ಸೂರತ್: ಪ್ರಸಕ್ತ ರಣಜಿ ಕ್ರಿಕೆಟ್ ಕೂಟದ ಕರ್ನಾಟಕ-ಗುಜರಾತ್ ನಡುವಿನ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಗೊಂಡಿದೆ. ಮೊದಲ ಇನಿಂಗ್ಸ್ ಮುನ್ನಡೆ ಪಡೆದ ರಾಜ್ಯ ತಂಡ 3 ಅಂಕ, ಆತಿಥೇಯ ಗುಜರಾತ್ 1 ಅಂಕ ಪಡೆದುಕೊಂಡಿತು.
ರಾಜ್ಯಕ್ಕೆ ಒಟ್ಟಾರೆ 3ನೇ ಡ್ರಾ. ಡ್ರಾಗೊಂಡ 3 ಪಂದ್ಯಗಳಲ್ಲೂ ವಿನಯ್ ಪಡೆ ಮೊದಲ ಇನಿಂಗ್ಸ್ ಮುನ್ನಡೆ ಅಂಕ ಸಂಪಾದಿಸಿಕೊಂಡಿದೆ. ಮಹಾರಾಷ್ಟ್ರ ವಿರುದ್ಧ ಗೆಲುವು, ಸೌರಾಷ್ಟ್ರ ವಿರುದ್ಧ ಸೋಲು ಅನುಭವಿಸಿತ್ತು. ಮುಂದೆ ಶಿವಮೊಗ್ಗದಲ್ಲಿ ಡಿ.22ರಿಂದ ಆರಂಭವಾಗುವ ಪಂದ್ಯದಲ್ಲಿ ರೈಲ್ವೇಸ್ ಸವಾಲನ್ನು ಕರ್ನಾಟಕ ಎದುರಿಸಲಿದೆ.
ರಾಜ್ಯಕ್ಕೆ 173 ರನ್ ಗುರಿ: ಗುಜರಾತ್ 2ನೇ ಇನಿಂಗ್ಸ್‌ನಲ್ಲಿ 345 ರನ್‌ಗಳಿಸಿ ಆಲೌಟಾಯಿತು. 2ನೇ ಇನಿಂಗ್ಸ್‌ನಲ್ಲಿ ರಾಜ್ಯದ ಗೆಲುವಿಗೆ ಒಟ್ಟು 173 ರನ್ ಗುರಿ ಸಿಕ್ಕಿತ್ತು. ಇದನ್ನು ಬೆನ್ನಟ್ಟಿದ ರಾಜ್ಯಕ್ಕೆ ಆರಂಭಿಕ ಬ್ಯಾಟ್ಸ್‌ಮೆನ್ ಮಾಯಾಂಕ್ ಅಗರ್ವಾಲ್ (53 ರನ್) ಅರ್ಧಶತಕ ಸಿಡಿಸಿ ನೆರವಾಗಿದ್ದು ತಂಡದ ಪರ ದಾಖಲಾದ ವೈಯಕ್ತಿಕ ಶ್ರೇಷ್ಠ ರನ್. 2ನೇ ವಿಕೆಟ್‌ಗೆ ಬಂದ ಆರ್.ಸಮರ್ಥ್ (33 ರನ್) ಸ್ವಲ್ಪ ಗಮನ ಸೆಳೆದರು. ಇವರಿಬ್ಬರೂ ವಿಕೆಟ್ ಕಳೆದುಕೊಂಡ ಬಳಿಕ ರಾಜ್ಯದ ರನ್ ವೇಗ ಕುಸಿಯಿತು. ಒಟ್ಟಾರೆ 107 ರನ್‌ಗಳಿಸುವಷ್ಟರಲ್ಲಿ ರಾಜ್ಯ ತಂಡದ ಪ್ರಮುಖ 4 ವಿಕೆಟ್ ಪತನಗೊಂಡಿದ್ದವು. ದೇವದತ್ ಪಡೀಕ್ಕಲ್ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರೆ ಶ್ರೇಯಸ್ ಗೋಪಾಲ್ ಕೇವಲ 3 ರನ್‌ಗೆ ಪೆವಿಲಿಯನ್‌ಗೆ ನಡೆದರು. ಕೊನೆಯ ಹಂತದಲ್ಲಿ ರಾಜ್ಯ ಆಟಗಾರರಿಗೆ ಬ್ಯಾಟಿಂಗ್‌ನಲ್ಲಿ ಜಾದೂ ಮಾಡಲು ಸಾಧ್ಯವಾಗಲಿಲ್ಲ. ಗುಜರಾತ್ ಪರ ಅಕ್ಷರ್ ಪಟೇಲ್ (45ಕ್ಕೆ3) ವಿಕೆಟ್ ಕಬಳಿಸಿ ರಾಜ್ಯದ ಓಟಕ್ಕೆ ಬ್ರೇಕ್ ಹಾಕಿದರು. ಕೆ.ವಿ.ಸಿದ್ಧಾರ್ಥ್ (10 ರನ್) ಹಾಗೂ ಡಿ.ನಿಶ್ಚಲ್ (1 ರನ್) ಅಜೇಯರಾಗಿ ಉಳಿದರು.
ಶತಕ ವಂಚಿತ ಮನ್‌ಪ್ರೀತ್, ರುಜುಲ್: ಇದಕ್ಕೂ ಮೊದಲು ಅಂತಿಮ ದಿನ 2ನೇ ಇನಿಂಗ್ಸ್ 3 ವಿಕೆಟ್‌ಗೆ 187 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಗುಜರಾತ್ ತೀವ್ರ ಆಘಾತ ಅನುಭವಿಸಿತು. 3ನೇ ದಿನ ಅಜೇಯ 82 ರನ್‌ಗಳಿಸಿ ಕ್ರೀಸ್‌ನಲ್ಲಿದ್ದ ರುಜುಲ್ ಭಾನುವಾರದ ರನ್‌ಗೆ ಕೇವಲ 9 ರನ್‌ಗಳಿಸಿ ಔಟಾದರು. 9 ರನ್‌ಗಳಿಂದ ಶತಕವನ್ನೂ ತಪ್ಪಿಸಿಕೊಂಡರು. ಆಗ ತಂಡದ ಮೊತ್ತ 4 ವಿಕೆಟ್‌ಗೆ 214 ರನ್ ಆಗಿತ್ತು. ಅಂತಿಮ ದಿನ ಮನ್‌ಪ್ರೀತ್ ಜುನೇಜ (98 ರನ್) ಹಾಗೂ ಧ್ರುವ್ ರಾವಲ್ (30 ರನ್) ತಂಡದ ಮೊತ್ತವನ್ನು ಹೆಚ್ಚಿಸಿದರು. ಆದರೆ ಮನ್‌ಪ್ರೀತ್ 98 ರನ್‌ಗಳಿಸಿದ್ದಾಗ ಗೌತಮ್ ಎಸೆತದಲ್ಲಿ ಬೌಲ್ಡ್ ಆದರು. 2 ರನ್ ಅಂತರದಿಂದ ಶತಕ ತಪ್ಪಿಸಿಕೊಂಡು ನಿರಾಸೆ ಅನುಭವಿಸಿದರು. ಗುಜರಾತ್ ಪರ ಅಂತಿಮ ದಿನ ಎರಡು ಶತಕಗಳು ಕೈತಪ್ಪಿದ್ದು ಹೈಲೈಟ್ಸ್.