Advertisement

ರಣಜಿ ಫೈನಲ್‌: ಗುಜರಾತ್‌ ಗೆಲುವಿಗೆ 312 ರನ್‌ ಸವಾಲು

03:45 AM Jan 14, 2017 | Team Udayavani |

ಇಂದೋರ್‌: ಪಾರ್ಥಿವ್‌ ಪಟೇಲ್‌ ನೇತೃತ್ವದ ಗುಜರಾತ್‌ ತಂಡ ಈ ಸಾಲಿನ ರಣಜಿ ಟ್ರೋಫಿ ಗೆಲ್ಲುವ ಉಜ್ವಲ ಅವಕಾಶವನ್ನು ಪಡೆದಿದೆ. ಹಾಲಿ ಚಾಂಪಿಯನ್‌, ಬಲಿಷ್ಠ ಮುಂಬಯಿ ವಿರುದ್ಧ ನಡೆಯುತ್ತಿರುವ ರಣಜಿ ಕ್ರಿಕೆಟ್‌ ಕೂಟದ ಫೈನಲ್‌ನಲ್ಲಿ ಗುಜರಾತ್‌ ಪ್ರಶಸ್ತಿ ಗೆಲ್ಲಲು 312 ರನ್‌ ಗಳಿಸುವ ಗುರಿ ಪಡೆದಿದೆ. ಮಂದ ಬೆಳಕಿನಿಂದಾಗಿ ನಾಲ್ಕನೇ ದಿನದಾಟ ಬೇಗ ಅಂತ್ಯಗೊಂಡಾಗ ಗುಜರಾತ್‌ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಯಾವುದೇ ವಿಕೆಟ್‌ ಕಳೆದುಕೊಳ್ಳದೇ 47 ರನ್‌ ಗಳಿಸಿದೆ.

Advertisement

ಇನ್ನೊಂದು ದಿನದ ಆಟ ಬಾಕಿ ಉಳಿದಿದ್ದು ಗುಜರಾತ್‌ ಪ್ರಶಸ್ತಿ ಗೆಲುವಿನ ಸಂಭ್ರಮ ಆಚರಿಸಲು ಇನ್ನು 265 ರನ್‌ ಗಳಿಸಬೇಕಾಗಿದೆ. ಈ ವರ್ಷ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿರುವ ಪ್ರಿಯಾಂಕ್‌ ಕಿರೀಟ್‌ ಪಾಂಚಾಲ್‌ 34 ಮತ್ತು ಸಮಿತ್‌ ಗೋಹೆಲ್‌ 8 ರನ್ನಿನಿಂದ ಆಡುತ್ತಿದ್ದಾರೆ. ಬಿರುಸಿನ ಆಟವಾಡಿದ ಪಾಂಚಾಲ್‌ ಈಗಾಗಲೇ 45 ಎಸೆತ ಎದುರಿಸಿದ್ದು 7 ಬೌಂಡರಿ ಬಾರಿಸಿದ್ದಾರೆ. ತಾಳ್ಮೆ ಮತ್ತು ಎಚ್ಚರಿಕೆಯಿಂದ ಆಡಿದರೆ ಗುಜರಾತ್‌ ಸುಲಭವಾಗಿ ಪ್ರಶಸ್ತಿ ಗೆಲ್ಲಬಹುದಾಗಿದೆ. ಕನಿಷ್ಠ ಡ್ರಾ ಸಾಧಿಸಿದರೂ ಗುಜರಾತ್‌ ಮೊದಲ ಬಾರಿಗೆ ರಣಜಿ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಲಿದೆ.

ಈ ಮೊದಲು ಮೂರು ವಿಕೆಟಿಗೆ 208 ರನ್ನಿನಿಂದ ದಿನದಾಟ ಆರಂಭಿಸಿದ ಮುಂಬಯಿ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 411 ರನ್‌ ಗಳಿಸಿ ಆಲೌಟಾಯಿತು. ಆದಿತ್ಯ ತಾರೆ ಮತ್ತು ಅಭಿಷೇಕ್‌ ನಾಯರ್‌ ಅವರ ಉತ್ತಮ ಆಟದಿಂದಾಗಿ ಮುಂಬಯಿಯ ಮೊತ್ತ 400ರ ಗಡಿ ದಾಟುವಂತಾಯಿತು. ಆದರೆ ಗುಜರಾತ್‌ ಮೊದಲ ಇನ್ನಿಂಗ್ಸ್‌ನಲ್ಲಿ 100 ರನ್‌ ಮುನ್ನಡೆ ಸಾಧಿಸಿದ್ದರಿಂದ ಗೆಲುವಿಗೆ 312 ರನ್‌ ಗಳಿಸುವ ಅವಕಾಶ ಪಡೆಯಿತು.

45 ರನ್ನಿನಿಂದ ದಿನದಾಟ ಮುಂದುವರಿಸಿದ ಸೂರ್ಯಕುಮಾರ್‌ ಯಾದವ್‌ 4 ರನ್‌ ಪೇರಿಸಿ ಔಟಾದರು. ಆದರೆ ಆದಿತ್ಯ ತಾರೆ ಮತ್ತು ಅಭಿಷೇಕ್‌ ನಾಯರ್‌ ಅರ್ಧ ಶತಕ ಸಿಡಿಸಿ ತಂಡವನ್ನು ಆಧರಿಸಿದರು. ತಾರೆ 69 ಮತ್ತು ನಾಯರ್‌ 91 ರನ್‌ ಹೊಡೆದರು. 146 ಎಸೆತ ಎದುರಿಸಿದ ನಾಯರ್‌ 5 ಬೌಂಡರಿ ಮತ್ತು 5 ಸಿಕ್ಸರ್‌ ಬಾರಿಸಿ ಕೊನೆಯವರಾಗಿ ಔಟಾದರು.

ಸಂಕ್ಷಿಪ್ತ ಸ್ಕೋರ್‌: ಮುಂಬಯಿ 228 ಮತ್ತು 411 (ಪೃಥ್ವಿ ಶಾ 44, ಶ್ರೇಯಸ್‌ ಅಯ್ಯರ್‌ 82, ಸೂರ್ಯಕುಮಾರ್‌ ಯಾದವ್‌ 49, ಆದಿತ್ಯ ತಾರೆ 69, ಅಭಿಷೇಕ್‌ ನಾಯರ್‌ 91, ಬಲ್ವಿಂದರ್‌ ಸಂಧು 20, ಆರ್‌ಪಿ ಸಿಂಗ್‌ 83ಕ್ಕೆ 2, ಚಿಂತನ್‌ ಗಜ 121ಕ್ಕೆ 6). ಗುಜರಾತ್‌ 328 ಮತ್ತು ವಿಕೆಟ್‌ ನಷ್ಟವಿಲ್ಲದೇ 47 (ಪ್ರಿಯಾಂಕ್‌ ಪಾಂಚಾಲ್‌ 34 ಬ್ಯಾಟಿಂಗ್‌).

Advertisement
Advertisement

Udayavani is now on Telegram. Click here to join our channel and stay updated with the latest news.

Next