Advertisement

ರಣಜಿ ಫೈನಲ್‌: 228ಕ್ಕೆ ಕುಸಿದ ಮುಂಬಯಿ

03:45 AM Jan 11, 2017 | Harsha Rao |

ಇಂದೋರ್‌: ಗುಜರಾತ್‌ ತಂಡದ ಸಂಘಟಿತ ಬೌಲಿಂಗ್‌ ಹಾಗೂ ಅಮೋಘ ಫೀಲ್ಡಿಂಗ್‌ ಸಾಹಸದಿಂದ ಮಂಗಳವಾರ ಇಲ್ಲಿನ “ಹೋಳ್ಕರ್‌ ಕ್ರಿಕೆಟ್‌ ಸ್ಟೇಡಿಯಂ’ನಲ್ಲಿ ಮೊದಲ್ಗೊಂಡ ರಣಜಿ ಫೈನಲ್‌ ಮುಖಾಮುಖೀಯಲ್ಲಿ ಹಾಲಿ ಚಾಂಪಿಯನ್‌ ಮುಂಬಯಿ 228 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಕುಸಿದಿದೆ. ಗುಜರಾತ್‌ಗೆ ಒಂದು ಓವರ್‌ ಆಟವಷ್ಟೇ ಲಭಿಸಿದ್ದು, ವಿಕೆಟ್‌ ನಷ್ಟವಿಲ್ಲದೆ 2 ರನ್‌ ಮಾಡಿದೆ.

Advertisement

ಮುಂಬಯಿ ಕೂಡ ಮೊದಲ ಎಸೆತದಲ್ಲೇ ತಿರುಗೇಟು ನೀಡಲಿತ್ತು. ಶಾದೂìಲ್‌ ಠಾಕೂರ್‌ ಎಸೆತ ಸಮಿತ್‌ ಗೋಹೆಲ್‌ ಬ್ಯಾಟನ್ನು ಸವರಿ ಮೊದಲ ಸ್ಲಿಪ್‌ಗೆ ಚಿಮ್ಮಿ ತಾದರೂ ಕ್ಯಾಚ್‌ ಪಡೆಯುವಲ್ಲಿ ಪೃಥ್ವಿ ಶಾ ವಿಫ‌ಲರಾದರು. ಇದು ಮುಂಬಯಿಗೆ ದುಬಾರಿಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಗೋಹೆಲ್‌ ಪ್ರಸಕ್ತ ರಣಜಿ ಋತುವಿನ ತ್ರಿಶತಕ ವೀರರಲ್ಲಿ ಒಬ್ಬರು ಎಂಬುದನ್ನು ಮರೆಯುವಂತಿಲ್ಲ!

66 ವರ್ಷಗಳ ಬಳಿಕ ರಣಜಿ ಫೈನಲ್‌ ಪ್ರವೇಶಿಸಿದ ಗುಜರಾತ್‌ ಟಾಸ್‌ ಗೆದ್ದು ಬೌಲಿಂಗನ್ನೇ ಆರಿಸಿಕೊಂಡಿತು. ಕಪ್ತಾನ ಪಾರ್ಥಿವ್‌ ಪಟೇಲ್‌ ಅವರ ಈ ನಿರ್ಧಾರವನ್ನು ಬೌಲರ್‌ಗಳು ಸಮರ್ಥಿಸುತ್ತ ಹೋದರು. ಇದಕ್ಕೆ ಫೀಲ್ಡಿಂಗ್‌ ಕೂಡ ಸಾಥ್‌ ಕೊಟ್ಟಿತು. ಮುಂಬಯಿಯ ಇಬ್ಬರು ಆಟಗಾರರು ರನೌಟ್‌ ಆದರು.

ಟೀಮ್‌ ಇಂಡಿಯಾದ ಮಾಜಿ ಬೌಲರ್‌ ರುದ್ರಪ್ರತಾಪ್‌ ಸಿಂಗ್‌, ಮಧ್ಯಮ ವೇಗಿ ಚಿಂತನ್‌ ಗಜ, ಆಫ್ಸ್ಪಿನ್ನರ್‌ ರುಜುಲ್‌ ಭಟ್‌ ಗುಜರಾತಿನ ಯಶಸ್ವಿ ಬೌಲರ್‌ಗಳು. ಇವರು ತಲಾ 2 ವಿಕೆಟ್‌ ಕಿತ್ತರು. ಅದರಲ್ಲೂ ರುಜುಲ್‌ ಅತ್ಯಂತ ಮಿತವ್ಯಯಕಾರಿ ಯಾಗಿದ್ದರು. 5ನೇ ಬೌಲರ್‌ ರೂಪದಲ್ಲಿ ದಾಳಿಗಿಳಿದ ಅವರು ಕೇವಲ 5 ರನ್ನಿತ್ತು 2 ವಿಕೆಟ್‌ ಕಬಳಿಸಿದರು.

