Advertisement

ಬಾಬಾ ಇಂದ್ರಜಿತ್‌ ಅಜೇಯ ಶತಕ

10:19 AM Oct 26, 2017 | Team Udayavani |

ಮುಂಬಯಿ: ಮಧ್ಯಮ ಕ್ರಮಾಂಕದ ಆಟಗಾರರಾದ ಬಾಬಾ ಇಂದ್ರಜಿತ್‌ ಮತ್ತು ವಾಷಿಂಗ್ಟನ್‌ ಸುಂದರ್‌ ಅವರ ಜವಾಬ್ದಾರಿಯ ಆಟದಿಂದಾಗಿ ತಮಿಳುನಾಡು ತಂಡವು ಮುಂಬಯಿ ತಂಡದೆದುರಿನ ರಣಜಿ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಲು ಪ್ರಯತ್ನಿಸುತ್ತಿದೆ.

Advertisement

ಮುಂಬಯಿಯ 374 ರನ್ನಿಗೆ ಉತ್ತರವಾಗಿ ತಮಿಳು ನಾಡು ಆರಂಭಿಕ ಆಘಾತದ ಬಳಿಕ ಇಂದ್ರಜಿತ್‌ ಮತ್ತು ಸುಂದರ್‌ ಅವರ ಶತಕದ ಜತೆಯಾಟದಿಂದ ಚೇತರಿಸಿಕೊಂಡಿದ್ದು ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟಿಗೆ 239 ರನ್‌ ಗಳಿಸಿ ಆಡುತ್ತಿದೆ.  ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ತಮಿಳುನಾಡು ಇನ್ನೂ 135 ರನ್‌ ಗಳಿಸಬೇಕಾಗಿದೆ. ಶತಕ ಸಿಡಿಸಿದ ಬಾಬಾ ಇಂದ್ರಜಿತ್‌ ಅವರನ್ನು ತಂಡ ನೆಚ್ಚಿಕೊಂಡಿದೆ.

ಈ ಮೊದಲು 7 ವಿಕೆಟಿಗೆ 314 ರನ್ನಿನಿಂದ ದಿನದಾಟ ಆರಂಭಿಸಿದ ಮುಂಬಯಿ 374 ರನ್‌ ಗಳಿಸಿ ಆಲೌಟಾಯಿತು. ಇದಕ್ಕುತ್ತರವಾಗಿ ತಮಿಳುನಾಡು ಕೂಡ ಆರಂಭದಲ್ಲಿಯೇ ಕುಸಿತ ಕಂಡು ಆಘಾತಕ್ಕೆ ಒಳಗಾಯಿತು. ಅಭಿನವ್‌ ಮುಕುಂದ್‌, ಮುರಳಿ ವಿಜಯ್‌ ತಂಡವನ್ನು ಆಧರಿಸಲು ವಿಫ‌ಲರಾದರು. 69 ರನ್‌ ಗಳಿಸುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡು ತಂಡ ಒದ್ದಾಡುತ್ತಿತ್ತು. 

ಈ ಹಂತದಲ್ಲಿ ಇಂದ್ರಜಿತ್‌ ಅವರನ್ನು ಸೇರಿಕೊಂಡ ವಾಷಿಂಗ್ಟನ್‌ ಸುಂದರ್‌ ತಾಳ್ಮೆಯ ಆಟವಾಡಿ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಮುಂಬಯಿ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಅವರಿಬ್ಬರು ಐದನೇ ವಿಕೆಟಿಗೆ 157 ರನ್‌  ಪೇರಿಸಿದ್ದರಿಂದ ತಮಿಳುನಾಡು ತಿರುಗೇಟು ನೀಡಬಹುದೆಂದು ಭಾವಿಸಲಾಯಿತು. ಉತ್ತಮವಾಗಿ ಆಡುತ್ತಿದ್ದ ಸುಂದರ್‌ 69 ರನ್‌ ಗಳಿಸಿದ ವೇಳೆ ಕುಲಕರ್ಣಿಗೆ ವಿಕೆಟ್‌ ಒಪ್ಪಿಸಿದರು. 

ಈ ನಡುವೆ ಶತಕ ಪೂರ್ತಿಗೊಳಿಸಿದ ಇಂದ್ರಜಿತ್‌ ಈಗಾಗಲೇ 173 ಎಸೆತ ಎದುರಿಸಿದ್ದು 12 ಬೌಂಡರಿ ನೆರವಿನಿಂದ 105 ರನ್‌ ಗಳಿಸಿ ಆಡುತ್ತಿದ್ದಾರೆ. ಅವರೊಂದಿಗೆ ಆರ್‌. ಅಶ್ವಿ‌ನ್‌ 8 ರನ್ನುಗಳೊಂದಿಗೆ ಮೂರನೇ ದಿನದ ಆಟ ಮುಂದುವರಿಸಲಿದ್ದಾರೆ.

Advertisement

ಸಂಕ್ಷಿಪ್ತ ಸ್ಕೋರು 
ಮುಂಬಯಿ 374 (ಪೃಥ್ವಿ ಶಾ 123, ಶ್ರೇಯಸ್‌ ಅಯ್ಯರ್‌ 57, ಸೂರ್ಯಕುಮಾರ್‌ ಯಾದವ್‌ 37, ಆದಿತ್ಯ ತಾರೆ 53, ಎ. ಪಾರ್ಕರ್‌ 33 ಔಟಾಗದೆ, ಆರ್‌. ಅಶ್ವಿ‌ನ್‌ 78ಕ್ಕೆ 3, ವಿ. ಶಂಕರ್‌ 52ಕ್ಕೆ 4, ಮಹೇಶ್‌ 61ಕ್ಕೆ 2); ತಮಿಳುನಾಡು 5 ವಿಕೆಟಿಗೆ 239 (ಇಂದ್ರಜಿತ್‌ 105 ಔಟಾಗದೆ, ವಾಷಿಂಗ್ಟನ್‌ ಸುಂದರ್‌ 69, ಗೋಹಿಲ್‌ 58ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next