ಬೆಂಗಳೂರು: ಅಗ್ರ ಕ್ರಮಾಂಕದ ಆಟಗಾರರ ಅಮೋಘ ಬ್ಯಾಟಿಂಗ್ ಹಾಗೂ ಶ್ರೇಯಸ್ ಗೋಪಾಲ್ ಅವರ ಅಜೇಯ ಶತಕದ ನೆರವಿನಿಂದ ಕರ್ನಾಟಕ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಕೂಟದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಉತ್ತರಾಖಂಡ ತಂಡದೆದುರು ಬೃಹತ್ ಮೊತ್ತ ಪೇರಿಸುವತ್ತ ಸಾಗುತ್ತಿದೆ.
ಎರಡನೇ ದಿನದಾಟದ ಅಂತ್ಯಕ್ಕೆ ತಂಡವು ಐದು ವಿಕೆಟ್ ಕಳೆದುಕೊಂಡಿದ್ದು 474 ರನ್ ಗಳಿಸಿದೆ. ಈಗಾಗಲೇ ಆತಿಥೇಯ ತಂಡವು 358 ರನ್ನುಗಳ ಮುನ್ನಡೆ ಸಾಧಿಸಿದೆ.
ವಿಕೆಟ್ ನಷ್ಟವಿಲ್ಲದೇ 123 ರನ್ನುಗಳಿಂದ ದಿನದಾಟ ಆರಂಭಿಸಿದ ಕರ್ನಾಟಕ ತಂಡಉತ್ತಮವಾಗಿ ಆಟ ಮುಂದುವರಿಸಿತ್ತು. ಆರಂಭಿಕರಾದ ರವಿಕುಮಾರ್ ಸಮರ್ಥ್ ಮತ್ತು ನಾಯಕ ಮಾಯಾಂಕ್ ಅಗರ್ವಾಲ್ ಮೊದಲ ವಿಕೆಟಿಗೆ 159 ರನ್ ಪೇರಿಸಿದ ಬಳಿಕ ಬೇರ್ಪಟ್ಟರು. ಆರಂಭದ ನಾಲ್ವರು ಆಟಗಾರರು ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಆದರೆ ಈ ನಾಲ್ವರು ಶತಕ ಪೂರ್ತಿಗೊಳಿಸಲು ವಿಫಲ ರಾದರು.
ಮೊದಲಿಗರಾಗಿ ಔಟಾದ ಅಗರ್ವಾಲ್ 83 ರನ್ ಗಳಿಸಿದರೆ ಸಮರ್ಥ್ 82 ರನ್ ಗಳಿಸಿದರು.ಆರಂಭಿಕರ ಬಳಿಕ ದೇವದತ್ತ ಪಡಿಕ್ಕಲ್ ಮತ್ತು ನಿಕಿನ್ ಜೋಶ್ ಮೂರನೇ ವಿಕೆಟಿಗೆ ಮತ್ತೆ ಶತಕದ (118 ರನ್) ಜತೆಯಾಟದಲ್ಲಿ ಪಾಲ್ಗೊಂಡು ತಂಡವನ್ನು ರಕ್ಷಿಸಿದರು. ಇಬ್ಬರಿಂದಲೂ ಅರ್ಧಶತಕ ದಾಖಲಾಯಿತು. ಆಬಳಿಕ ಶ್ರೇಯಸ್ ಗೋಪಾಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಬಿರುಸಿನ ಆಟವಾಡಿದ ಅವರು ಶತಕ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ. 13 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದ್ದಾರೆ.
ಸಂಕ್ಷಿಪ್ತ ಸ್ಕೋರು: ಉತ್ತರಾಖಂಡ 116; ಕರ್ನಾಟಕ ಮೊದಲ ಇನ್ನಿಂಗ್ಸ್ 5 ವಿಕೆಟಿಗೆ 474 (ಸಮರ್ಥ್ 82, ಅಗರ್ವಾಲ್ 83, ಪಡಿಕ್ಕಲ್ 69, ಜೋಶ್ 62, ಮನೀಷ್ ಪಾಂಡೆ 39, ಶ್ರೇಯಸ್ ಗೋಪಾಲ್ 103 ಬ್ಯಾಟಿಂಗ್, ಮಾಯಾಂಕ್ ಮಿಶ್ರಾ 98ಕ್ಕೆ 3, ಅಭಯ್ ನೇಗಿ 82ಕ್ಕೆ 2).