ನಾಗ್ಪುರ: ರಣಜಿ ಕ್ವಾರ್ಟರ್‌ಫೈನಲ್ ಪಂದ್ಯಗಳು ಗುರುವಾರದಿಂದ ಆರಂಭವಾಗಲಿದೆ. 4ನೇ ಕ್ವಾರ್ಟರ್‌ಫೈನಲ್ ಕದನದಲ್ಲಿ ಕರ್ನಾಟಕ ಬಲಿಷ್ಠ ಮುಂಬೈ ತಂಡವನ್ನು ಎದುರಿಸಲಿದೆ.
ರಾಜ್ಯ ತಂಡ ಲೀಗ್ ಹಂತದಲ್ಲಿ ಒಟ್ಟಾರೆ 6 ಪಂದ್ಯ ಆಡಿತ್ತು. 4 ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. 2 ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು. ಮುಂಬೈ ಕೂಡ ಲೀಗ್ ಹಂತದಲ್ಲಿ ಒಟ್ಟು 6 ಪಂದ್ಯ ಆಡಿದೆ. 4 ಪಂದ್ಯ ಡ್ರಾಗೊಂಡಿದೆ. 2 ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿತ್ತು. ಒಟ್ಟಾರೆ ಅತೀ ಹೆಚ್ಚು ಸಲ ರಣಜಿ ಟ್ರೋಫಿ ಗೆದ್ದಿರುವ ಮುಂಬೈ ತಂಡ ಕೂಟದಲ್ಲಿ ಬಲಿಷ್ಠ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಂತ ಕರ್ನಾಟಕವೇನು ದುರ್ಬಲವಲ್ಲ. ತಾನೇನು ಅನ್ನುವುದನ್ನು ಲೀಗ್ ಹಂತದಲ್ಲಿಯೇ ತೋರಿಸಿದೆ. ಒಟ್ಟಾರೆ ನಾಗ್ಪುರದಲ್ಲಿ 5 ದಿನ ನಡೆಯಲಿರುವ ಪಂದ್ಯ ಈಗ ಬಾರೀ ಕುತೂಹಲ ಕೆರಳಿಸಿದೆ.
ಇನ್ನು ಕ್ವಾರ್ಟರ್‌ಫೈನಲ್ 1ರಲ್ಲಿ ಗುಜರಾತ್-ಬೆಂಗಾಲ್, ಕ್ವಾರ್ಟರ್‌ಫೈನಲ್ 2ರಲ್ಲಿ ದಿಲ್ಲಿ -ಮಧ್ಯಪ್ರದೇಶ ಹಾಗೂ ಕ್ವಾರ್ಟರ್‌ಫೈನಲ್ 3ರಲ್ಲಿ ಕೇರಳ – ವಿದರ್ಭ ಸೆಣಸಾಟ ನಡೆಸಲಿವೆ.
ಬಲಾಡ್ಯ ರಾಜ್ಯ ತಂಡ : ಕೂಟದುದ್ದಕ್ಕೂ ರಾಜ್ಯ ತಂಡ ಪ್ರಚಂಡ ಪ್ರದರ್ಶನ ನೀಡಿದೆ. ಅದರಲ್ಲೂ ಬ್ಯಾಟ್ಸ್‌ಮನ್‌ಗಳು ರನ್ ಪ್ರವಾಹವನ್ನೇ ಹರಿಸಿದ್ದಾರೆ. ಮಾಯಾಂಕ್ ಅಗರ್ವಾಲ್ ಮಹಾರಾಷ್ಟ್ರ ವಿರುದ್ಧ (304 ರನ್), ದಿಲ್ಲಿ ವಿರುದ್ಧ (176 ರನ್), ಉತ್ತರ ಪ್ರದೇಶ ವಿರುದ್ಧ (133 ರನ್) ಹಾಗೂ ರೈಲ್ವೇಸ್ ವಿರುದ್ಧ (173 ಹಾಗೂ 134 ರನ್) ಸಿಡಿಸಿ ಅಮೋಘ ಫಾರ್ಮ್ನಲ್ಲಿದ್ದಾರೆ. ಮಾಯಾಂಕ್ 5 ಶತಕ ಬಾರಿಸಿದ್ದಾರೆ. ಇದರಲ್ಲಿ ಒಂದು ತ್ರಿಶತಕ ಒಳಗೊಂಡಿದೆ. ಅಲ್ಲದೆ ಸಮರ್ಥ್. ಕೆ.ಗೌತಮ್. ಕರುಣ್ ನಾಯರ್, ಸ್ಟುವರ್ಟ್ ಬಿನ್ನಿ, ಮನೀಶ್ ಪಾಂಡೆ, ಡಿ.ನಿಶ್ಚಲ್ ರಾಜ್ಯ ಕೋಟೆಯ ಬಲಿಷ್ಠ ಬ್ಯಾಟಿಂಗ್ ಕಂಬಗಳು. ಬೌಲಿಂಗ್‌ನಲ್ಲಿ ವೇಗಿ ಅರವಿಂದ್ ವಾಪಸ್ ಆಗಿದ್ದಾರೆ. ಇದು ತಂಡದ ಬಲ ಹೆಚ್ಚಿಸಿದೆ. ಉಳಿದಂತೆ ವಿನಯ್ ಕುಮಾರ್, ಸ್ಪಿನ್ನರ್‌ಗಳಾದ ಶ್ರೇಯಸ್ ಗೋಪಾಲ್, ಕೆ.ಗೌತಮ್ ಯಾವುದೇ ಕ್ಷಣದಲ್ಲೂ ಪಂದ್ಯಕ್ಕೆ ತಿರುವು ನೀಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
