Advertisement
ಈ ಬಾರಿಯ ರಣಜಿ ಕ್ವಾರ್ಟರ್‌ಫೈನಲ್ಸ್ ಪಂದ್ಯಗಳನ್ನು ಮೊದಲ ಬಾರಿ ನೇರ ಪ್ರಸಾರ ಮಾಡಲಾಗುತ್ತದೆ. ವಿಜಯವಾಡದ ಮೈದಾನದಲ್ಲಿ ಚೊಚ್ಚಲ ರಣಜಿ ಪಂದ್ಯವೊಂದು ನಡೆಯಲಿದ್ದರೆ ಕೇರಳ ಪ್ರಥಮ ಬಾರಿಗೆ ಕ್ವಾರ್ಟರ್‌ಫೈನಲಿಗೇರಿ ಇತಿಹಾಸ ನಿರ್ಮಿಸಿದೆ. ಇದೇ ವೇಳೆ ತಮಿಳುನಾಡು 1955-56ರ ಬಳಿಕ ಲೀಗ್‌ನಲ್ಲಿ ಯಾವುದೇ ಗೆಲುವು ಕಾಣದೇ ಕೇವಲ 11 ಅಂಕ ಗಳಿಸಿ ಹೊರಬಿದ್ದಿದೆ. ಕ್ವಾರ್ಟರ್‌ಫೈನಲ್ಸ್ ಐದು ದಿನಗಳ ಪಂದ್ಯವಾಗಿರುತ್ತದೆ.
41 ಬಾರಿಯ ಚಾಂಪಿಯನ್ ಮುಂಬಯಿ ತಂಡವು ಉತ್ತಮ ಫಾರ್ಮ್ನಲ್ಲಿರುವ ಕರ್ನಾಟಕ ತಂಡವನ್ನು ನಾಗ್ಪುರದಲ್ಲಿ ಎದುರಿಸಲಿದೆ. ಇದೇ ಮೈದಾನದಲ್ಲಿ ಭಾರತವು ಕಳೆದ ವಾರ ಶ್ರೀಲಂಕಾವನ್ನು ಸೋಲಿಸಿತ್ತು. ಲೀಗ್ ಹಂತದಲ್ಲಿ ನಾಲ್ಕು ಗೆಲುವು ಮತ್ತು ಎರಡು ಡ್ರಾ ಸಾಧಿಸಿರುವ ಕರ್ನಾಟಕ ಪ್ರಚಂಡ ಫಾರ್ಮ್ನಲ್ಲಿದೆ. ಮಯಾಂಕ್ ಅಗರ್ವಾಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಈಗಾಗಲೇ 1054 ರನ್ ಪೇರಿಸಿರುವ ಅವರು ಒಂದು ರಣಜಿ ಋತುವಿನಲ್ಲಿ ವಿವಿಎಸ್ ಲಕ್ಷ್ಮಣ್ ಪೇರಿಸಿದ 1415 ರನ್ ಮೊತ್ತವನ್ನು ಅಳಿಸಿ ಹಾಕುವ ಉತ್ಸಾಹದಲ್ಲಿದ್ದಾರೆ. ಆದರೆ ಮುಂಬಯಿ ಕೇವಲ 2ರಲ್ಲಿ ಮಾತ್ರ ಜಯ ಸಾಧಿಸಿದ್ದು ನಾಲ್ಕು ಪಂದ್ಯದಲ್ಲಿ ಡ್ರಾ ಸಾಧಿಸಿತ್ತು. ಹಾಗಾಗಿ ಈ ಪಂದ್ಯ ತೀವ್ರ ಪೈಪೋಟಿಯಿಂದ ಸಾಗುವ ನಿರೀಕ್ಷೆಯಿದೆ. ದಿಲ್ಲಿ-ಮಧ್ಯಪ್ರದೇಶ
ಒಡಿಶಾ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದ ಮಧ್ಯಪ್ರದೇಶವು “ಸಿ’ ಬಣದಲ್ಲಿ ಮುಂಬಯಿ ಜತೆ ತಲಾ 21 ಅಂಕ ಗಳಿಸಿ ಸಮಬಲ ಸಾಧಿಸಿ ಮೊದಲೆರಡು ಸ್ಥಾನ ಪಡೆದವು. ಆದರೆ ಗರಿಷ್ಠ ಗೆಲುವು ಸಾಧಿಸಿದ ಮುಂಬಯಿ ಅಗ್ರಸ್ಥಾನದೊಂದಿಗೆ ಕ್ವಾರ್ಟರ್‌ಫೈನಲಿಗೇರಿತು. ಮಧ್ಯಪ್ರದೇಶವು ಕ್ವಾರ್ಟರ್‌ಫೈನಲ್‌ನಲ್ಲಿ ದಿಲ್ಲಿ ತಂಡವನ್ನು ಎದುರಿಸಲಿದೆ. ಈ ಪಂದ್ಯ ವಿಜಯವಾಡದ ಡಾ| ಗೋಕರಾಜು ಲಿಯಾಲ ಗಂಗರಾಜು ಎಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಇದು ಈ ಮೈದಾನದಲ್ಲಿ ನಡೆಯುವ ಮೊದಲ ರಣಜಿ ಪಂದ್ಯವಾಗಿದೆ.