ಮತ್ತೆ ಮಿಂಚಿದ ಪೃಥ್ವಿ ಶಾ
ಕೇವಲ 2ನೇ ರಣಜಿ ಪಂದ್ಯವಾಡುತ್ತಿರುವ ಆರಂಭಕಾರ ಪೃಥ್ವಿ ಶಾ ಮುಂಬಯಿ ಸರದಿಯ ಟಾಪ್‌ ಸ್ಕೋರರ್‌. 35ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ಶಾ 93 ಎಸೆತ ಎದುರಿಸಿ 71 ರನ್‌ ಬಾರಿಸಿದರು. ಇದರಲ್ಲಿ 11 ಬೌಂಡರಿ ಒಳ ಗೊಂಡಿತ್ತು. ತಮಿಳುನಾಡು ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ಶಾ, ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿ ಮಿಂಚಿದ್ದರು. ಅದೇ ಫಾರ್ಮನ್ನು ಇಲ್ಲಿಯೂ ಮುಂದುವರಿಸಿದರು.

Advertisement

ಆದರೆ ಪೃಥ್ವಿ ಶಾ ಅವರಿಗೆ ಜತೆಗಾರರಿಂದ ಸೂಕ್ತ ಬೆಂಬಲ ಲಭಿಸಲಿಲ್ಲ. ಮತ್ತೂಬ್ಬ ಆರಂಭಕಾರ ಅಖೀಲ್‌ ಹೆರ್ವಾಡ್ಕರ್‌ (4), ಶ್ರೇಯಸ್‌ ಅಯ್ಯರ್‌ (14) ಬೇಗನೆ ನಿರ್ಗಮಿಸಿದರು. ನಾಯಕ ಆದಿತ್ಯ ತಾರೆ ಗಳಿಕೆ ಕೇವಲ 4 ರನ್‌.

ಮುಂಬಯಿ ಸರದಿಯಲ್ಲಿ ಅರ್ಧ ಶತಕ ಬಾರಿಸಿದ ಮತ್ತೂಬ್ಬ ಆಟಗಾರ ಸೂರ್ಯಕುಮಾರ್‌ ಯಾದವ್‌. ಅವರು 133 ಎಸೆತ ನಿಭಾಯಿಸಿ 57 ರನ್‌ ಹೊಡೆದರು (7 ಬೌಂಡರಿ, 1 ಸಿಕ್ಸರ್‌). ಈ ಸಾಧನೆಯ ವೇಳೆ ಯಾದವ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 4 ಸಾವಿರ ರನ್‌ ಪೂರ್ತಿಗೊಳಿಸಿದರು.

ಕೊನೆಯವರಾಗಿ ಔಟಾದ ಅಭಿಷೇಕ್‌ ನಾಯರ್‌ (35), ಸಿದ್ದೇಶ್‌ ಲಾಡ್‌ (23) ತಂಡದ ಮೊತ್ತಕ್ಕೆ ಅಲ್ಪ ಕಾಣಿಕೆ ಸಲ್ಲಿಸಿದರು.

ಸಂಕ್ಷಿಪ್ತ ಸ್ಕೋರ್‌: ಮುಂಬಯಿ-228 (ಪೃಥ್ವಿ ಶಾ 71, ಸೂರ್ಯಕುಮಾರ್‌ ಯಾದವ್‌ 57, ಅಭಿಷೇಕ್‌ ನಾಯರ್‌ 35, ಸಿದ್ದೇಶ್‌ ಲಾಡ್‌ 23, ರುಜುಲ್‌ ಭಟ್‌ 5ಕ್ಕೆ 2, ಚಿಂತನ್‌ ಗಜ 46ಕ್ಕೆ 2, ಆರ್‌ಪಿ ಸಿಂಗ್‌ 48ಕ್ಕೆ 2). ಗುಜರಾತ್‌-ವಿಕೆಟ್‌ ನಷ್ಟವಿಲ್ಲದೆ 2.

Advertisement

Udayavani is now on Telegram. Click here to join our channel and stay updated with the latest news.

Next