ್ಸ್ ಆರು ವಿಕೆಟಿಗೆ 248 (ಪೃಥ್ವಿ ಶಾ 114, ಸಿದ್ಧೇಶ್ ಲಾಡ್ 86, ಅಭಿಷೇಕ್ ನಾಯರ್ 21 ಬ್ಯಾಟಿಂಗ್, ಬಿ. ಅಯ್ಯಪ್ಪ 87ಕ್ಕೆ 3, ವಿಜಯ್ ಕುಮಾರ್ 55ಕ್ಕೆ 2).