Related Articles
Advertisement
ತ್ರಿಪುರ ವಿರುದ್ಧ ಭಾರೀ ಅಂತರದ ಗೆಲುವು ದಾಖಲಿಸುವ ಮೂಲಕ ಮುಂಬಯಿ ಬಣದ ಅಗ್ರಸ್ಥಾನ ಪಡೆಯಿತಲ್ಲದೇ ಬರೋಡ ಮತ್ತು ತಮಿಳುನಾಡು ತಂಡವನ್ನು ಹೊರಬೀಳುವಂತೆ ಮಾಡಿತು. ಬರೋಡ ಒಂದು ಪಂದ್ಯ ಗೆಲ್ಲಲು ಶಕ್ತವಾಗಿದ್ದರೆ ತಮಿಳುನಾಡು ಗೆಲುವು ಕಾಣಲೇ ಇಲ್ಲ. 1955-56ರ ಬಳಿಕ ಇದೇ ಮೊದಲ ಬಾರಿ ತಮಿಳುನಾಡು ಲೀಗ್‌ನಲ್ಲಿ ಜಯ ಕಾಣಲು ವಿಫಲವಾಗಿದೆ.
ಕೇರಳ-ವಿದರ್ಭ2011ರಲ್ಲಿ ರಣಜಿ ಟ್ರೋಫಿ ಮಾದರಿಯಲ್ಲಿ ಹೊಸ ನಿಯಮ ಅಳವಡಿಸಿದ ಬಳಿಕ ಕೇರಳ ಮೊದಲ ಬಾರಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ. 31 ಅಂಕ ಗಳಿಸಿರುವ ಕೇರಳ “ಬಿ’ ಬಣದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಸಂಜು ಸ್ಯಾಮ್ಸನ್ ನಾಯಕತ್ವದ ಕೇರಳ ತಂಡ ಕ್ವಾರ್ಟರ್‌ಫೈನಲ್‌ನಲ್ಲಿ ವಿದರ್ಭ ತಂಡವನ್ನು ಎದುರಿಸಲಿದೆ. ಲೀಗ್‌ನಲ್ಲಿ ಆಡಿದ ಆರು ಪಂದ್ಯಗಳಲ್ಲಿ ಗರಿಷ್ಠ 5ರಲ್ಲಿ ಜಯಭೇರಿ ಬಾರಿಸಿರುವ ಗುಜರಾತ್ “ಬಿ’ ಬಣದ ಅಗ್ರಸ್ಥಾನ ಪಡೆದಿದ್ದು ಕ್ವಾರ್ಟರ್‌ಫೈನಲ್‌ನಲ್ಲಿ ಬಂಗಾಲ ತಂಡವನ್ನು ಎದುರಿಸಲಿದೆ. ರಣಜಿ ಕ್ವಾರ್ಟರ್‌ಫೈನಲ್ ವೇಳಾಪಟ್ಟಿ
ದಿನ ತಂಡಗಳು ಸ್ಥಳ
ಡಿ. 7-11 ಗುಜರಾತ್-ಬಂಗಾಲ ಜೈಪುರ
ಡಿ. 7-11 ದಿಲ್ಲಿ-ಮಧ್ಯಪ್ರದೇಶ ವಿಜಯವಾಡ
ಡಿ. 7-11 ಕೇರಳ-ವಿದರ್ಭ ಸೂರತ್
ಡಿ. 7-11 ಕರ್ನಾಟಕ-ಮುಂಬಯಿ ನಾಗ್ಪುರ