ಮುಂಬೈಗೆ ಸೆಮೀಸ್‌ಗೆರುವ ನಿರೀಕ್ಷೆ: ಮುಂಬೈ ತಂಡ ಲೀಗ್ ಹಂತದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹಾಗಂತ ಮುಂಬೈ ತಂಡವನ್ನು ತೀರಾ ನಿರ್ಲಕ್ಷಿಸುವಂತಿಲ್ಲ. ಬಿಸ್ತಾ , ಸೂರ್ಯ ಕುಮಾರ್ ಯಾದವ್, ಆದಿತ್ಯ ತಾರೆ, ಅಖೀಲ್ ಹರ್ವಾಡೆಕರ್ , ಶ್ರೇ¿åಸ್ ಅಯ್ಯರ್ ಬ್ಯಾಟಿಂಗ್‌ನಿಂದ ಮಿಂಚಿದ್ದಾರೆ. ಅನುಭವದಲ್ಲಿ ಕಡಿಮೆಯಾಗಿದ್ದರೂ ಪೃಥ್ವಿ ಶಾ ಎರಡೂ ಶತಕ ಸಿಡಿಸಿ ಗಮನ ಸೆಳದಿದ್ದಾರೆ. ಸಿದ್ಧೇಶ್ ಲಾಡ್ ಕೂಡ 2 ಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಮುಂಬೈ ಬೌಲಿಂಗ್‌ನಲ್ಲಿ ರಚನಾತ್ಮಕ ದಾಳಿ ನಡೆಸಬಲ್ಲ ಧವಳ್ ಕುಲಕರ್ಣಿ, ಕಶ್ ಕೊಥಾರಿ ಅವರನ್ನು ಹೊಂದಿದೆ.
ಕರ್ನಾಟಕ ತಂಡ
ಆರ್.ವಿನಯ್ ಕುಮಾರ್ (ನಾಯಕ), ಕರುಣ್ ನಾಯರ್ (ಉಪ ನಾಯಕ), ಮಾಯಾಂಕ್ ಅಗರ್ವಾಲ್. ಆರ್.ಸಮರ್ಥ್, ಡಿ.ನಿಶ್ಚಲ್, ಸ್ಟುವರ್ಟ್ ಬಿನ್ನಿ, ಸಿ.ಎಂ.ಗೌತಮ್, ಶ್ರೇಯಸ್ ಗೋಪಾಲ್, ಕೆ.ಗೌತಮ್, ಅಭಿಮನ್ಯು ಮಿಥುನ್, ಎಸ್.ಅರವಿಂದ್, ಪವನ್ ದೇಶಪಾಂಡೆ, ಜೆ.ಸುಚಿತ್, ಮೀರ್ ಕೌನೈನ್ ಅಬ್ಟಾಸ್, ಶರತ್ ಶ್ರೀನಿವಾಸ್, ರೋನಿತ್ ಮೋರೆ
ಕರ್ನಾಟಕ ಹಾದಿ
– ಅಸ್ಸಾಂ ವಿರುದ್ಧ ಇನಿಂಗ್ಸ್ ಮತ್ತು 121 ರನ್ ಜಯ
– ಹೈದರಾಬಾದ್ ವಿರುದ್ಧ 59 ರನ್ ಗೆಲುವು
– ಮಹಾರಾಷ್ಟ್ರ ವಿರುದ್ಧ ಇನಿಂಗ್ಸ್ ಮತ್ತು 136 ರನ್ ಜಯ
– ದಿಲ್ಲಿ ವಿರುದ್ಧದ ಪಂದ್ಯ ಡ್ರಾ
– ಉತ್ತರ ಪ್ರದೇಶ ವಿರುದ್ಧದ ಪಂದ್ಯ ಡ್ರಾ
– ರೈಲ್ವೇಸ್ ವಿರುದ್ಧ 209 ರನ್ ಗೆಲುವು
ಮುಂಬೈ ಹಾದಿ
– ಮಧ್ಯಪ್ರದೇಶ ವಿರುದ್ಧ ಪಂದ್ಯ ಡ್ರಾ
– ತಮಿಳುನಾಡು ವಿರುದ್ಧ ಪಂದ್ಯ ಡ್ರಾ
– ಒಡಿಶಾ ವಿರುದ್ಧ 120 ರನ್ ಗೆಲುವು
– ಬರೋಡ ವಿರುದ್ಧ ಪಂದ್ಯ ಡ್ರಾ
– ಆಂಧ್ರಪ್ರದೇಶ ವಿರುದ್ಧ ಪಂದ್ಯ ಡ್ರಾ
– ತ್ರಿಪುರ ವಿರುದ್ಧ 10 ವಿಕೆಟ್ ಗೆಲುವು